ನವದೆಹಲಿ: ಹನಿಮೂನ್‌ಗೆ ಎಂದು ಹೋದಾಗ ಪತಿಯನ್ನ ಕೊಲೆ ಮಾಡಿದ್ದ ಹಂತಕಿಯ ಜಾಮೀನು ರದ್ದು ಮಾಡಲು ಸುಪ್ರೀ ಕೋರ್ಟ್ (Supreme Court) ನಿರಾಕರಿಸಿದೆ. ಸೋನಮ್ ಕೆಲ ತಿಂಗಳ ಕಾಲ ಜೈಲಿನಲ್ಲಿದ್ದಳು, ಜಾಮೀನು ಕೊಡುವುದು ನಿಯಮ, ಆದರೆ ಜೈಲಿಗೆ ಕಳಿಸುವುದು ಕೊನೆಯ ಆಯ್ಕೆ ಎಂಬ ತತ್ವದ ಅನ್ವಯ ಸುಪ್ರೀಂ ಕೋರ್ಟ್ ಜಾಮೀನು ರದ್ದು ಪಡಿಸಲು ನಿರಾಕರಿಸಿದೆ.
ಏನಿದು ಘಟನೆ...!
ಮಧ್ಯಪ್ರದೇಶದ ಇಂದೋರ್ ನಿವಾಸಿಯಾದ ಸೋನಂ ರಘುವಂಶಿಯನ್ನ (Sonam Raghuvanshi) ತನ್ನ ಪತಿ ರಾಜಾ ರಘುವಂಶಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಜೂನ್‌ನಲ್ಲಿ ಸೋನಮ್‌ಳನ್ನ ಬಂಧಿಸಲಾಗಿತ್ತು. 2025ರ ಮೇ 23ರಂದು ಮೇಘಾಲಯದ ಸೋಹ್ರಾ ಪ್ರದೇಶಕ್ಕೆ ಹನಿಮೂನ್‌ಗೆ ಹೋಗಿದ್ದ ಈ ದಂಪತಿ ನಾಪತ್ತೆಯಾಗಿದ್ದರು. ತದನಂತರ ಜೂನ್ 2ರಂದು ರಾಜಾ ರಘುವಂಶಿ ಅವರ ಮೃತದೇಹ ಆಳವಾದ ಕಂದಕದಲ್ಲಿ ಪತ್ತೆಯಾಗಿತ್ತು. ಆರ್ಥಿಕ ಲಾಭಕ್ಕಾಗಿ ಸೋನಂ ಬಾಡಿಗೆ ಹಂತಕರೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು ಎಂದು ಮೇಘಾಲಯ ಪೊಲೀಸರು ಆರೋಪಿಸಿದ್ದಾರೆ.
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಮತ್ತು ಶೀಲ್ ನಾಗು ಅವರಿದ್ದ ಪೀಠವು, ಸೋನಂಗೆ ನೀಡಿದ ಜಾಮೀನು ಆದೇಶಕ್ಕೆ ತಡೆ ನೀಡುವ ಬಗ್ಗೆ ಒಲವು ತೋರಿಸಿತ್ತು. ಆದರೆ ಆರೋಪಿ ಈಗಾಗಲೇ ಜಾಮೀನಿನ ಮೇಲೆ ಹೊರಗಿರುವುದರಿಂದ ಮತ್ತು ಈ ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ವಿಚಾರಣೆಯ ವೇಳೆ ನಿರ್ಧಾರವಾಗಬೇಕಿರುವುದರಿಂದ, ಹೈಕೋರ್ಟ್ (Meghalaya Highcourt) ಆದೇಶವನ್ನು ಹಿಂಪಡೆಯಲು ನ್ಯಾಯಾಲಯ ನಿರಾಕರಿಸಿದೆ. ಆದರೆ ಪ್ರಕರಣದ ಜಾಮೀನು ಅರ್ಜಿಯನ್ನು ವಿವರವಾಗಿ ಪರಿಶೀಲಿಸಲು ನ್ಯಾಯಾಲಯ ಒಪ್ಪಿಗೆ ನೀಡಿದೆ
ಈ ವೇಳೆ ಮೇಘಾಲಯ ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಈ ಹಿಂದೆ ಸೋನಂ, ಬಂಧನದ ಸಮಯದಲ್ಲಿ ಸರಿಯಾದ ಕಾರಣ ತಿಳಿಸಿರಲಿಲ್ಲ ಎಂದು ಆರೋಪಿಸಿ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಕೋರ್ಟ್ ತಿರಸ್ಕರಿಸಿತ್ತು. ಆದರೆ ಅದಾದ ಬಳಿಕ ಪೊಲೀಸರು ದಾಖಲೆಗಳನ್ನು ಉಲ್ಲೇಖಿಸುವಾಗ ಸಣ್ಣದೊಂದು ತಾಂತ್ರಿಕ ತಪ್ಪು ನಡೆದಿತ್ತು. ಆ ಒಂದು ಸಣ್ಣ ತಾಂತ್ರಿಕ ತಪ್ಪನ್ನೇ ಆಧಾರವಾಗಿಟ್ಟುಕೊಂಡು ಹೈಕೋರ್ಟ್ ಜಾಮೀನು ನೀಡಿದೆ ಎಂದು ವಾದ ಮಂಡಿಸಿದರು.
ಸೋನಂ ಈಗಾಗಲೇ ಒಂದಿಷ್ಟು ಸಮಯ ಜೈಲು ಶಿಕ್ಷೆ ಅನುಭವಿಸಿರುವುದನ್ನು ಪರಿಗಣಿಸಿದ ಕೋರ್ಟ್, ಅಪರಾಧ ಎಷ್ಟೇ ಘೋರವಾಗಿದ್ದರೂ, ಜಾಮೀನು ನೀಡುವುದು ನಿಯಮ, ಜೈಲಿಗೆ ಕಳುಹಿಸುವುದು ಕೊನೆಯ ಆಯ್ಕೆ ಎಂಬ ತತ್ವವನ್ನು ಪಾಲಿಸಬೇಕಾಗುತ್ತದೆ. ಇದೇ ವೇಳೆ ಹೈಕೋರ್ಟ್ ಈ ಪ್ರಕರಣವನ್ನು ನಿರ್ವಹಿಸಿದ ರೀತಿಯ ಬಗ್ಗೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಮುಂದಿನ ವಿಚಾರಣೆ ಜು.9ಕ್ಕೆ ನಿಗದಿಪಡಿಸಿದೆ.