Search


ಸಿದ್ದರಾಮಯ್ಯರಿಗೆ ಮೋಸ ಮಾಡಿದ ಸತೀಶ್‌ ಜಾರಕಿಹೊಳಿಗೆ ಶಾಪ ತಟ್ಟಿದೆ ಎಂದ ಶಾಸಕ ಯತ್ನಾಳ್‌

ಬಾಗಲಕೋಟೆ: ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಶಾಸಕರ ಸಹಿ ಮಾಡಿಸಿಕೊಟ್ಟವರೇ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಕೈಕೊಟ್ಟಿದ್ದಕ್ಕೆ ಸತೀಶ್ ಜಾರಕಿಹೊಳಿಗೆ ಅವರ ಶಾಪ ತಟ್ಟಿದೆ ಎನಿಸುತ್ತಿದೆ ಎಂದು ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

ಬಾಗಲಕೋಟೆಯಲ್ಲಿ ಸತೀಶ್ ಜಾರಕಿಹೊಳಿ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿರುವ ಕುರಿತು ಪ್ರತಿಕ್ರಿಯಿಸಿದ ಯತ್ನಾಳ್, ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ವಿಚಾರದಲ್ಲಿ 36 ಶಾಸಕರ ಸಹಿ ಮಾಡಿಸಿ ಕೊಟ್ಟವರೇ ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಲು ಏನು ಕಾರಣ ಎಂಬುದನ್ನು ಕಾಂಗ್ರೆಸ್ ನಾಯಕರು ಜನತೆಗೆ ಸ್ಪಷ್ಟಪಡಿಸಬೇಕು. ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ವಿಚಾರದಲ್ಲಿ ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್ ಹಾಗೂ ಜಮೀರ್ ಅಹ್ಮದ್ ಸೇರಿದಂತೆ ಹಲವು ನಾಯಕರು ಮಾತನಾಡಿದ್ದರು. ಆದರೆ, ಸಿದ್ದರಾಮಯ್ಯ ಅವರನ್ನು ಯಾವ ಕಾರಣಕ್ಕಾಗಿ ಬದಲಾಯಿಸಬೇಕು ಎಂಬುದನ್ನು ಜನತೆಗೆ ಹೇಳಬೇಕಲ್ಲವೇ? ಹೈಕಮಾಂಡ್‌ಗೆ ಹೆಚ್ಚಿನ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಅವರನ್ನು ತೆಗೆದ್ರಾ? ಎಂದು ಯತ್ನಾಳ್ ಪ್ರಶ್ನಿಸಿದರು.

ಸತೀಶ್ ಜಾರಕಿಹೊಳಿ ಅವರು ಎರಡು-ಮೂರು ತಪ್ಪುಗಳನ್ನು ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಕೈಕೊಟ್ಟಿದ್ದು ತಪ್ಪು. ಸಿದ್ದರಾಮಯ್ಯ ಅವರು ಯಾರನ್ನು ಹೆಚ್ಚು ನಂಬಿದ್ದರೋ, ಅವರಿಂದಲೇ ಕೈಕೊಡಿಸಿಕೊಂಡಿರುವುದು ದುರ್ದೈವದ ಸಂಗತಿ ಎಂದು ಯತ್ನಾಳ್ ಹೇಳಿದರು. ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್ ಮತ್ತು ಜಮೀರ್ ಅಹ್ಮದ್ ಮೂವರೂ ಸಿದ್ದರಾಮಯ್ಯ ಅವರಿಗೆ ಕೈಕೊಟ್ಟಿದ್ದಾರೆ ಎಂದು ಯತ್ನಾಳ್ ಆರೋಪಿಸಿದರು.

By Ravikumar - 15-09-2026


Ads in Post