ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ಒಗ್ಗಟ್ಟಾಗಿ ಹೋರಾಡಬೇಕೆಂದು AIMIM ಅಧ್ಯಕ್ಷ ಅಸದುದ್ದೀನ್ ಓವೈಸಿ ಸಮಾಜವಾದಿ ಪಕ್ಷ (ಎಸ್ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ಮೈತ್ರಿಯ ಆಹ್ವಾನ ನೀಡಿದ್ದಾರೆ.
ಕಳೆದೊಂದು ದಶಕದಿಂದ ಉತ್ತರಪ್ರದೇಶದಲ್ಲಿ ಬಿಜೆಪಿ ಆಡಳಿತದಲ್ಲಿದ್ದು, ಮೂರನೇ ಬಾರಿಯು ಚುನಾವಣೆಯನ್ನ ಗೆದ್ದು ಬಿಗುವ ವಿಶ್ವಾಸದಲ್ಲಿದೆ. ಆದರೆ ಈ ಬಾರಿ ಸಮಾಜವಾದಿ ಪಕ್ಷ ಚುನಾವಣೆಯಲ್ಲಿ ಶತಾಯ-ಗತಾಯ ಗೆಲ್ಲಲೇಬೇಕು ಎಂದು ಹಠತೊಟ್ಟಿದ್ದು. ಇದೀಗ ಈ ಪ್ರಯತ್ನಕ್ಕೆ AIMIM ಕೈಜೋಡಿಸುವ ಸಾಧ್ಯತೆ ಇದೆ. ಈ ಕುರಿತು AIMIM ಪಕ್ಷದ ಸ್ಥಾಪಕ ಓವೈಸಿ ಮಾತನಾಡಿದ್ದು "ಈಗಲೇ ಒಂದಾಗಿ ಚುನಾವಣೆ ಎದುರಿಸಿ. ನಂತರ ಸೋಲಿನ ಬಗ್ಗೆ ಅಳಬೇಡಿ" ಎಂದು ಹೇಳಿದ್ದಾರೆ. ಬಿಜೆಪಿ ವಿರುದ್ಧ ಮತಗಳ ವಿಭಜನೆ ಆಗದಂತೆ ಎಲ್ಲಾ ವಿರೋಧ ಪಕ್ಷಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕೆಂಬುದು ಅವರ ಅಭಿಪ್ರಾಯವಾಗಿದೆ.
ಆದರೆ ಓವೈಸಿ ಅವರ ಈ ಪ್ರಸ್ತಾಪವನ್ನು ಸಮಾಜವಾದಿ ಪಕ್ಷ ತಿರಸ್ಕರಿಸಿದೆ. AIMIM ಜೊತೆ ಮೈತ್ರಿ ಮಾಡಿಕೊಳ್ಳುವ ಯಾವುದೇ ಯೋಜನೆ ಇಲ್ಲ ಎಂದು ಎಸ್ಪಿ ನಾಯಕರು ಸ್ಪಷ್ಟಪಡಿಸಿದ್ದು, ತಮ್ಮ ಪಕ್ಷವು ಸ್ವಂತ ಬಲ ಮತ್ತು ಈಗಿರುವ ರಾಜಕೀಯ ಸಮೀಕರಣದೊಂದಿಗೆ ಚುನಾವಣೆಯನ್ನು ಎದುರಿಸುವ ವಿಶ್ವಾಸ ವ್ಯಕ್ತಪಡಿಸಿದೆ.
ಉತ್ತರ ಪ್ರದೇಶದ ರಾಜಕೀಯದಲ್ಲಿ ಮುಸ್ಲಿಂ ಮತಗಳ ಪ್ರಭಾವ ಪ್ರಮುಖವಾಗಿರುವ ಹಿನ್ನೆಲೆಯಲ್ಲಿ ಓವೈಸಿ ಅವರ ಈ ಪ್ರಸ್ತಾಪ ಚರ್ಚೆಗೆ ಗ್ರಾಸವಾಗಿದೆ. ಆದರೆ ಸಮಾಜವಾದಿ ಪಕ್ಷದ ನಿರಾಕರಣೆಯಿಂದ AIMIM-ಎಸ್ಪಿ ಮೈತ್ರಿ ಸಾಧ್ಯತೆ ಸದ್ಯಕ್ಕೆ ದೂರವಾಗಿರುವಂತಾಗಿದೆ. 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಮುನ್ನ ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಮಹತ್ವದ ಚರ್ಚೆಗೆ ಕಾರಣವಾಗಿದೆ.