ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವತಿಯಿಂದ ವಿಕಾಸಸೌಧದಲ್ಲಿ ಆಯೋಜಿಸಿದ್ದ ಸರ್ವಪಕ್ಷ ಜನಪ್ರತಿನಿಧಿಗಳ ಮಹತ್ವದ ಸಭೆಯಲ್ಲಿ ಬೆಂಗಳೂರಿನ ಘನ ತ್ಯಾಜ್ಯ ನಿರ್ವಹಣೆ (Solid Waste Management) ಹಾಗೂ ಕಸದ ಸಮಸ್ಯೆ ಕುರಿತು ಗಂಭೀರ ಚರ್ಚೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು, ನಗರದ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡುವ ವಿಚಾರದಲ್ಲಿ ಸಾರ್ವಜನಿಕರು ಹಾಗೂ ಅಧಿಕಾರಿಗಳಿಗೆ ಖಡಕ್ ಸಂದೇಶ ನೀಡಿದ್ದಾರೆ.
ನಗರದ ಪ್ರತಿಯೊಂದು ಮನೆ ಬಾಗಿಲಿಗೂ ಕಸ ಸಂಗ್ರಹಿಸುವ ವಾಹನ ತಲುಪುವಂತೆ ನೋಡಿಕೊಳ್ಳುವುದು ಜಿಬಿಎಯ ಪ್ರಮುಖ ಜವಾಬ್ದಾರಿಯಾಗಿದೆ. ಸಾರ್ವಜನಿಕರು ಕಡ್ಡಾಯವಾಗಿ ಕಸವನ್ನು ಕಸ ಸಂಗ್ರಹಿಸುವ ವಾಹನಕ್ಕೇ ನೀಡಬೇಕು ಎಂದು ಸಚಿವರು ಸೂಚಿಸಿದರು. ಒಂದು ವೇಳೆ ಸಮಯದ ಅಭಾವವಿದ್ದರೆ, ಮನೆಯ ಕಾಂಪೌಂಡ್ ಬಳಿ ಕಸವನ್ನು ಇಟ್ಟರೂ ಸಿಬ್ಬಂದಿ ಅದನ್ನು ಸಂಗ್ರಹಿಸಲಿದ್ದಾರೆ ಎಂದು ತಿಳಿಸಿದರು.
ಆದರೆ ರಸ್ತೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ಯಾವುದೇ ದಾಕ್ಷಣ್ಯ ತೋರದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೃಷ್ಣಬೈರೇಗೌಡ ಎಚ್ಚರಿಕೆ ನೀಡಿದರು. ನಗರದ ರಸ್ತೆಬದಿಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕಸದ ರಾಶಿಗಳಿಗೆ ಮುಕ್ತಿ ನೀಡಿ, ಸ್ವಚ್ಛ ಮತ್ತು ಸುಂದರ ಬೆಂಗಳೂರನ್ನು ನಿರ್ಮಿಸುವ ಉದ್ದೇಶದಿಂದ ಸರ್ಕಾರ ಹಾಗೂ ಜಿಬಿಎ ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿವೆ ಎಂದು ಅವರು ಹೇಳಿದರು.
ಕೃಷ್ಣಬೈರೇಗೌಡ ಅವರ ನೇರ ನಿರ್ದೇಶನದ ಮೇರೆಗೆ ಈ ಸರ್ವಪಕ್ಷ ಸಭೆಯನ್ನು ಕರೆಯಲಾಗಿತ್ತು. ಬೆಂಗಳೂರಿನ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಭೇದಾಭಿಪ್ರಾಯಗಳನ್ನು ಬದಿಗೊತ್ತಿ ಎಲ್ಲಾ ಜನಪ್ರತಿನಿಧಿಗಳನ್ನು ಒಂದೇ ವೇದಿಕೆಗೆ ತರುವುದು ಸಭೆಯ ಪ್ರಮುಖ ಉದ್ದೇಶವಾಗಿತ್ತು. ರಾಜಧಾನಿಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳ ಶಾಸಕರು, ಸಂಸದರು, ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರನ್ನು ಸಭೆಗೆ ಆಹ್ವಾನಿಸಲಾಗಿತ್ತು.
ಸಭೆಯಲ್ಲಿ ನಗರದಲ್ಲಿ ಬಾಕಿ ಉಳಿದಿರುವ ಮೂಲಸೌಕರ್ಯ ಕಾಮಗಾರಿಗಳು, ರಸ್ತೆ ಗುಂಡಿಗಳ ದುರಸ್ತಿ, ಸಂಚಾರ ದಟ್ಟಣೆ ನಿಯಂತ್ರಣ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಜನಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲಾಯಿತು. ಜೊತೆಗೆ, ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದ ಹೊಸ ಯೋಜನೆಗಳ ಪ್ರಸ್ತಾವನೆಗಳನ್ನೂ ಮಂಡಿಸಲಾಯಿತು. ಪಕ್ಷಭೇದ ಮರೆತು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಬೆಂಗಳೂರನ್ನು ಸುಂದರ, ಸ್ವಚ್ಛ ಹಾಗೂ ಉತ್ತಮ ಮೂಲಸೌಕರ್ಯ ಹೊಂದಿದ ನಗರವನ್ನಾಗಿ ರೂಪಿಸಬಹುದು. ಜಿಬಿಎ ಆಯೋಜಿಸಿರುವ ಈ ಒಗ್ಗಟ್ಟಿನ ಚರ್ಚಾ ವೇದಿಕೆ ಮಹತ್ವದ ಯಶಸ್ಸು ಕಂಡಿದೆ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.