ನವದೆಹಲಿ: ಮರಣ ದಂಡನೆ ಶಿಕ್ಷೆಗೆ ಒಳಗಾಗುವ ವ್ಯಕ್ತಿಗೆ ಕಡಿಮೆ ನೋವಿನ ವಿಧಾನಗಳನ್ನು ಬಳಸಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನ ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಭಾರತದಲ್ಲಿ ಮರಣದಂಡನೆ ಶಿಕ್ಷೆಯನ್ನು ಜಾರಿಗೊಳಿಸಲು ಪ್ರಸ್ತುತ ಇರುವ ‘ಗಲ್ಲಿಗೇರಿಸುವ’ ಪದ್ಧತಿಯನ್ನೇ ಮುಂದುವರಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ ಹಾಗೂ ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರ ತಜ್ಞರ ಸಮಿತಿಯನ್ನ ರಚಿಸಿ ಇತರ ವಿಧಾನಗಳ ಬಳಕೆ ಬಗ್ಗೆ ಚರ್ಚಿಸಬಹುದು ಎಂದು ಹೇಳಿದೆ.
ಮರಣದಂಡನೆಯನ್ನು ಗಲ್ಲಿಗೇರಿಸುವ ಬದಲಾಗಿ ಕಡಿಮೆ ನೋವಿನ ವಿಧಾನಗಳನ್ನು ಬಳಸಬೇಕು ಮತ್ತು ಇದು ಘನತೆಯಿಂದ ಕೂಡಿರಬೇಕು ಎಂದು ಕೋರಿ ವಕೀಲ ರಿಷಿ ಮಲ್ಹೋತ್ರಾ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದರು. ಗಲ್ಲಿಗೇರಿಸುವಿಕೆಯು ಕ್ರೂರ ಮತ್ತು ನೋವಿನಿಂದ ಕೂಡಿರುತ್ತದೆ. ವ್ಯಕ್ತಿಯ ಘನತೆಗೆ ಕುಂದು ಬರುವಂತಿರುತ್ತದೆ ಎಂಬುದು ಅವರ ವಾದ. ಆದರೆ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು ಈ ಅರ್ಜಿಯನ್ನು ತಳ್ಳಿಹಾಕಿದೆ.
ಈ ಕುರಿತು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ರಿಷಿ ಮಲ್ಹೋತ್ರ ʻಓರ್ವ ವ್ಯಕ್ತಿಯನ್ನ ಗಲ್ಲಿಗೇರಿಸಿದ ಬಳಿಕೆ ಆತ ದೀರ್ಘಕಾಲ ಬಾದೆ ಪಡೆಬೇಕಾಗುತ್ತದೆ. ಆತ ಮೃತ ಪಟ್ಟಿದ್ದಾನಾ ಎಂದು ಖಚಿತಪಡಿಸಿಕೊಳ್ಳಲು ಸುಮಾರು 40 ನಿಮಿಷ ಸಮಯ ಬೇಕಾಗುತ್ತದೆ, ಆದರೆ ಗ್ಯಾಸ್ ಚೇಂಬರ್, ಲೆಥೆಲ್ ಇಂಜೆಕ್ಷನ್ ಅಥವಾ ಶೂಟ್ ಮಾಡುವ ವಿಧಾನಗಳ ಮೂಲಕ ಕೇವಲ 5 ನಿಮಿಷಗಳಲ್ಲಿ ವ್ಯಕ್ತಿಯ ಸಾವನ್ನು ಖಚಿತಪಡಿಸಬಹುದು ಎಂದು ಅರ್ಜಿದಾರರು ವಾದಿಸಿದ್ದರು.
ಸದ್ಯಕ್ಕೆ ದೇಶದಲ್ಲಿ ಮರಣದಂಡನೆಗಾಗಿ ಗಲ್ಲಿಗೇರಿಸುವ ಪದ್ಧತಿಯು ಸಂವಿಧಾನಬದ್ಧವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇದೇ ವೇಳೆ, ಇದು ಅಂತಿಮ ತೀರ್ಪಲ್ಲ ಎಂದೂ ಕೋರ್ಟ್ ಸ್ಪಷ್ಟಪಡಿಸಿದೆ. ಮರಣದಂಡನೆಗೆ ಸಂಬಂಧಿಸಿದಂತೆ ವೈಜ್ಞಾನಿಕ ಮತ್ತು ವೈದ್ಯಕೀಯ ಸಾಕ್ಷ್ಯಾಧಾರಗಳು ಮುಂದೆ ಬಂದರೆ, ಪರ್ಯಾಯ ಮರಣದಂಡನೆ ಜಾರಿ ವಿಧಾನಗಳ ಕುರಿತು ಮರುಪರಿಶೀಲನೆ ನಡೆಸುವ ಅಧಿಕಾರ ಸರ್ಕಾರಕ್ಕಿದೆ. ಕೇಂದ್ರ ಸರ್ಕಾರವು ಬೇಕಿದ್ದರೆ ತಜ್ಞರ ಸಮಿತಿಯನ್ನು ರಚಿಸಿ ಪರ್ಯಾಯ ವಿಧಾನಗಳ ಬಗ್ಗೆ ಚರ್ಚಿಸಬಹುದು ಎಂದು ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.