Search


ತಮಿಳುನಾಡಿಗೆ ಕಾವೇರಿ ನೀರನ್ನ ಧಾರೆ ಎರೆದ ರಾಜ್ಯ ಸರ್ಕಾರ; ಅಶೋಕ್‌ ಆಕ್ರೋಶ

ಮಂಡ್ಯ: ತಮಿಳುನಾಡಿಗೆ ಕಾವೇರಿ ಹರಿಸಲ್ಲ ಎನ್ನುತ್ತಲೇ ರಾಜ್ಯ ಸರ್ಕಾರ ಡ್ಯಾಂಗಳ ಬಾಗಿಲುಗಳನ್ನ ತೆರೆದು ತಮಿಳುನಾಡಿಗೆ ನೀರು ಹರಿಸುತ್ತಿದೆ, ಇತ್ತೀಚೆಗೆ ಕಾವೇರಿ ನೀರು ನಿರ್ವಹಣ ಪ್ರಾಧಿಕಾರ ತಮಿಳುನಾಡಿಗೆ 12 ಟಿಎಂಸಿ ನೀರು ಹರಿಸುವಂತೆ ಆದೇಶ ನೀಡಿತ್ತು. ಈ ಆದೇಶದ ನಂತರ ಸಿಎಂ ಡಿಕೆ ಶಿವಕುಮಾರ್​ ಸರ್ವಪಕ್ಷಗಳ ಸಭೆ ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ ಎಂದಿದ್ದರು. ಆದರೆ ಇದೆಲ್ಲದರ ಮಧ್ಯೆ ಇದೀಗ ರಾತ್ರೋರಾತ್ರಿ ಕೆಆರ್​ಎಸ್ ಡ್ಯಾಂನಿಂದ ತಮಿಳುನಾಡಿಗೆ ನೀರು ಹರಿಸಲಾಗಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಮಂಡ್ಯದಲ್ಲಿರುವ ಕೆಆರ್‌ಎಸ್‌ ಜಲಾಶಯದಿಂದ ತಮಿಳುನಾಡಿಗೆ ಕಾವೇರಿ ನದಿ ನೀರನ್ನು ಹರಿಸಲಾಗುತ್ತಿದೆ, ಇಷ್ಟು ದಿನ ಕಬಿನಿ ಜಲಾಶಯದಿಂದ ಮಾತ್ರ ತಮಿಳುನಾಡಿಗೆ ನೀರು ಬಿಡಲಾಗುತ್ತಿತ್ತು. ಆದರೆ, ಕಬಿನಿ ಜಲಾಶಯಕ್ಕೆ ಒಳಹರಿವು ಗಣನೀಯವಾಗಿ ತಗ್ಗಿದ ಹಿನ್ನೆಲೆ ಸರ್ಕಾರದ ಸೂಚನೆಯಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕೆಆರ್‌ಎಸ್ ಡ್ಯಾಂನ 80ಕ್ಕೂ ಹೆಚ್ಚು ಗೇಟ್‌ಗಳ ಮೂಲಕ ಸುಮಾರು 3,000 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗಿದೆ.

ಸದ್ಯ ತಮಿಳುನಾಡಿಗೆ ಸುಮಾರು 3,000 ಕ್ಯೂಸೆಕ್ ಕಾವೇರಿ ನೀರು ಬಿಡುಗಡೆ ಮಾಡಿರುವುದನ್ನು ಖಂಡಿಸಿ ಮಂಡ್ಯ ನಗರದ ಸಂಜಯ ವೃತ್ತದಲ್ಲಿ ರೈತರು ತೀವ್ರ ಪ್ರತಿಭಟನೆ ನಡೆಸಿದರು. ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಹೇಳಿದ್ದ ರಾಜ್ಯ ಸರ್ಕಾರ, ಈಗ ಕದ್ದುಮುಚ್ಚಿ ನೀರು ಹರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅನ್ನದಾತರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಈ ನಡುವೆ ಜಿಲ್ಲಾಧಿಕಾರಿಗಳು ರೈತರಿಗೆ ಕರೆ ಮಾಡಿ ನೀರು ಬಿಟ್ಟಿಲ್ಲವೆಂದು ಸಮಜಾಯಿಷಿ ನೀಡಲು ಯತ್ನಿಸಿದರೂ, ರೈತರು ಆಕ್ರೋಶ ಹೊರಹಾಕಿದರು.

ಇನ್ನು ಈ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಎನ್. ಚಲುವರಾಯಸ್ವಾಮಿ, ‘ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಪ್ರತಿದಿನ 12,000 ಕ್ಯೂಸೆಕ್ ನೀರು ಹರಿಸುವಂತೆ ಆದೇಶಿಸಿದೆ. ನಿಯಮಗಳ ಪ್ರಕಾರ ಜೂನ್ ತಿಂಗಳಿನಿಂದಲೇ ನೀರು ಬಿಡಬೇಕಿದ್ದರೂ, ಜೂನ್ ಮತ್ತು ಜುಲೈ ತಿಂಗಳಲ್ಲಿ ನೀರು ಬಿಟ್ಟಿರಲಿಲ್ಲ. ಸದ್ಯ ಕಬಿನಿ ಜಲಾಶಯದಿಂದ 10,000 ಕ್ಯೂಸೆಕ್ ಜೊತೆಗೆ ಸೀಪೇಜ್ ನೀರು ತಮಿಳುನಾಡಿಗೆ ಸೇರುತ್ತಿದೆ’ ಎಂದರು.

ಇನ್ನು ಈ ಕುರಿತು ವಿಪಕ್ಷ ನಾಯಕ ಆರ್‌,ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದ್ದು, ‘ಕಾವೇರಿ ನೀರು ಬಿಡೋದಿಲ್ಲ ಎಂದು ಹೇಳಿ ಮತ್ತೆ ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಹರಿಸುತ್ತಿದೆ ನಾಡದ್ರೋಹಿ ಕಾಂಗ್ರೆಸ್ ಸರ್ಕಾರ, ಒಂದೆಡೆ ರಾಜ್ಯದ ರೈತರಿಗೆ ಸಿಗದ ನೀರು, ಇನ್ನೊಂದೆಡೆ ಕುಡಿಯುವ ನೀರಿಗೂ ಪರದಾಡುತ್ತಿರುವ ನಮ್ಮ ಜನ! ಆದರೆ ಈ ಲಜ್ಜೆಗೆಟ್ಟ ಕಾಂಗ್ರೆಸ್​ ಸರ್ಕಾರ ಮಾತ್ರ ಕನ್ನಡಿಗರ ಕಣ್ಣಿಗೆ ಮಣ್ಣೆರಚಿ, ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುತ್ತಿದೆ’ ಎಂದು ಟ್ವೀಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

By Ravikumar - 15-08-2026


Ads in Post