Search


ಕೈತಪ್ಪಿದ ಸಚಿವ ಸ್ಥಾನ; ಕಾಂಗ್ರೇಸಿಗ ಅಂತ ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ ಎಂದ ಟಿ. ಬಿ ಜಯಚಂದ್ರ

ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಂಪುಟ ಪುನರ್‌ರಚನೆ ಬೆನ್ನಲ್ಲೇ ಅಸಮಾಧಾನ ಸ್ಫೋಟಗೊಂಡಿದೆ. ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಶಾಸಕ ಟಿ.ಬಿ. ಜಯಚಂದ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿರಿಯ ಶಾಸಕರ ಸಭೆಯಲ್ಲಿ ಮಾತನಾಡಿದ ಜಯಚಂದ್ರ, “ನಾನು ಕಾಂಗ್ರೆಸ್ಸಿಗ ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ” ಎಂದು ಪಕ್ಷದೊಳಗಿನ ಬೆಳವಣಿಗೆಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಸಚಿವ ಸಂಪುಟ ಪುನರ್‌ರಚನೆ ನಡೆದ ರೀತಿಯಿಂದ ಕ್ಷೇತ್ರದ ಜನರು ಕೂಡ ಅಸಮಾಧಾನಗೊಂಡಿದ್ದು, ತಮಗೆ ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಜಯಚಂದ್ರ ಹೇಳಿದ್ದಾರೆ. ಸಂಪುಟಕ್ಕೆ ಯಾರನ್ನು ಸೇರ್ಪಡೆ ಮಾಡಬೇಕು ಎಂಬುದಕ್ಕೆ ಸ್ಪಷ್ಟ ಮಾನದಂಡಗಳಿಲ್ಲ ಎಂದು ಹಲವು ಹಿರಿಯ ಶಾಸಕರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದಲ್ಲಿ ತಮ್ಮಂತಹ ಹಿರಿಯ ನಾಯಕರಿಗೆ ಸೂಕ್ತ ಸ್ಥಾನಮಾನ ನೀಡಲಾಗುತ್ತಿಲ್ಲ ಎಂಬ ನೋವು ಕೂಡ ಸಭೆಯಲ್ಲಿ ವ್ಯಕ್ತವಾಗಿದೆ.

ಮೊಳಕಾಲ್ಮೂರು ಶಾಸಕ ಎನ್.ವೈ. ಗೋಪಾಲಕೃಷ್ಣ ಹಾಗೂ ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ ಸೇರಿದಂತೆ ಹಲವು ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು. ಸಚಿವ ಸಂಪುಟ ಪುನರ್‌ರಚನೆ ಬಳಿಕ ಕಾಂಗ್ರೆಸ್‌ನೊಳಗೇ ಅಸಮಾಧಾನ ಹೆಚ್ಚಾಗಿರುವುದು ಇದೀಗ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಚರ್ಚೆಗೆ ಕಾರಣವಾಗಿದೆ. ಹಿರಿಯ ಶಾಸಕರ ಈ ಬಹಿರಂಗ ಅಸಮಾಧಾನ ಮುಂದಿನ ದಿನಗಳಲ್ಲಿ ಪಕ್ಷದೊಳಗಿನ ರಾಜಕೀಯದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದು ಕುತೂಹಲ ಮೂಡಿಸಿದೆ.

By Ravikumar - 04-08-2026


Ads in Post