Search


ಶಾಲೆಯ ಶಿಕ್ಷಕಿಯನ್ನ 27 ಬಾರಿ ಇರಿದು ಕೊಲೆ ಮಾಡಿದ ವಿದ್ಯಾರ್ಥಿಗಳು

ಹೈದರಾಬಾದ್: ಆಚಾರ್ಯ ದೇವೋಭವ ಎಂದು ಶಿಕ್ಷಕರನ್ನ ದೇವರ ಸ್ವರೂಪ ಎಂದು ಪೂಜಿಸುವ ಸಮಾಜದಲ್ಲಿ ವಿದ್ಯಾರ್ಥಿಗಳು ಶಿಕ್ಷಕಿಯನ್ನ 27 ಭಾರಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಅಘಾತಕಾರಿ ಘಟನೆ ತೆಲಂಗಾಣದ ನಲ್ಗೊಂಡ ಬಳಿ ನಡೆದಿದೆ. ಮೃತ ಶಿಕ್ಷಕಿಯನ್ನ ಕಲ್ಲು ರೂಪಾ ರೆಡ್ಡಿ ಎಂದು ಗುರುತಿಸಿದ್ದು, ಅವರು ಕೊಂಡಮಲ್ಲೇಪಲ್ಲಿಯಲ್ಲಿರುವ ನಾಗಾರ್ಜುನ ಪಬ್ಲಿಕ್ ಶಾಲೆಯ ಪ್ರಾಂಶುಪಾಲರು ಮತ್ತು ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಕಲ್ಲು ರೂಪಾ ರೆಡ್ಡಿಯವರನ್ನು ಆ.11 ರಂದು ಹತ್ಯೆ ಮಾಡಲಾಗಿತ್ತು. ಹೈದರಾಬಾದ್‌ನಲ್ಲಿದ್ದ ಅವರ ಪತಿ ಕರೆ ಮಾಡಿದಾಗ ಪ್ರತಿಕ್ರಿಯಿಸದೇ ಇದ್ದಾಗ ನೆರೆಹೊರೆಯವರಿಗೆ ಮಾಹಿತಿ ನೀಡಿದ್ದರು. ಆಗ ನೆರೆಹೊರೆಯವರು ಮನೆ ಬಳಿ ನೋಡಿದಾಗ ಅವರ ಶವ ಪತ್ತೆಯಾಗಿತ್ತು. ಈ ಬಗ್ಗೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಪೊಲೀಸರು ಈ ಪ್ರಕರಣದ ತನಿಖೆಗೆ ಐದು ತಂಡಗಳನ್ನು ರಚಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳು, ವಿಧಿವಿಜ್ಞಾನ ಸಾಕ್ಷ್ಯಗಳು, ಬೆರಳಚ್ಚುಗಳು, ತಾಂತ್ರಿಕ ದತ್ತಾಂಶ ಮತ್ತು ಶಂಕಿತರ ಚಲನವಲನಗಳನ್ನು ಪರಿಶೀಲಿಸಿ, 80 ಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಿದ್ದರು.

ರೂಪಾ ರೆಡ್ಡಿ ತನ್ನ ಚಿಕ್ಕಮ್ಮನೊಂದಿಗೆ ಮಾತನಾಡುವಾಗ ‘ಬಾಬು’ ಎಂಬ ಪದವನ್ನು ಬಳಸಿದ್ದರು. ನಂತರ ಫೋನ್ ಸ್ವಿಚ್ ಆಫ್ ಆಗಿತ್ತು. ಈ ಪದದಿಂದ ಯಾರನ್ನು ಉಲ್ಲೇಖಿಸಿರಬಹುದು ಎಂದು ಜಾಡು ಹಿಡಿದು ಹೊರಟ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿತ್ತು. ಶಾಲೆಯಲ್ಲಿದ್ದ ವಿದ್ಯಾರ್ಥಿಗಳ ವಿಚಾರಣೆ ನಡೆಸಿದ ಪೊಲೀಸರಿಗೆ ಕೊಲೆಯಾದ ದಿನ ಶಾಲೆಗೆ ಗೈರಾಗಿದ್ದ 5 ವಿದ್ಯಾರ್ಥಿಗಳ ಮಾಹಿತಿ ಸಿಕ್ಕಿತ್ತು, ಇವರ ಪೈಕಿ ಇಬ್ಬರು ವಿದ್ಯಾರ್ಥಿಗಳು ಕೆಲವು ದಿನಗಳಿಂದ ಎತೇಚ್ಚವಾಗಿ ಹಣ ಖರ್ಚು ಮಾಡುತ್ತ, ಪಾರ್ಟಿ ಮಾಡುತ್ತಿದ್ದರು ಎಂದು ಮಾಹಿತಿ ದೊರೆತಿತ್ತು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಗಿದೆ..

ತಿಳುವಳಿಕೆ ಹೇಳಿದ್ದಕ್ಕೆ ಕೊಲೆ ಶಂಕೆ

ಕೊಲೆ ಆರೋಪ ಹೊತ್ತ ಈ ವಿದ್ಯಾರ್ಥಿಗಳ ಬ್ಯಾಗ್‌ಗಳಲ್ಲಿ ಹಿಂದೆ ನಗದು ಮತ್ತು ಮೊಬೈಲ್ ಫೋನ್ ಪತ್ತೆಯಾಗಿದ್ದವು. ಈ ಬಗ್ಗೆ ರೂಪಾ ರೆಡ್ಡಿಯವರು ವಿದ್ಯಾರ್ಥಿಗಳ ಪೋಷಕರಿಗೆ ಮಾಹಿತಿ ನೀಡಿದ್ದರು. ಅಲ್ಲದೇ ಅವರನ್ನು ಹಾಸ್ಟೆಲ್‌ನಿಂದ ಮನೆಗೆ ಕಳುಹಿಸಲಾಗಿತ್ತು. ಇದು ಪ್ರಾಂಶುಪಾಲರ ವಿರುದ್ಧ ಅಸಮಾಧಾನಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಜೊತೆಗೆ ಇದೊಂದು ಉದ್ದೇಶಪೂರ್ವಕ ಕೊಲೆಯಾಗಿದ್ದು, ವಿದ್ಯಾರ್ಥಿಗಳು ಕೈಗವಸು ಮತ್ತು ಮಂಕಿ ಕ್ಯಾಪ್‌ ಧರಿಸಿ ಶಿಕ್ಷಕಿ ಮನೆಗೆ ಬಂದಿದ್ದರು ಎಂದು ತಿಳಿದು ಬಂದಿದೆ.

By Ravikumar - 20-08-2026


Ads in Post