Search


ಲಕ್ಷಾಂತರ ಶುಲ್ಕ ಕಟ್ಟಿ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿದ್ರೆ ಬಿಪಿಎಲ್ ಕಾರ್ಡ್ ರದ್ದು? ಯುವಕನ ಆಗ್ರಹ

ಬೆಂಗಳೂರು: ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಲಕ್ಷಾಂತರ ರೂಪಾಯಿ ಶುಲ್ಕ ಪಾವತಿಸುವ ಸಾಮರ್ಥ್ಯ ಹೊಂದಿರುವ ಕುಟುಂಬಗಳು ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿನ) ಪಡಿತರ ಚೀಟಿ ಹೊಂದಿರುವುದನ್ನು ಸರ್ಕಾರ ಪರಿಶೀಲಿಸಬೇಕು ಎಂಬ ಆಗ್ರಹ ಕೇಳಿಬಂದಿದೆ. ಈ ಕುರಿತು ಶಿವಮೊಗ್ಗ ಜಿಲ್ಲೆಯ ಹೊಸನಗರದ ಯುವಕನೊಬ್ಬ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು, ಅನರ್ಹ ಕುಟುಂಬಗಳ ಬಿಪಿಎಲ್ ಕಾರ್ಡ್‌ಗಳನ್ನು ಪರಿಶೀಲಿಸಿ ರದ್ದುಗೊಳಿಸುವಂತೆ ಮನವಿ ಮಾಡಿದ್ದಾನೆ.

ಯುವಕನ ವಾದವೇನು?

ಖಾಸಗಿ ಶಾಲೆಗಳಿಗೆ ಲಕ್ಷಾಂತರ ರೂಪಾಯಿ ಡೊನೇಷನ್ ಹಾಗೂ ಶುಲ್ಕ ಪಾವತಿಸಿ ಮಕ್ಕಳನ್ನು ಓದಿಸಲು ಸಾಧ್ಯವಾಗುವ ಕುಟುಂಬಗಳು ಆರ್ಥಿಕವಾಗಿ ಸಬಲರಾಗಿರುತ್ತಾರೆ. ಹೀಗಿರುವಾಗ ಅವರು ಬಿಪಿಎಲ್ ವರ್ಗಕ್ಕೆ ಹೇಗೆ ಸೇರುತ್ತಾರೆ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಯುವಕ ತನ್ನ ಪತ್ರದಲ್ಲಿ ಪ್ರಶ್ನಿಸಿದ್ದಾನೆ.

ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ಗುರುತಿಸಿ ರದ್ದುಗೊಳಿಸಿದರೆ, ಸರ್ಕಾರದ ಉಚಿತ ಪಡಿತರ ಸೇರಿದಂತೆ ವಿವಿಧ ಸೌಲಭ್ಯಗಳು ನಿಜವಾದ ಅರ್ಹ ಬಡ ಕುಟುಂಬಗಳಿಗೆ ತಲುಪಲು ಸಾಧ್ಯವಾಗುತ್ತದೆ ಎಂಬುದು ಆತನ ಅಭಿಪ್ರಾಯ. ಜೊತೆಗೆ, ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟ ಸುಧಾರಿಸಲು ಹಾಗೂ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ಇದು ಉತ್ತೇಜನ ನೀಡಬಹುದು ಎಂದು ಆತ ಮನವಿ ಮಾಡಿದ್ದಾನೆ.

ನೆಟ್ಟಿಗರಲ್ಲೂ ಭಿನ್ನಾಭಿಪ್ರಾಯ

ಯುವಕನ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಈ ವಿಚಾರದಲ್ಲಿ ನೆಟ್ಟಿಗರಿಂದ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲವರು ಅನರ್ಹ ಬಿಪಿಎಲ್ ಕಾರ್ಡ್‌ಗಳ ಪರಿಶೀಲನೆ ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಕೆಲವರು, ಬಡ ಕುಟುಂಬಗಳ ಮಕ್ಕಳು ಖಾಸಗಿ ಶಾಲೆಗಳಲ್ಲಿ ಓದುವುದನ್ನು ಆಧರಿಸಿ ಬಿಪಿಎಲ್ ಕಾರ್ಡ್ ರದ್ದುಪಡಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ನಿರೀಕ್ಷಿತ ಮಟ್ಟದ ಶಿಕ್ಷಣ ಸಿಗದ ಹಿನ್ನೆಲೆಯಲ್ಲಿ ಕೆಲ ಪೋಷಕರು ಸಾಲ ಮಾಡಿಕೊಂಡಾದರೂ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಾರೆ. ಹೀಗಾಗಿ ಮಕ್ಕಳ ಶಿಕ್ಷಣದ ಆಯ್ಕೆಯನ್ನು ಮಾತ್ರ ಆಧಾರವಾಗಿಸಿಕೊಂಡು ಕುಟುಂಬದ ಆರ್ಥಿಕ ಸ್ಥಿತಿಯನ್ನು ನಿರ್ಧರಿಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

By Ravikumar - 07-10-2026


Ads in Post