ಬೆಂಗಳೂರು: ರಾಜ್ಯಾದ್ಯಂತ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆ ಚುರುಕುಗೊಂಡಿದ್ದು, ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ ಮನೆಗೆ ತೆರಳಿ ಮತದಾರರ ಮಾಹಿತಿಯನ್ನು ಪರಿಶೀಲಿಸುತ್ತಿದ್ದಾರೆ. ಮತದಾರರ ಪಟ್ಟಿಯಲ್ಲಿನ ದೋಷಗಳನ್ನು ಸರಿಪಡಿಸುವುದು ಹಾಗೂ ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ರಾಜ್ಯದ ಸುಮಾರು 43 ಲಕ್ಷ ಮತದಾರರಿಗೆ QR ಕೋಡ್ ಒಳಗೊಂಡ ನೋಟಿಸ್ಗಳನ್ನು ನೇರವಾಗಿ ಮನೆಗಳಿಗೆ ತಲುಪಿಸಲಾಗುತ್ತದೆ. ನೋಟಿಸ್ ಸ್ವೀಕರಿಸಿದವರು ಅಗತ್ಯ ದಾಖಲೆಗಳನ್ನು ಆನ್ಲೈನ್ ಮೂಲಕ ಸಲ್ಲಿಸಬೇಕಾಗುತ್ತದೆ.
ನೋಟಿಸ್ನಲ್ಲಿ ವಿಚಾರಣೆಯ ದಿನಾಂಕ, ಸಮಯ ಹಾಗೂ ಸ್ಥಳದ ವಿವರಗಳನ್ನು ನಮೂದಿಸಲಾಗುತ್ತದೆ. ನಿಗದಿತ ಅವಧಿಯಲ್ಲಿ ಮತದಾರರು ಸಂಬಂಧಿಸಿದ ಬೂತ್ಗೆ ತೆರಳಿ ಮತದಾರರ ನೋಂದಣಿ ಅಧಿಕಾರಿ (ERO) ಮುಂದೆ ಖುದ್ದಾಗಿ ಹಾಜರಾಗಬೇಕಾಗುತ್ತದೆ. ಹಾಜರಾಗುವ ವೇಳೆ ಆಧಾರ್ ಕಾರ್ಡ್ ಜೊತೆಗೆ ಅಗತ್ಯವಿರುವ ಮತ್ತೊಂದು ದಾಖಲೆಯನ್ನು ಸಲ್ಲಿಸಲು ಅವಕಾಶವಿರಲಿದೆ. ವಿಚಾರಣೆಗೆ ಹಾಜರಾಗದೆ ಇದ್ದರೆ ಮತದಾರರ ಪಟ್ಟಿಯಲ್ಲಿನ ಹೆಸರಿನ ಕುರಿತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
BLOಗಳು ನೋಟಿಸ್ ವಿತರಿಸುವ ಸಂದರ್ಭದಲ್ಲಿ ಜಿಯೋ-ಫೆನ್ಸಿಂಗ್ ಆಧಾರಿತ ಫೋಟೋ ತೆಗೆದು ಅಪ್ಲೋಡ್ ಮಾಡಲಿದ್ದಾರೆ. ERO ಮುಂದೆ ಹಾಜರಾದ ಬಳಿಕ ಮತದಾರರು ರಿಜಿಸ್ಟರ್ಗೆ ಸಹಿ ಮಾಡಬೇಕಾಗುತ್ತದೆ. ವಿಚಾರಣಾ ಕೇಂದ್ರಕ್ಕೆ ಮತದಾರರು ಹಾಜರಾದ ಫೋಟೋವನ್ನೂ ERO ಆಯೋಗದ ವ್ಯವಸ್ಥೆಗೆ ಅಪ್ಲೋಡ್ ಮಾಡಲಿದ್ದಾರೆ. ಈ ಮೂಲಕ 43 ಲಕ್ಷ ಮತದಾರರ ದಾಖಲೀಕರಣ ಪ್ರಕ್ರಿಯೆ ಹಂತ ಹಂತವಾಗಿ ನಡೆಯಲಿದೆ. ನೋಟಿಸ್ ವಿತರಣೆ ಕುರಿತ ಮಾಹಿತಿಯನ್ನು ಪ್ರತಿ ಮತಗಟ್ಟೆಯಲ್ಲೂ ಪ್ರಕಟಿಸಲಾಗುತ್ತದೆ.
ಮತದಾರರ ದತ್ತಾಂಶ ಪರಿಶೀಲನೆ ವೇಳೆ ಸುಮಾರು 23 ಲಕ್ಷ ಅನಾಮಲಿಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟು ಒಂಬತ್ತು ರೀತಿಯ ಅನಾಮಲಿಗಳನ್ನು ಸಾಫ್ಟ್ವೇರ್ ಮೂಲಕ ಗುರುತಿಸಲಾಗಿದೆ. ಮತದಾರರ ಒಪ್ಪಿಗೆಯಿಲ್ಲದೆ ಅವರ ದತ್ತಾಂಶ ಅಥವಾ ಮಾಹಿತಿಯನ್ನು ಪರಿಷ್ಕರಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಮತದಾರರಿಗೆ ನೋಟಿಸ್ ನೀಡಿ, ಅಗತ್ಯ ದಾಖಲೆಗಳ ಮೂಲಕ ಮಾಹಿತಿಯನ್ನು ಪರಿಶೀಲಿಸಲಾಗುತ್ತದೆ.
ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 24ರಂದು ಪ್ರಕಟಿಸಲಾಗುತ್ತದೆ. ಅದೇ ದಿನದಿಂದ ನೋಟಿಸ್ ವಿತರಣೆ ಹಾಗೂ ದಾಖಲೆಗಳ ಪರಿಶೀಲನಾ ಪ್ರಕ್ರಿಯೆ ಆರಂಭವಾಗಲಿದೆ. ಕರಡು ಪಟ್ಟಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಜೊತೆಗೆ ಪ್ರದೇಶಾನುಸಾರ ಮರಾಠಿ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳನ್ನೂ ಬಳಸಲಾಗುತ್ತದೆ.
ಮತದಾರರು ದಾಖಲೆ ಸಲ್ಲಿಸಲು ಹಾಗೂ ಆಕ್ಷೇಪಣೆಗಳನ್ನು ದಾಖಲಿಸಲು ಅಕ್ಟೋಬರ್ 22ರವರೆಗೆ ಅವಕಾಶವಿದೆ. ಇದೇ ವೇಳೆ ಫಾರಂ-6 ಸಲ್ಲಿಸಿರುವವರ ದಾಖಲೆಗಳ ಪರಿಶೀಲನೆಯೂ ಆಗಸ್ಟ್ 24ರಿಂದ ಆರಂಭವಾಗಲಿದೆ. ಅರ್ಹತೆ ದೃಢಪಟ್ಟ ಬಳಿಕ ಅವರ ಹೆಸರುಗಳನ್ನು ಅಂತಿಮ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗುತ್ತದೆ.