ನವದೆಹಲಿ: E20 ಪೆಟ್ರೋಲ್ ಬಳಕೆಯಿಂದ ವಾಹನಗಳ ಇಂಜಿನ್ ಹಾಳಾಗುತ್ತೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕುರಿತು ಅನೇಕ ವಾಹನ ಮಾಲೀಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ಆರೋಪಗಳ ನಡುವೆ, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಂಗಳವಾರ ಟೀಕಾಕಾರರಿಗೆ ಬಹಿರಂಗ ಸವಾಲು ಹಾಕಿದ್ದಾರೆ. E20 ಮಿಶ್ರಿತ ಪೆಟ್ರೋಲ್ ಬಳಸಿ ಇಂಜಿನ್ ಹಾಳಾಗಿರುವ ಒಂದು ಕಾರು ತೋರಿಸಿ ಎಂದು ಸವಾಲು ಹಾಕಿದ್ದಾರೆ.
ನವದೆಹಲಿಯಲ್ಲಿ ನಡೆದ 'ವಿಕಸಿತ್ ಭಾರತ್ ಕಾನ್ಕ್ಲೇವ್' ಅನ್ನು ಉದ್ದೇಶಿಸಿ ಮಾತನಾಡಿದ ಗಡ್ಕರಿ, ಕಚ್ಚಾ ತೈಲದ ಮೇಲಿನ ಭಾರತದ ಅವಲಂಬನೆಯು ಆರ್ಥಿಕ ಹೊರೆಯಾಗಿದೆ - ಇಂಧನ ಆಮದುಗಾಗಿ ವಾರ್ಷಿಕ 22 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ ಮತ್ತು ಇದು ಪರಿಸರಕ್ಕೆ ಅಪಾಯ. ರಾಷ್ಟ್ರದ ಪ್ರಗತಿಗೆ ಶುದ್ಧ ಇಂಧನ ಅಳವಡಿಕೆ ಅತ್ಯಂತ ನಿರ್ಣಾಯಕ ಎಂಸೂ ಹೇಳಿದರು.
ಇಂಜಿನ್ ಹಾಳಾದ ಒಂದು ಕಾರು ತೋರಿಸಿ
ಮುಂದುವರಿದು ಮಾತನಾಡಿದ ಗಡ್ಕರಿ "E20 ಪೆಟ್ರೋಲ್ನಿಂದಾಗಿ ಒಂದೇ ಒಂದು ಕಾರಿಗೆ ಸಮಸ್ಯೆಯಾದ ಪ್ರಕರಣ ವರದಿಯಾಗಿಲ್ಲ. E20 ಪೆಟ್ರೋಲ್ ಬಳಕೆಯಿಂದಾಗಿ ಸಮಸ್ಯೆಗಳನ್ನು ಎದುರಿಸಿದ ಯಾವುದೇ ಕಾರು ದೇಶದಲ್ಲಿ ಇದೆಯೇ? ಒಂದನ್ನು ತೋರಿಸಿ, ಹೆಚ್ಚಿನ ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆ ಬಗ್ಗೆ ಸುಳ್ಳು ನಿರೂಪಣೆಗಳನ್ನು ಹರಡಲಾಗುತ್ತಿದೆ. ಇವು ಪೇಯ್ಡ್ ಅಭಿಯಾನಗಳಾಗಿವೆ" ಎಂದು ಅವರು ಹೇಳಿದರು.
ಭಾರತವು ಈಗಾಗಲೇ ಪೆಟ್ರೋಲ್ನೊಂದಿಗೆ ಶೇ. 20 ರಷ್ಟು ಎಥೆನಾಲ್ ಮಿಶ್ರಣವನ್ನು ಯಶಸ್ವಿಯಾಗಿ ಸಾಧಿಸಿದೆ. ಇದು ಪರಿಣಾಮಕಾರಿಯಾಗಿ ಉರಿಯುವ ಇಂಧನವಾಗಿದೆ. ಆಮದು ಮಾಡಿಕೊಂಡ ಕಚ್ಚಾ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ ಎಂದರು.
ಮಕ್ಕಳ ಮೇಲಿನ ಆರೋಪಕ್ಕೆ ಗಡ್ಕರಿ ಉತ್ತರ
ಗಡ್ಕರಿ ಅವರ ಕುಟುಂಬ ಸದಸ್ಯರ ಒಡೆತನದ ಕಂಪನಿಗಳು ಎಥೆನಾಲ್ ಉತ್ಪಾದನೆಯಲ್ಲಿ ತೊಡಗಿಕೊಂಡಿವೆ. ಅದಕ್ಕಾಗಿಯೇ ಅವರು ಎಥೆನಾಲ್ ಮಿಶ್ರಿತ ಪೆಟ್ರೋಲ್ ಅನ್ನು ಬಳಸುವಂತೆ ಒತ್ತಾಯಿಸುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು, ನಮ್ಮ ಕುಟುಂಬ ಸದಸ್ಯರು ಸಕ್ಕರೆ ಕಾರ್ಖಾನೆಗಳನ್ನು ಹೊಂದಿದ್ದಾರೆ ನಿಜ. ಆದರೆ ಅವರ ಕಂಪನಿಗಳು ಎಥೆನಾಲ್ ಉತ್ಪಾದನೆಯ ಮೇಲೆ ಅವಲಂಬಿತವಾಗಿಲ್ಲ ಎಂದರು.