ಸಿದ್ದರಾಮನಹುಂಡಿ ಎಂಬ ಕುಗ್ರಾಮದಲ್ಲಿ ಹುಟ್ಟಿ , ರಾಜ್ಯದ ಅತ್ಯುನ್ನತ ಸ್ಥಾನಕ್ಕೆ ಏರಿದ ಸಿದ್ದರಾಮಯ್ಯನವರು ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ, ಈ ಮೂಲಕ ಕರ್ನಾಟಕ ರಾಜಕೀಯದ ಅತ್ಯಂತ ಪ್ರಭಾವಶಾಲಿ ಮತ್ತು ಧೀಮಂತ ನಾಯಕನ ಸುವರ್ಣ ಅಧ್ಯಾಯವೊಂದು ಮುಕ್ತಾಯಗೊಂಡಿದೆ. ತಾವು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು ಕೂಡ ರಾಜ್ಯ ರಾಜಕಾರಣದಲ್ಲಿ ಸಕ್ರಿಯನಾಗಿರುವೆ ಎಂದಿರುವ ಸಿದ್ದು, ಕೋಮುವಾದಿ ಶಕ್ತಿಗಳ ವಿರುದ್ದ ಹೋರಾಟ ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ.
ಲೋಕಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ ನಂತರ ಮಾಧ್ಯಮ ಸುದ್ದಿಗೋಷ್ಟಿ ನಡೆಸಿದ ಸಿದ್ದರಾಮಯ್ಯ ತಮ್ಮ ರಾಜಕೀಯ ಪಯಣವನ್ನ ಮೆಲುಕು ಹಾಕಿದರು. "2006ರಲ್ಲಿ ನಾನು ಕಾಂಗ್ರೆಸ್ ಸೇರಿದ್ದೆ. 2006ರಿಂದ ಕಾರ್ಯಕರ್ತರು, ಶಾಸಕರು, ಸಂಸದರು ಸೇರಿ ಎಲ್ಲರೂ ಪ್ರೀತಿ ತೋರಿಸಿದ್ದಾರೆ, ಅವಕಾಶ ಕಲ್ಪಸಿಕೊಟ್ಟಿದ್ದಾರೆ. ಅವರಿಗೆಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ. 2013ರಿಂದ 18ರವರೆಗೆ ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದೆ. ಬಳಿಕ 2023ರಿಂದ ಇಲ್ಲಿವರೆಗೆ ಸಿಎಂ ಆಗಿದ್ದೆ. ಸಿಎಂ ಆಗಿದ್ದಾಗ ನನ್ನ ಜತೆ ಕೆಲಸ ಮಾಡಿದವರು ಸಹಕರಿಸಿದವರಿಗೆ ಧನ್ಯವಾದ ಅರ್ಪಿಸಿದರು.
ಸಮಾಜದಲ್ಲಿನ ಅಸಮಾನತೆಯನ್ನ ತೊಡೆದು ಹಾಕಬೇಕು ಎಂದು ಹೇಳಿದ ಸಿಎಂ " ಇಡೀ ಸಮಾಜ ಕುವೆಂಪು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು ಎಂದು ಬಯಸಿದವನು ನಾನು, ಸಮಾಮತೆಯ ಸಮಾಜ ನಿರ್ಮಾಣ ಆಗಬೇಕು. ಸಮಾನತೆಯ ಅವಕಾಶ ಎಲ್ಲರಿಗೂ ಸಿಗಬೇಕು. ಸಮಾನ ಅವಕಾಶ ಇಲ್ಲದಿರುವುದರಿಂದಲೇ ನಮ್ಮ ಸಮಾಜದಲ್ಲಿ ಅಸಮಾನತೆ ನೋಡುತ್ತಿದ್ದೇವೆ. ಈ ಅಸಮಾನತೆ ತೊಲಗಬೇಕಾದರೆ ಎಲ್ಲರಿಗೂ ಸಮಾನತೆಯ ಅವಕಾಶ ಸಿಗಲೇಬೇಕು ಎಂದರು.
ಸಂವಿಧಾನವಿಲ್ಲದಿದ್ದರೆ ಕುರಿ ಮೇಯಿಸಿಕೊಂಡು ಇರುತ್ತಿದ್ದೆ..!
ಇನ್ನು 2006ರಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಘಟನೆಯ ಬಗ್ಗೆ ಮಾತನಾಡಿದ ಸಿದ್ದು " ಅಂದು 8 ಜನ ಶಾಸಕರು ನನ್ನ ಜತೆ ಕಾಂಗ್ರೆಸ್ ಸೇರಿದ್ದರು, ಯಾರು ನನ್ನ ಜತೆ ಅಂದು ಕಾಂಗ್ರೆಸ್ ಸೇರಿದರೋ ಅವರಿಗೆ ನಾನು ಚಿರರುಣಿ. ನಾನು ಕೊನೆಯುಸಿರಿನವರೆಗೂ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಮಾಡುತ್ತೇನೆ. ಸಂವಿಧಾನ ಇವೆಲ್ಲಕ್ಕೂ ಕೂಡ ವಿರುದ್ಧವಾಗಿದೆ. ಸಂವಿಧಾನದಲ್ಲಿ ನಂಬಿಕೆ ಇಟ್ಟಿದ್ದೇನೆ. ಒಂದು ವೇಳೆ ಸಂವಿಧಾನ ಇಲ್ಲದೆ ಹೋಗಿದ್ದರೆ ವಿದ್ಯಾವಂತ ಆಗುತ್ತಿರಲಿಲ್ಲ, ಯಾವ ಹುದ್ದೆಯನ್ನೂ ಅಲಂಕರಿಸಲಾಗುತ್ತಿರಲಿಲ್ಲ. ಕುರಿ ಮೇಯಿಸಿಕೊಂಡು ಇರುತ್ತಿದ್ದೆ. ನನ್ನ ತಂದೆ-ತಾಯಿ ಅವಿದ್ಯಾವಂತರು. ಸಂವಿಧಾನಕ್ಕೆ ಯಾರೇ ಧಕ್ಕೆ ತಂದರೂ ಅವರ ವಿರುದ್ಧ ಹೋರಾಡುತ್ತೇನೆ. ಜನರ ಸಮಾನತೆಯನ್ನು ಕಾಪಾಡುವ ಕೆಲಸ ಮಾಡುತ್ತೇನೆ ಎಂದರು.
ರಾಷ್ಟ್ರ ರಾಜಕಾರಣಕ್ಕೆ ಹೋಗಲ್ಲ..!
ರಾಷ್ಟ್ರ ರಾಜಕಾರಣಕ್ಕೆ ಹೋಗ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದು "ಹೈಕಮಾಂಡ್ ನಾಯಕರು ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ಆಹ್ವಾನಿಸಿದರು, ಆದರೆ ಅದನ್ನು ನಾನು ನಯವಾಗಿ ತಿರಸ್ಕರಿಸಿದ್ದೇನೆ, ನನಗೆ ಅದರಲ್ಲಿ ಆಸಕ್ತಿ ಇಲ್ಲ. ಜನ ನನ್ನನ್ನು 5 ವರ್ಷದ ಅವಧಿಗೆ ಶಾಸಕನಾಗಿ ಆಯ್ಕೆ ಮಾಡಿದ್ದಾರೆ, ಅಲ್ಲಿಯವರೆಗೂ ಅವರ ಸೇವೆ ಮಾಡುತ್ತೇನೆ ಎಂದು ಸಿಎಂ ರಾಜ್ಯಸಭೆಗೆ ಹೋಗುವು ಊಹಪೋಹಗಳಿಗೆ ಇತೀಶ್ರಿ ಹಾಡಿದರು.