ಅಮೆರಿಕದ ನ್ಯೂಜೆರ್ಸಿಯ ಮೆಟ್ಲೈಫ್ ಸ್ಟೇಡಿಯಂನಲ್ಲಿ ಜುಲೈ 19ರಂದು ನಡೆದ 2026ರ ಫಿಫಾ ವಿಶ್ವಕಪ್ ಫೈನಲ್ನಲ್ಲಿ ಸ್ಪೇನ್ ತಂಡ ಅರ್ಜೆಂಟೀನಾವನ್ನು 1-0 ಗೋಲುಗಳಿಂದ ಮಣಿಸಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ನಿಗದಿತ 90 ನಿಮಿಷಗಳ ಆಟದಲ್ಲಿ ಉಭಯ ತಂಡಗಳಿಂದ ಯಾವುದೇ ಗೋಲು ದಾಖಲಾಗದ ಕಾರಣ ಪಂದ್ಯ ಹೆಚ್ಚುವರಿ ಸಮಯಕ್ಕೆ ಸಾಗಿತು. ಅಂತಿಮವಾಗಿ ಹೆಚ್ಚುವರಿ ವೇಳೆಯಲ್ಲಿ ಫೆರಾನ್ ಟೊರೆಸ್ ಬಾರಿಸಿದ ಏಕೈಕ ಗೋಲು ಸ್ಪೇನ್ಗೆ ಚಿನ್ನದ ಕ್ಷಣವನ್ನು ತಂದುಕೊಟ್ಟಿತು.
ಪಂದ್ಯದ 106ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿದಿದ್ದ ಫೆರಾನ್ ಟೊರೆಸ್, ನಿಕೋ ವಿಲಿಯಮ್ಸ್ ನೀಡಿದ ಪಾಸ್ ಅನ್ನು ಗೋಲಾಗಿ ಪರಿವರ್ತಿಸಿ ಸ್ಪೇನ್ಗೆ ಐತಿಹಾಸಿಕ ಗೆಲುವು ತಂದುಕೊಟ್ಟರು. ಇದಕ್ಕೂ ಮೊದಲು ಹೆಚ್ಚುವರಿ ಸಮಯದ ಆರಂಭದಲ್ಲೇ ಅರ್ಜೆಂಟೀನಾದ ಎಂಜೊ ಫೆರ್ನಾಂಡಿಸ್ ಎರಡನೇ ಹಳದಿ ಕಾರ್ಡ್ ಪಡೆದು ಮೈದಾನ ತೊರೆದ ಪರಿಣಾಮ ಅರ್ಜೆಂಟೀನಾ 10 ಆಟಗಾರರೊಂದಿಗೆ ಆಡಬೇಕಾಯಿತು. ಇಡೀ ಪಂದ್ಯದಲ್ಲಿ ಸ್ಪೇನ್ ಚೆಂಡಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತ್ತು. ಸುಮಾರು 65 ಶೇಕಡಾ ಸಮಯ ಚೆಂಡು ಸ್ಪೇನ್ ಆಟಗಾರರ ನಿಯಂತ್ರಣದಲ್ಲೇ ಇತ್ತು. ಸ್ಪೇನ್ನ ಬಲಿಷ್ಠ ರಕ್ಷಣಾತ್ಮಕ ಆಟದ ಮುಂದೆ ಅರ್ಜೆಂಟೀನಾಗೆ ಗೋಲುಪೆಟ್ಟಿಗೆಯತ್ತ ಪರಿಣಾಮಕಾರಿ ಪ್ರಯತ್ನ ನಡೆಸಲು ಸಾಧ್ಯವಾಗಲಿಲ್ಲ.
ಇನ್ನು ಈ ಗೆಲುವಿನೊಂದಿಗೆ ಸ್ಪೇನ್ ತನ್ನ ಇತಿಹಾಸದ ಎರಡನೇ ಫಿಫಾ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿದೆ. ಇದಕ್ಕೂ ಮೊದಲು 2010ರಲ್ಲಿ ಮೊದಲ ಬಾರಿ ವಿಶ್ವಕಪ್ ಎತ್ತಿಹಿಡಿದಿದ್ದ ಲಾ ರೋಜಾ, ಇದೀಗ 16 ವರ್ಷಗಳ ಬಳಿಕ ಮತ್ತೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಜೊತೆಗೆ ಪುರುಷರ (2026) ಹಾಗೂ ಮಹಿಳೆಯರ (2023) ವಿಶ್ವಕಪ್ ಟ್ರೋಫಿಗಳನ್ನು ಒಂದೇ ಸಮಯದಲ್ಲಿ ಹೊಂದಿರುವ ಮೊದಲ ದೇಶ ಎಂಬ ದಾಖಲೆಯನ್ನೂ ನಿರ್ಮಿಸಿದೆ.
ಕಮರಿತು ಅರ್ಜೆಂಟೀನಾ ಕನಸು..!
ಇತ್ತ 2022ರ ವಿಶ್ವಕಪ್ ಚಾಂಪಿಯನ್ ಅರ್ಜೆಂಟೀನಾ ಸತತ ಎರಡನೇ ಬಾರಿ ಪ್ರಶಸ್ತಿ ಗೆದ್ದು ಹೊಸ ಇತಿಹಾಸ ಬರೆಯುವ ಕನಸು ಕಂಡಿತ್ತು. ಆದರೆ ಸ್ಪೇನ್ನ ಶಿಸ್ತಿನ ಆಟದ ಮುಂದೆ ಆ ಕನಸು ಭಗ್ನಗೊಂಡಿತು. ಪರಿಣಾಮ, ಬ್ಯಾಕ್-ಟು-ಬ್ಯಾಕ್ ವಿಶ್ವಕಪ್ ಗೆದ್ದ ತಂಡಗಳ ಪಟ್ಟಿಯಲ್ಲಿ ಇಟಲಿ ಮತ್ತು ಬ್ರೆಜಿಲ್ ಮಾತ್ರ ಉಳಿದಿವೆ.