Search


ಎಕೆ-203 ರೈಫಲ್‌ಗಳಿಗೆ ಮದ್ದುಗುಂಡು ಪೂರೈಕೆ; ಅದಾನಿ ಡಿಫೆನ್ಸ್ ಜೊತೆ 5 ವರ್ಷಗಳ ಒಪ್ಪಂದ

ನವದೆಹಲಿ: ಭಾರತದಲ್ಲಿ ತಯಾರಾಗುತ್ತಿರುವ ಎಕೆ-203 ಅಸಾಲ್ಟ್ ರೈಫಲ್‌ಗಳಿಗೆ ದೇಶೀಯವಾಗಿ ಉತ್ಪಾದಿಸಲಾದ 7.62x39 ಮಿಮೀ ಮದ್ದುಗುಂಡುಗಳನ್ನು ಪೂರೈಸಲು ಅದಾನಿ ಡಿಫೆನ್ಸ್ ಮತ್ತು ಏರೋಸ್ಪೇಸ್ ಸಂಸ್ಥೆ ಇಂಡೋ-ರಷ್ಯನ್ ರೈಫಲ್ಸ್ ಪ್ರೈವೇಟ್ ಲಿಮಿಟೆಡ್ (IRRPL) ಜತೆ ಐದು ವರ್ಷಗಳ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ.

ಒಪ್ಪಂದದ ಪ್ರಕಾರ, ಎಕೆ-203 ಯೋಜನೆಗೆ ಅಗತ್ಯವಿರುವ ಸಣ್ಣ ಗಾತ್ರದ ಮದ್ದುಗುಂಡುಗಳನ್ನು ಅದಾನಿ ಡಿಫೆನ್ಸ್ ಮುಂದಿನ ಐದು ವರ್ಷಗಳ ಕಾಲ ಪೂರೈಸಲಿದೆ. ಇದರಿಂದ ಮದ್ದುಗುಂಡುಗಳ ಪೂರೈಕೆಗೆ ದೇಶೀಯ ಮೂಲ ಲಭ್ಯವಾಗುವುದರ ಜೊತೆಗೆ, ಒಪ್ಪಂದದ ಅವಧಿಯುದ್ದಕ್ಕೂ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.

ಈ ಒಪ್ಪಂದದ ಮೂಲಕ ಇಂಡೋ-ರಷ್ಯನ್ ರೈಫಲ್ಸ್ ಸಂಸ್ಥೆಯ ರೈಫಲ್ ಉತ್ಪಾದನೆ ಹಾಗೂ ಅದಾನಿ ಡಿಫೆನ್ಸ್‌ನ ಮದ್ದುಗುಂಡು ತಯಾರಿಕೆ ಒಂದೇ ಯೋಜನೆಯಡಿ ಸಂಪರ್ಕಗೊಳ್ಳಲಿದೆ. ಇದರೊಂದಿಗೆ ಭಾರತದ ರಕ್ಷಣಾ ಉತ್ಪಾದನಾ ವ್ಯವಸ್ಥೆಯಲ್ಲಿ ಎಕೆ-203 ಯೋಜನೆಯ ಎರಡು ಪ್ರಮುಖ ಘಟಕಗಳು ದೇಶೀಯ ಮಟ್ಟದಲ್ಲಿ ಮತ್ತಷ್ಟು ಬಲಗೊಳ್ಳಲಿವೆ. ಭಾರತೀಯ ಸಶಸ್ತ್ರ ಪಡೆಗಳಿಗಾಗಿ ಎಕೆ-203 ರೈಫಲ್‌ಗಳನ್ನು ತಯಾರಿಸುವ ಉದ್ದೇಶದಿಂದ ಭಾರತ ಮತ್ತು ರಷ್ಯಾ ಸರ್ಕಾರಗಳ ನಡುವಿನ ಒಪ್ಪಂದದಡಿ 2019ರಲ್ಲಿ ಇಂಡೋ-ರಷ್ಯನ್ ರೈಫಲ್ಸ್ ಪ್ರೈವೇಟ್ ಲಿಮಿಟೆಡ್ ಸ್ಥಾಪಿಸಲಾಗಿತ್ತು. ಇದರ ಉತ್ಪಾದನಾ ಘಟಕವು ಉತ್ತರ ಪ್ರದೇಶದ ಅಮೇಠಿ ಜಿಲ್ಲೆಯ ಕೊರ್ವಾದಲ್ಲಿದೆ.

ಎಕೆ-203 ರೈಫಲ್‌ಗಳ ದೇಶೀಯ ಉತ್ಪಾದನೆಯ ಜವಾಬ್ದಾರಿಯನ್ನು ರಕ್ಷಣಾ ಸಚಿವಾಲಯವು IRRPLಗೆ ವಹಿಸಿದೆ. ಕೊರ್ವಾ ಘಟಕದಲ್ಲಿ 6.01 ಲಕ್ಷ ಎಕೆ-203 ರೈಫಲ್‌ಗಳನ್ನು ತಯಾರಿಸಲು 2021ರ ಡಿಸೆಂಬರ್‌ನಲ್ಲಿ ಸರ್ಕಾರ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಸ್ಥಳೀಯವಾಗಿ ತಯಾರಾಗುವ ರೈಫಲ್‌ಗಳಿಗೆ ದೇಶೀಯವಾಗಿ ಉತ್ಪಾದಿಸಲಾದ ಮದ್ದುಗುಂಡುಗಳನ್ನು ಬಳಸುವುದರಿಂದ ಎಕೆ-203 ಯೋಜನೆಯ ಸ್ವದೇಶಿ ಉತ್ಪಾದನಾ ವ್ಯಾಪ್ತಿ ಮತ್ತಷ್ಟು ವಿಸ್ತರಿಸಲಿದೆ ಎಂದು ಕಂಪನಿ ಹೇಳಿದೆ.

ಅದಾನಿ ಡಿಫೆನ್ಸ್ ಭಾರತದಲ್ಲಿ ಸಣ್ಣ ಗಾತ್ರದ ಮದ್ದುಗುಂಡುಗಳ ಉತ್ಪಾದನಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದು, ಕಾನ್ಸುರದಲ್ಲಿ ಉತ್ಪಾದನಾ ಘಟಕವನ್ನು ಹೊಂದಿದೆ. ಹೊಸ ಒಪ್ಪಂದವು ದೇಶದ ಸಣ್ಣ ಶಸ್ತ್ರಾಸ್ತ್ರಗಳ ಪೂರೈಕೆ ಸರಣಿಯಲ್ಲಿ ದೇಶೀಯ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ. ಇದರ ಜೊತೆಗೆ, ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಕೇಂದ್ರ ಸರ್ಕಾರದ 'ಆತ್ಮನಿರ್ಭರ ಭಾರತ' ಉಪಕ್ರಮಕ್ಕೂ ಈ ಒಪ್ಪಂದ ಮತ್ತಷ್ಟು ಉತ್ತೇಜನ ನೀಡಲಿದೆ.

By Ravikumar - 06-09-2026


Ads in Post