Search


ತಾಜ್‌ ಮಹಲ್‌ ಒಳಗೆ ದೇವಸ್ಥಾನ? ಕೇಂದ್ರ ಸರ್ಕಾರಕ್ಕೆ ಉತ್ತರಿಸುವಂತೆ ಅಲಹಬಾದ್‌ ಹೈಕೋರ್ಟ್‌ ನೋಟಿಸ್‌

ಪ್ರಯಾಗರಾಜ್: ಆಗ್ರಾದಲ್ಲಿರುವ ವಿಶ್ವಪ್ರಸಿದ್ಧ ಐತಿಹಾಸಿಕ ಸ್ಮಾರಕ ತಾಜ್ ಮಹಲ್ ಕುರಿತು ನಡೆಯುತ್ತಿರುವ ವಿವಾದದಲ್ಲಿ ಅಲಹಾಬಾದ್ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ತಾಜ್ ಮಹಲ್ ಒಳಗೆ ತೇಜೋ ಮಹಾಲಯ ದೇವಸ್ಥಾನವಿದೆ ಎಂಬ ದಾವೆ ಮಾಡಿರುವ ಅರ್ಜಿಯನ್ನು ನ್ಯಾಯಾಲಯ ವಿಚಾರಣೆಗೆ ಸ್ವೀಕರಿಸಿ, ಕೇಂದ್ರ ಸರ್ಕಾರ ಸೇರಿದಂತೆ ಇತರ ಪ್ರತಿವಾದಿಗಳಿಗೆ ಉತ್ತರಿಸುವಂತೆ ನೋಟಿಸ್ ಜಾರಿಗೊಳಿಸಿದೆ.

ದೇಶದಲ್ಲಿ ಅನೇಕ ಪ್ರಾಚೀನ ಸ್ಮಾರಕಗಳ ವಿವಾದಗಳಲ್ಲಿ ಪ್ರಮುಖ ವಿವಾದವೆಂದರೆ ಅದು ತಾಜ್‌ಮಹಲ್‌ ವಿವಾದ, ಮೊಘಲ್‌ ದೊರೆ ಷಹಜಾನ್‌ ದೇವಾಲಯವನ್ನ ಕೆಡವಿ ಆ ಜಾಗದಲ್ಲಿ ತಾಜಮಹಲ್‌ ಕಟ್ಟಿದ್ದಾನೆ ಎಂದು ಅನೇಕ ಪ್ರಾಚೀನ ಇತಿಹಾಸಕಾರರು ಮತ್ತು ಹಿಂದು ಮುಖಂಡರು ಪ್ರತಿಪಾದಿಸುತ್ತಾರೆ. ಇದರ ಕುರಿತಾದ ಪ್ರಕರಣ ಇದೀಗ ನ್ಯಾಯಾಂಗದ ಅಂಗಳಕ್ಕೆ ಕಾಲಿಟ್ಟಿದ್ದು,ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರು ಈ ವಿಷಯವು ನ್ಯಾಯಾಂಗ ಪರಿಶೀಲನೆಗೆ ಅರ್ಹವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಭಾರತ ಸಂವಿಧಾನದ 227ನೇ ವಿಧಿಯಡಿ ಈ ಅರ್ಜಿಯನ್ನು ಪರಿಗಣಿಸಬೇಕೆಂದು ದಾಖಲಿಸಿದ್ದಾರೆ.

ಅರ್ಜಿದಾರರ ಪರ ಹಿರಿಯ ವಕೀಲ ಹರಿ ಶಂಕರ್ ಜೈನ್ ವಾದ ಮಂಡಿಸಿ, ತಾಜ್ ಮಹಲ್‌ನ ಇತಿಹಾಸವನ್ನು ನಿಖರವಾಗಿ ನಿರ್ಧರಿಸಲು ಅದರ ಒಳಭಾಗದಲ್ಲಿ ಅಡಗಿರುವ ಧಾರ್ಮಿಕ ಚಿಹ್ನೆಗಳು ಹಾಗೂ ವಾಸ್ತುಶಿಲ್ಪದ ಅವಶೇಷಗಳಿರುವುದೇ ಎಂಬುದನ್ನು ಪತ್ತೆಹಚ್ಚಲು ಸಮಗ್ರ ವೈಜ್ಞಾನಿಕ ಮತ್ತು ಸ್ಥಳೀಯ ಸಮೀಕ್ಷೆ ಅಗತ್ಯ, ಆದ್ದರಿಂದ ತಾಜ್‌ ಮಹಲ್‌ನ ವೈಜ್ಞಾನಿಕ ಸಮೀಕ್ಷೆಗೆ ಅವಕಾಶ ನೀಡಬೇಕು ಎಂದು ಕೋರಿದ್ದಾರೆ. ಈ ವೇಳೆ ಭಾರತೀಯ ಪುರಾತತ್ವ ಸಮೀಕ್ಷೆ (ASI) ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಮತ್ತು ವಕೀಲ ಮನೋಜ್ ಕುಮಾರ್ ಸಿಂಗ್ ಹಾಜರಾಗಿದ್ದರು.

ನ್ಯಾಯಾಲಯ ಈ ಅರ್ಜಿಯನ್ನ ಪುರಸ್ಕರಿಸಿದ್ದು, ಕೇಂದ್ರ ಸರ್ಕಾರ ಮತ್ತು ಪುರತತ್ವ ಇಲಾಖೆಗೆ ಉತ್ತರಿಸುವಂತೆ ನೋಟಿಸ್‌ ಜಾರಿ ಮಾಡಿದೆ. ನೋಟಿಸ್‌ ತಲುಪಿದ 10ದಿನಗಳ ಒಳಗೆ ಉತ್ತರಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿದ್ದು. ಮುಂದಿನ ದಿನಗಳಲ್ಲಿ ತಾಜ್‌ ಮಹಲ್‌ನ ವೈಜ್ಞಾನಿಕ ಸಮೀಕ್ಷೆ ನಡೆಯುತ್ತದ ಎಂಬುದನ್ನ ಕಾದು ನೋಡಬೇಕಿದೆ.

By Ravikumar - 07-07-2026


Ads in Post