Search


ಭೀಕರ ಭೂಕಂಪ ಕಟ್ಟಡಗಳು ನೆಲಸಮ: ಫಿಲಿಪೈನ್ಸ್‌, ಜಪಾನ್‌, ಇಂಡೋನೇಷಿಯಾಗಳಲ್ಲಿ ಹೈ ಅಲರ್ಟ್‌

ಫಿಲಿಪೈನ್ಸ್‌ನ ದಕ್ಷಿಣ ಭಾಗದಲ್ಲಿ  7.8 ತೀವ್ರತೆಯ ಪ್ರಭಲ ಭೂಕಂಪ ಸಂಭವಿಸಿದ್ದು, ಈ ದುರಂತದಲ್ಲಿ ಕನಿಷ್ಠ ಓರ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಭೂಕಂಪದ ಪರಿಣಾಮ ಹಲವಾರು ಕಟ್ಟಡಗಳು ಕುಸಿದು ಬಿದ್ದಿದ್ದು, ಫಿಲಿಪೈನ್ಸ್‌ ಸೇರಿದಂತೆ ಇಂಡೋನೇಷ್ಯಾ, ತೈವಾನ್, ಪಲಾವ್, ಪಪುವಾ ನ್ಯೂಗಿನಿಯಾ ಮತ್ತು ಜಪಾನ್ ದೇಶಗಳಲ್ಲಿ ಸುನಾಮಿ ಎಚ್ಚರಿಕೆ ಘೋಷಿಸಲಾಗಿದೆ.

ಅಮೆರಿಕದ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ (USGS) ಪ್ರಕಾರ, ಭೂಕಂಪವು ಫಿಲಿಪೈನ್ಸ್‌ ನ ಮಿಂಡನಾವೊ ದ್ವೀಪದ ಸರಂಗಾನಿ ಪ್ರಾಂತ್ಯದಿಂದ ಸುಮಾರು 24 ಕಿಲೋಮೀಟರ್ ಪಶ್ಚಿಮ ಭಾಗದ ಸಮುದ್ರದಲ್ಲಿ ಸಂಭವಿಸಿದೆ. ಭೂಕಂಪದ ತೀವ್ರತೆ ಹೆಚ್ಚು ಇದ್ದ ಕಾರಣ ಹಲವು ಪ್ರದೇಶಗಳಿಗೆ ಭೂಕಂಪನ ಅನುಭವವಾಗಿದೆ. ಈಗಾಗಲೇ ರಕ್ಷಣಾ ಕಾರ್ಯಚರಣೆ ಆರಂಭವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಪಾನ್‌ ಸಮುದ್ರದಲ್ಲಿ ಅಲೆಗಳ ಅಬ್ಬರ; ಸುನಾಮಿ ಎಚ್ಚರಿಕೆ

ಭೂಕಂಪದ ಬಳಿಕ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ಮುಂದಿನ ಮೂರು ಗಂಟೆಗಳ ಅವಧಿಯಲ್ಲಿ ಜಪಾನ್‌, ಫಿಲಿಪೈನ್ಸ್‌, ಇಂಡೋನೇಷ್ಯಾ, ಪಲಾವ್, ತೈವಾನ್ ಮತ್ತು ಪಪುವಾ ನ್ಯೂಗಿನಿಯಾ ಕರಾವಳಿ ಪ್ರದೇಶಗಳಿಗೆ ಸುನಾಮಿ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ಇದರಿಂದ ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ಫಿಲಿಪೈನ್ಸ್‌ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್. ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದು, ಶಾಲೆಗಳಿಗೆ ರಜೆ ಘೋಷಿಸಿದ್ದಾರೆ. ಜೊತೆಗೆ ಕರಾವಳಿ ಪ್ರದೇಶದ ನಿವಾಸಿಗಳಿಗೆ ತಕ್ಷಣ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಸೂಚನೆ ನೀಡಿದ್ದಾರೆ. ಅತ್ತ ಇಂಡೋನೇಷ್ಯಾ ಸರ್ಕಾರ ಮತ್ತು ಜಪಾನ್‌ ಸರ್ಕಾರಗಳು ಸುನಾಮಿ ಎಚ್ಚರಿಕೆ ನೀಡಿದ್ದು, ತಕ್ಷಣವೇ ಜನರು ಕರಾವಳಿ ಪ್ರದೇಶದಿಂದ ದೂರಕ್ಕೆ ತೆರಳುವಂತೆ ಸೂಚಿಸಲಾಗಿದೆ.


 

By Ravikumar - 08-06-2026


Ads in Post