ನವದೆಹಲಿ: ತಮಿಳುನಾಡಿನ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸುವಂತಹ ಬೆಳವಣಿಗೆಯೊಂದು ನಡೆದಿದೆ. ತಮಿಳುನಾಡು ಬಿಜೆಪಿಯ ಪ್ರಮುಖ ನಾಯಕ ಕೆ. ಅಣ್ಣಾಮಲೈ (K Annamalai) ಇಂದು BJPಗೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಕಳೆದೆರಡು ದಿನಗಳಿಂದ ಕೇಳಿಬರುತ್ತಿದ್ದ ಅನುಮಾನಕ್ಕೆ ಅಣ್ಣಮಲೈ ಅಂತ್ಯ ಹಾಡಿದ್ದಾರೆ.
ತಮಿಳುನಾಡು ರಾಜಕಾರಣದಲ್ಲಿ ಅತ್ಯಂತ ಪ್ರಭಾವಶಾಲಿ ಮತ್ತು ಆಕ್ರಮಣಕಾರಿ ನಾಯಕ ಎಂದೇ ಗುರುತಿಸಿಕೊಂಡಿದ್ದ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಬಿಜೆಪಿಗೆ ದಿಢೀರ್ ರಾಜೀನಾಮೆ ನೀಡಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ರಾಷ್ಟ್ರಧ್ಯಕ್ಷ ನಿತಿನ್ ನಬಿನ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ್ದಾರೆ. ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣಾ ಫಲಿತಾಂಶಗಳು ಮತ್ತು ಬಿಜೆಪಿಯ ಆಂತರಿಕ ಭಿನ್ನಾಭಿಪ್ರಾಯಗಳ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಅಣ್ಣಾಮಲೈ ಅವರ ಈ ದಿಢೀರ್ ನಿರ್ಧಾರಕ್ಕೆ ಕಾರಣವೇನೆಂಬುದರ ಬಗ್ಗೆ ಅವರು ಯಾವುದೇ ಸ್ಪಷ್ಟನೆ ನೀಡಿಲ್ಲ, ಆದರೆ ತಮಿಳುನಾಡಿನಲ್ಲಿ ಅವರ ಮುಂದಿನ ನಡೆ ಏನು ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದು. ಈ ಕುರಿತು ತಮ್ಮ ಹುಟ್ಟುಹಬ್ಬದ ದಿನ ಅಣ್ಣಾಮಲೈ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸದ್ಯಕ್ಕೆ ಯಾವುದೇ ಹೊಸ ಪಕ್ಷ ಕಟ್ಟುವ ನಿರ್ಧಾರ ಪ್ರಕಟಿಸಿಲ್ಲ. ಬದಲಿಗೆ ರಾಜ್ಯದಲ್ಲಿ ದೊಡ್ಡ ಮಟ್ಟದ ‘ಜನ ಚಳವಳಿ’ ಅಥವಾ ‘ಜನತಾ ಮೂವ್ಮೆಂಟ್’ ಪ್ರಾರಂಭಿಸಲು ಅವರು ಯೋಚಿಸುತ್ತಿದ್ದಾರೆ ಎನ್ನಲಾಗಿದೆ. ಮುಂದಿನ ಎರಡು ದಿನಗಳಲ್ಲಿ ತಮ್ಮ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸುವುದಾಗಿ ಅಣ್ಣಾಮಲೈ ತಿಳಿಸಿದ್ದಾರೆ.