Search


ಫುಟ್‍ಬಾಲ್ ಜಗತ್ತಿನ ಸರದಾರನೂ ಹೌದು.. ಮಾನವಿಯತೆಯ ಸಾಹುಕಾರನೂ ಹೌದು...! ಬಂಗಾರದ ಮನಸ್ಸಿನ ಬಂಗಾರದ ಮನುಷ್ಯ..!

ಈತನ ಒಂದು ವರ್ಷದ ಸಂಪಾದನೆ 330 ಕೋಟಿಗೂ ಅಧಿಕ..! ಆದ್ರೆ ಕೈಯಲ್ಲಿರುವುದು ಒಡೆದು ಹೋಗಿರುವ ಹಳೆಯ ಮೊಬೈಲ್..! ಓಡಾಡಲು ಬಳಸುವುದು ಹಳೆಯ ಕಾರು..! ಯಾರವನು...?

ಮನಸ್ಸು ಮಾಡಿದ್ರೆ ಸಿರಿತನದ ಭೋಗದಲ್ಲಿ ಜೀವನ ಸಾಗಿಸಬಹುದು. ದಿನಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ರೂ ಕೇಳುವವರು ಯಾರು ಇಲ್ಲ. ದುಬಾರಿ ಬೆಲೆಯ ಫೋನ್ ಬಳಸಬಹುದು. ಕೋಟ್ಯಂತರ ಮೌಲ್ಯದ ಕಾರುಗಳಲ್ಲಿ ಸುತ್ತಾಡಬಹುದು. ಮೋಜು ಮಸ್ತಿ ಅಂತ ಲೈಫ್ ಅನ್ನು ಸಕತ್ತಾಗಿ ಎಂಜಾಯ್ ಮಾಡಬಹುದು. ಆದ್ರೆ ಮಾಡಲ್ಲ.. ಯಾಕೆ.?

ಆತನಿಗೆ ಭೋಗದ ಜೀವನ ಬೇಕಾಗಿಲ್ಲ. ಹಾಗಂತ ಖಂಡಿತವಾಗಿಯೂ ಆತ ಜಿಪುನ ಅಲ್ಲವೇ ಅಲ್ಲ. ದಾನ- ಧರ್ಮದಲ್ಲಿ ಆಧುನಿಕ ಕರ್ಣ. ಸಂಪಾದನೆಯ ಬಹುತೇಕ ಹಣವನ್ನು ಬಡವರ ಏಳಿಗೆಗೆ ವಿನಿಯೋಗ ಮಾಡುತ್ತಾನೆ. ಹಸಿವು, ಬಡತನದಿಂದ ಕಂಗೆಟ್ಟಿದ್ದ ತನ್ನೂರಿನ ಜನರ ಮುಖದಲ್ಲಿ ಮಂದಹಾಸದ ನಗೆ ಮೂಡುವಂತೆ ಮಾಡುತ್ತಿದ್ದಾನೆ. ಹೌದಾ...? ಹೌದು...!

ಹಾಗಿದ್ರೆ ಈ ದಾನ ಶೂರ ಯಾರು..? 

ಈ ಪ್ರಶ್ನೆಗೆ ಉತ್ತರ..

ಆತ ಸೆನೆಗಲ್ ಫುಟ್‍ಬಾಲ್ ತಂಡದ ಸೂಪರ್ ಸ್ಟಾರ್.. ಲಿವರ್‍ಪೂಲ್ ತಂಡದ ಲೆಜೆಂಡ್. ಕೋಟಿ ಕೋಟಿ ಬೆಲೆ ಬಾಳುವ ಕುಬೇರ . ಒಂದೇ ಮಾತಿನಲ್ಲಿ ಹೇಳುವುದಾದ್ರೆ ಬಡವರ ಬಂಧು. ಸಮಾಜ ಸೇವಕ. ಫುಟ್‍ಬಾಲ್ ಜಗತ್ತಿನ ಅಪ್ರತಿಮ ಆಟಗಾರ. ಆತನ ಹೆಸರು ಸ್ಯಾಡಿಯೊ ಮಾನೆ. ಈತನ ಜೀವನಗಾಥೆಯನ್ನು ಕೇಳಿದ್ರೆ ಖಂಡಿತವಾಗಿಯೂ ಹೃದಯ ತುಂಬಿಬರುತ್ತದೆ.

ಬರಿಗಾಲಿನಲ್ಲಿ ಶುರುವಾದ ಫುಟ್‍ಬಾಲ್ ಕನಸು..! 

ಹೌದು. ಈತನ ಬದುಕು ಶುರುವಾಗುವುದು ಸೆನೆಗಲ್‍ನ ಬಂಬಾಲಿ ಎಂಬ ಪುಟ್ಟ ಹಳ್ಳಿಯಿಂದ. ಈ ಊರಿನ ಜನಸಂಖ್ಯೆ ಕೇವಲ 2000 ಅಷ್ಟೇ. ಇದು ಯಾವುದೇ ಮೂಲಸೌಕರ್ಯಗಳಿಲ್ಲದ ಒಂದು ಕುಗ್ರಾಮ. ಈ ಊರಿನಲ್ಲಿ ಸರಿಯಾದ ಶಾಲೆ ಇಲ್ಲ. ಆಸ್ಪತ್ರೆ ಇಲ್ಲ. ಕುಡಿಯಲು ಶುದ್ದ ನೀರಿಲ್ಲ. ವಿದ್ಯುತ್‍ನ ವ್ಯವಸ್ಥೆ ಇಲ್ಲ. ಇಂತಹ ಊರಿನಲ್ಲಿ ಜಗತ್ತಿನ ಅದ್ಭುತ ಫುಟ್‍ಬಾಲ್ ಆಟಗಾರನ ಉದಯವಾಗುತ್ತೆ ಅಂತ ಯಾರು ಕೂಡ ಊಹೆ ಕೂಡ ಮಾಡಿರಲಿಲ್ಲ.

ಏಪ್ರಿಲ್ 10, 1992ರಲ್ಲಿ ಸ್ಯಾಡಿಯೊ ಮಾನೆಯ ಡೇಟ್ ಆಫ್ ಬರ್ತ್. ಸ್ಯಾಡಿಯೊ ಮಾನೆಯ ತಂದೆಯ ಹೆಸರು ಇಮಾಮ್ ಮಾನೆ. ಹತ್ತು ಮಕ್ಕಳ ಪೈಕಿ ಸ್ಯಾಡಿಯೊ ಕೂಡ ಒಬ್ಬ. ಈತನಿಗೆ ವಿಪರೀತ

ಫುಟ್‍ಬಾಲ್ ಹುಚ್ಚು. ಆದ್ರೆ ತಂದೆಗೆ ಫುಟ್‍ಬಾಲ್ ಅಂದ್ರೆ ಆಗಿಬರುತ್ತಿರಲಿಲ್ಲ. ಧರ್ಮಶಾಸ್ತ್ರದ ಕಡೆಗೆ ಗಮನಹರಿಸುವಂತೆ ಮಗನಿಗೆ ಬುದ್ಧಿ ಹೇಳುತ್ತಿದ್ದ.

ಆದ್ರೆ ವಿಧಿಯಾಟ ನೋಡಿ. ಏಳರ ಹರೆಯದಲ್ಲೇ ತಂದೆಯನ್ನು ಕಳೆದುಕೊಂಡ. ಹೀಗಾಗಿ ಕುಟುಂಬದ ನಿರ್ವಹಣೆ ಕಷ್ಟವಾಗಿತ್ತು. ಬಡತನ ದಿನ ನಿತ್ಯ ಶಾಪದಂತೆ ಕಾಡುತ್ತಿತ್ತು. ಆದ್ರೂ ಸ್ಯಾಡಿಯೊ ಫುಟ್‍ಬಾಲ್ ಆಟದ ಪ್ರೀತಿಯನ್ನು ಕಡಿದುಕೊಳ್ಳಲಿಲ್ಲ. ಸುಮಾರು 15 ವರ್ಷಗಳ ಕಾಲ ಬರಿಗಾಲಿನಲ್ಲಿ ನೋವನ್ನು ಸಹಿಸಿಕೊಂಡು ಫುಟ್‍ಬಾಲ್ ಆಡ್ತಾ ಇದ್ದ. ಯಾಕೆ ಅಂದ್ರೆ ಫುಟಬಾಲ್ ಆತನ ಆತ್ಮವಾಗಿತ್ತು.

15 ನಿಮಿಷದಲ್ಲೇ ಬದಲಾದ ಬದುಕಿನ ದಿಕ್ಕು..! 

ಅದೊಂದು ದಿನ ಏನು ಆಯ್ತು ಅಂತ ಗೊತ್ತಿಲ್ಲ. ಕಷ್ಟಪಟ್ಟು ದುಡಿದು ಸ್ವಲ್ಪ ಹಣ ಸಂಪಾದನೆ ಮಾಡಿ ಸ್ಯಾಡಿಯೊ ಮನೆ ಬಿಟ್ಟು ಓಡಿ ಹೋದ. ಕೊನೆಗೆ ಸೇರಿಕೊಂಡಿದ್ದು ತನ್ನೂರಿನಿಂದ 300 ಕಿಲೋ ಮೀಟರ್ ದೂರವಿರುವ ಸೆನೆಗಲ್‍ನ ರಾಜಧಾನಿ ಡಾಕರ್ ನಗರವನ್ನು.

ಹಾಗಂತ ಆತ ಸುಮ್ಮನೆ ಓಡಿ ಹೋಗಲಿಲ್ಲ. ತನ್ನ ಫುಟ್‍ಬಾಲ್ ಕನಸನ್ನು ನನಸು ಮಾಡಲು ಊರೇ ಬಿಟ್ಟಿದ್ದ. ಚಿಕ್ಕಪ್ಪ ಎಷ್ಟೇ ಬುದ್ಧಿ ಹೇಳಿದ್ರೂ ಕೇಳಲಿಲ್ಲ. ಫುಟ್‍ಬಾಲ್ ಆಟ ಬೇಡ. ಓದು ಇಲ್ಲವೇ ಕೆಲಸ ಮಾಡು ಅಂತ ಬುದ್ಧಿ ಹೇಳಿದ್ದ. ಆದ್ರೆ ಮಾನೆ ಯಾರ ಮಾತÀ್ನು ಕೇಳಲಿಲ್ಲ. ಫುಟ್‍ಬಾಲ್ ಆಟಗಾರನಾಗಬೇಕು ಎಂದು ಕಷ್ಟಪಟ್ಟು ದುಡಿದು ಸೇರಿಕೊಂಡಿದ್ದು ಜನರೇಷನ್ ಫುಟ್‍ಬಾಲ್ ಅಕಾಡೆಮಿಯನ್ನು. ಅಲ್ಲಿಗೆ ಹೋದಾಗ ಕಾಲಲ್ಲಿ ಸರಿಯಾದ ಸ್ಟಡ್ಸ್‍ಗಳು ಇರಲಿಲ್ಲ. ಹಾಕಿಕೊಳ್ಳಲು ಜೆರ್ಸಿನೂ ಇರಲಿಲ್ಲ. ಆದ್ರೆ ಕೇವಲ 15 ನಿಮಿಷಗಳಲ್ಲಿ ಸ್ಯಾಡಿಯೊ ಪ್ರತಿಭೆ ಅನಾರವಣಗೊಂಡಿತ್ತು. ಬದುಕಿಗೆ ಹೊಸ ದಾರಿ ಸಿಕ್ಕಿತ್ತು.

ಅಮ್ಮ ನಾವು ಇನ್ನೂ ಬಡವರಲ್ಲ.. ನಾವು ಮನೆ ಕಟ್ಟಿಸೋಣ..!

2011ರಲ್ಲಿ ಅಂದ್ರೆ ತನ್ನ 19ನೆ ವಯಸ್ಸಿನಲ್ಲೇ ಸ್ಯಾಡಿಯೊ ಫ್ರಾನ್ಸ್‍ನ ಮೆಟ್ಜ್ ಕ್ಲಬ್‍ಗೆ ಎಂಟ್ರಿಯಾದ. ಹೊಸ ಊರು. ಹೊಸ ಜನ. ಯಾರ ಪರಿಚಯವೂ ಇಲ್ಲ. ಭಾಷೆ ಗೊತ್ತಿಲ್ಲ. ರೂಮ್‍ನಲ್ಲಿ ಒಂಟಿಯಾಗಿ ಕುಳಿತು ಕಣ್ಣೀರು ಹಾಕುತ್ತಿದ್ದ. ಆದ್ರೆ ಸಂಬಳ ಮಾತ್ರ ತಿಂಗಳಿಗೆ 1.5 ಲಕ್ಷ ರೂ. ಅದರಲ್ಲಿ ಶೇ.80ರಷ್ಟು ಹಣವನ್ನು ತಾಯಿಗೆ ಕಳುಹಿಸುತ್ತಿದ್ದ. ತನ್ನ ಖರ್ಚಿಗಾಗುವಷ್ಟು À್ರ ದುಡ್ಡು ಮಾತ್ರ ಇಟ್ಟುಕೊಳ್ಳುತ್ತಿದ್ದ.

ಬಳಿಕ 2012ರಲ್ಲಿ ಆಸ್ಟ್ರೀಯಾದ ರೆಡ್‍ಬುಲ್ ಕ್ಲಬ್ ಸೇರಿಕೊಂಡ. ಪಂದ್ಯವೊಂದರಲ್ಲಿ 45ನಿಮಿಷಗಳಲ್ಲಿ ಹ್ಯಾಟ್ರಿಕ್ ಗೋಲು ದಾಖಲಿಸಿ ತಂಡದ ಗೆಲುವಿನ ರೂವಾರಿಯಾದ. ಪಂದ್ಯ ಮುಗಿದ ತಕ್ಷಣ ಕೋಚ್ ಬಳಿ ಹೀಗೆ ಹೇಳ್ತಾನೆ "ಈಗ ನನ್ನ ತಾಯಿಗೆ ಮನೆ ಕಟ್ಟಿಸಬಹುದು" À.

2014ರಲ್ಲಿ ಮತ್ತೆ ಕ್ಲಬ್ ಚೇಂಚ್ ಮಾಡಿದ್ದ. ಈ ಬಾರಿ ಇಂಗ್ಲೆಂಡ್‍ನ ಸೌತಾಂಪ್ಟನ್ ತಂಡದ ಪ್ರಮುಖ ಆಟಗಾರನಾದ. ಆಸ್ಟನ್ ವಿಲ್ಲಾ ತಂಡದ ವಿರುದ್ದ ಕೇವಲ 2ನಿಮಿಷ 56 ಸೆಕೆಂಡ್‍ಗಳಲ್ಲಿ ಮತ್ತೆ ಹ್ಯಾಟ್ರಿಕ್ ಗೋಲು ದಾಖಲಿಸಿದ್ದ. ಇದು ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಇಂದಿಗೂ ದಾಖಲೆಯಾಗಿಯೇ ಉಳಿದಿದೆ. ಅದೇ ದಿನ ರಾತ್ರಿ ತಾಯಿಗೆ ಫೋನ್ ಮಾಡಿ ಹೇಳಿದ್ದಿಷ್ಟು "ಅಮ್ಮ ಇನ್ನು ಮುಂದೆ ನಾವು ಬಡವರಲ್ಲ".

ಲಿವರ್‍ಪೂಲ್ ತಂಡದ ಲೆಜೆಂಡ್ ಆಟಗಾರನಾದ ಸ್ಯಾಡಿಯೊ..! 

¨ರಿಗಾಲಿನಲ್ಲಿ ಆಡುತ್ತಿದ್ದ ಸ್ಯಾಡಿಯೊ ಫುಟ್‍ಬಾಲ್ ಜಗತ್ತಿನ ಅಪ್ರತಿಮ ಆಟಗಾರನಾಗಿ ಹೊರಹೊಮ್ಮಿದ್ದ. ಮಾನೆ ಆಟದ ದೊಡ್ಡ ಶಕ್ತಿ ಅಂದ್ರೆ ವೇಗ. ನಿಖರತೆ. ಒಂದೇ ಟಚ್‍ನಲ್ಲಿ ಗೋಲು ದಾಖಲಿಸುವ ಕ್ಲೀನಿಕಲ್ ಫಿನಿಷರ್. ಎಡಗಾಲಿನಿಂದ ಒಳಗೆ ಚೆಂಡನ್ನು ತಿರುಗಿಸಿ ಬಲಗಾಲಿನಿಂದ ಕಿಕ್ ಮಾಡುವುದು ಸ್ಯಾಡಿಯೊನ ಸಿಗ್ನೇಚರ್ ಸ್ಟೈಲ್. ಅಲ್ಲದೆ ಬಿಗ್ ಮ್ಯಾಚ್ ಪ್ಲೇಂiÀರ್ ಹೌದು. ಪ್ಲೇ ಮೇಕರ್ ಕೂಡ ಹೌದು.

ಹೀಗಾಗಿಯೇ ಸ್ಯಾಡಿಯೊ ಮಾನೆಯನ್ನು 2016ರಲ್ಲಿ ಲಿವರ್‍ಪೂಲ್ ಕ್ಲಬ್ ಬುಟ್ಟಿಗೆ ಹಾಕಿಕೊಳ್ಳುತ್ತದೆ. ವರ್ಷಕ್ಕೆ 300 ಕೋಟಿ ಸಂಭಾವನೆ ಪಡೆಯುವ ಆಫ್ರಿಕಾದ ಮೊದಲ ದುಬಾರಿ ಆಟಗಾರ ಎಂಬ ಗೌರವಕ್ಕೂ ಪಾತ್ರನಾಗುತ್ತಾನೆ. ತಂಡದ ಪರ ಅದ್ಭುತ ಪ್ರದರ್ಶನ ನೀಡಿದ್ದ ಮಾನೆ, 2019ರ ಚಾಂಪಿಯನ್ಸ್ ಲೀಗ್ ಹಾಗೂ 2020ರ ಪ್ರೀಮಿಯರ್ ಲೀಗ್ ಕಿರೀಟವನ್ನು ಲಿವರ್‍ಪೂಲ್ ತಂಡಕ್ಕೆ ತೊಡಿಸಿದ್ದ ಹೆಗ್ಗಳಿಕೆ ಸ್ಯಾಡಿಯೊ ಮಾನೆಗೆ ಸಲ್ಲುತ್ತದೆ.

ಲೈಫ್ ಈಸ್ ಬ್ಯೂಟಿಫುಲ್.. ಸಿಂಪಲ್ ಲೈಫ್.. ಗ್ರೇಟ್ ಹಾರ್ಟ್..!

ಸ್ಯಾಡಿಯೊ ಮಾನೆ ಕೋಟಿ ಕೋಟಿ ಬೆಲೆ ಬಾಳುವ ಆಟಗಾರ. ಆದ್ರೆ ಮಾನೆ ಲೈಫ್ ಸ್ಟೈಲ್..? ಮಾಸಿ ಹೋಗಿರುವ ಹಳೆಯ ಐಫೋನ್.. ಹಳೆಯ ಕಾರು. ನಾರ್ಮಲ್ ಟೀ- ಶರ್ಟ್. ಮಾಮೂಲಿ ಊಟ ತಿಂಡಿ. ಎಂದಿಗೂ ಶೋಕಿ ಜೀವನ ಮಾಡಿದವನಲ್ಲ. ಧರ್ಮದ ಬಗ್ಗೆ ಅಷೇ ನಿಷ್ಠೆ-ನಂಬಿಕೆ ಇರುವ ವ್ಯಕ್ತಿ. ರಂಜಾನ್ ತಿಂಗಳಲ್ಲಿ ಕಟ್ಟು ನಿಟ್ಟಿನ ಉಪವಾಸ ಮಾಡಿಕೊಂಡು ಫುಲ್ ಮ್ಯಾಚ್ ಆಡ್ತಾನೆ. ಇಫ್ತಾರ್ ಕೂಟದಲ್ಲಿ ಬರೀ ನೀರು - ಖರ್ಜುರ ಸೇವಿಸುತ್ತಾನೆ. ಹಾಗೇ ಮಸೀದಿಗೆ ಹೋಗಿ ಆವರಣ, ಶೌಚಾಲಯವನ್ನೂ ಕ್ಲೀನ್ ಮಾಡ್ತಾನೆ." ನೀನು ಒಬ್ಬ ಸೂಪರ್ ಸ್ಟಾರ್ ಆಟಗಾರ. ನೀನು ಟಾಯ್ಲೇಟ್ ಕ್ಲೀನ್ ಮಾಡೋದಾ ಅಂತ ಕೇಳಿದ್ರೆ, ನಗುತ್ತಾ ಹೀಗೆ ಹೇಳ್ತಾನೆ ಮಾನೆ, "ಅಲ್ಲಾಹುನ ಮನೆಯನ್ನು ಕ್ಲೀನ್ ಮಾಡುವುದರಲ್ಲಿ ನಾಚಿಕೆ ಏನಿದೆ" ಅಂತ..! ಎಂತಹ ದೈವಭಕ್ತ.. ಎಷ್ಟೊಂದು ಸಿಂಪಲ್ ಶ್ರೀಮಂತ ಆಟಗಾರ ಅಲ್ವಾ.?

ಹುಟ್ಟಿದ ಊರನ್ನು ಮರೆಯದ ಮಾಣಿಕ್ಯ..! 

ಅಂದ ಹಾಗೇ, ಸ್ಯಾಡಿಯೊ ಅಪ್ರತಿಮ ಆಟಗಾರ.. ಕೋಟಿ ಕೋಟಿ ದುಡ್ಡಿನ ಸಾಹುಕಾರ. ತನ್ನೂರಿನ ಜನರ ಮುಖದಲ್ಲಿ ನಗು ಮೂಡಿಸಿದ್ದ ಸರದಾರ. ಹೌದು, ಸ್ಯಾಡಿಯೊ ಅನೇಕ ಟ್ರೋಫಿಗಳನ್ನು ಗೆದ್ದಿರಬಹುದು. ನೂರಾರು ಗೋಲು ದಾಖಲಿಸಿರಬಹುದು. ಹಲವಾರು ಬಾರಿ ಪಂದ್ಯ ಶ್ರೇಷ್ಠ ಪಡೆದಿರಬಹುದು. ಆದ್ರೆ ಇದು ಯಾವುದು ಸ್ಯಾಡಿಯೊಗೆ ಸಮಾಧಾನ ತಂದಿಲ್ಲ. ತಾನು ಹುಟ್ಟಿ ಬೆಳೆದ ಕುಗ್ರಾಮ ಮಾದರಿ ಗ್ರಾಮವಾಗಬೇಕು. ತನ್ನಂತೆ ತನ್ನೂರಿನ ಜನರು ಬಡತನದ ಹಸಿವಿನಿಂದ ಸಂಕಟಪಡಬಾರದು. ಆಗ ಮಾತ್ರ ನಾನು ನೆಮ್ಮದಿಯಾಗಿರಬಹುದು. ಅದಕ್ಕಾಗಿ ತನ್ನ ಸಂಪಾದನೆಯ ಬಹುಪಾಲು ಹಣವನ್ನು ತನ್ನೂರಿನ ಜನರ ಕ್ಷೇಮಾಭಿವೃದ್ದಿಗೆ ಮೀಸಲಿಟ್ಟಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದಾನೆ..

ತನ್ನ ತಂದೆಗೆ ಸರಿಯಾದ ಚಿಕಿತ್ಸೆ ಇಲ್ಲದೆ ಸಾವನ್ನಪ್ಪಿದ್ದರು. ಆ ಸ್ಥಿತಿ ಇನ್ಯಾರಿಗೂ ಬರಬಾರದು ಅಂತ ಊರಿನಲ್ಲಿ 6 ಕೋಟಿ ವೆಚ್ಚದ ಸುಸಜ್ಜಿತ ಆಸ್ಪತ್ರೆಯನ್ನು ಕಟ್ಟಿಸಿದ್ದಾನೆ. 34 ಹಳ್ಳಿಗಳ ಜನರು ಈ ಆಸ್ಪತ್ರೆಯ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಅಲ್ಲದೆ ಪ್ರತಿ ತಿಂಗಳು 500 ಜನಕ್ಕೂ ಹೆಚ್ಚು ಮಂದಿ ಉಚಿತ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ತನ್ನಂತೆ ತನ್ನೂರಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಹುದು. ತಾನು ಓದಿಲ್ಲ. ಆದ್ರೆ ಊರಿನ ಮಕ್ಕಳು ಓದಬೇಕು ಅಂತ 5 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ಶಾಲೆಯನ್ನು ಕಟ್ಟಿಸಿದ್ದಾನೆ. ಫುಟ್‍ಬಾಲ್ ಅಂಗಣವನ್ನು ನಿರ್ಮಿಸಿದ್ದಾನೆ. ಸುಮಾರು 1200 ಮಕ್ಕಳಿಗೆ ಉಚಿತ ಶಿಕ್ಷಣ, ಲ್ಯಾಪ್‍ಟ್ಯಾಪ್, ಪುಸ್ತಕ, ಸಮವಸ್ತ್ರಗಳನ್ನು ವಿತರಿಸುತ್ತಿದ್ದಾನೆ.

ಹಾಗೇ ಊರಿನಲ್ಲಿರುವ ಸುಮಾರು 100ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಪ್ರತಿ ತಿಂಗಳು 20ಸಾವಿರ ಹಣವನ್ನು ನೀಡುತ್ತಿದ್ದಾನೆ. ಇವನ ಮುಂದೆ ಯಾವ ಗ್ಯಾರಂಟಿ ಯೋಜನೆಯೂ ಲೆಕ್ಕಕ್ಕೆ ಬರಲ್ಲ. ಯುವಕರಿಗೆ ಉದ್ಯೋಗ ಕಲ್ಪಿಸಲು ಪೆಟ್ರೋಲ್ ಬಂಕ್, ಪೋಸ್ಟ್ ಆಫೀಸ್ ಸೇರಿದಂತೆ ಸ್ವಂತ ಕಂಪೆನಿಗಳನ್ನು ಸ್ಥಾಪಿಸಿ ಉದ್ಯೋಗ ನೀಡುತ್ತಿದ್ದಾನೆ. ಅಲ್ಲದೆ ಊರಿನ ಜನರಿಗೆ ಕುಡಿಯುವ ನೀರು, ಇಂಟರ್ನೆಟ್ ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸಿದ್ದಾನೆ.

ಸೆನೆಗಲ್ ಫುಟ್‍ಬಾಲ್ ತಂಡದ ಹೆಮ್ಮೆ ಸ್ಯಾಡಿಯೋ ಮಾನೆ..!

ನಿಜ, ಸ್ಯಾಡಿಯೊ ಮಾನೆ ಸೆನೆಗಲ್ ಫುಟ್‍ಬಾಲ್ ತಂಡದ ಬಲೂ ದೊಡ್ಡ ಆಸ್ತಿ. ಒಬ್ಬ ಆಟಗಾರನಾಗಿ, ನಾಯಕನಾಗಿ ಸೆನೆಗಲ್ ತಂಡವನ್ನು ಉತ್ತುಂಗಕ್ಕೇರಿಸಿದ್ದ ಕೀರ್ತಿ ಸ್ಯಾಡಿಯೊಗೆ ಸಲ್ಲುತ್ತದೆ. ಆಫ್ರಿಕಾ ಕಪ್ ಸೇರಿದಂತೆ ಫಿಫಾ ವಿಶ್ವಕಪ್‍ನಲ್ಲೂ ಅದ್ಭುತ ಪ್ರದರ್ಶನ ನೀಡಿ ವಿಶ್ವದ ಬಲಿಷ್ಠ ತಂಡ ಎಂಬುದನ್ನು ಸಾಬೀತುಪಡಿಸಿದ್ದಾನೆ. ಆದ್ರೆ 2026ರ ಫಿಫಾ ವಿಶ್ವಕಪ್‍ನಲ್ಲಿ ಸೆನೆಗಲ್ ತಂಡ ಗ್ರೂಪ್ ಹಂತದಲ್ಲೇ ಹೊರಬೀಳುವ ಸ್ಥಿತಿಯಲ್ಲಿದೆ. ಈ ನಡುವೆ, ಸ್ಯಾಡಿಯೊ ಸೌದಿ ಅರೆಬಿಯಾದ ಎಐ ನಾಸರ್ ತಂಡದಲ್ಲಿ ಕ್ರಿಸ್ಟಿಯಾನೋ ರೊನಾಲ್ಡೊ ಜತೆಯಾಗಿ ಆಡುತ್ತಿದ್ದಾನೆ. ವೇತನ ವರ್ಷಕ್ಕೆ 330 ಕೋಟಿ ರೂ. ಆದ್ರೆ ಮನುಷ್ಯ ಮಾತ್ರ ಹಳೆಯ ಸ್ಯಾಡಿಯೊ ಮಾನೆನೇ..! ಒಂಚೂರು ಬದಲಾಗಿಲ್ಲ..!

ನನ್ನೂರಿನ ಜನರ ಖುಷಿಯೇ ನನಗೆ ನೆಮ್ಮದಿ..!

ನೀನು ಯಾಕೆ ಇಷ್ಟೊಂದು ಸಿಂಪಲ್ ಅನ್ನೋ ಪ್ರಶ್ನೆಗೆ ಸ್ಯಾಡಿಯೊ ಮಾನೆ ಉತ್ತರ ಹೀಗಿದೆ

"ನನ್ನ ಹಳೆಯ ಐಫೋನ್ ಇನ್ನು ಕೆಲಸ ಮಾಡುತ್ತಿದೆ. ನಾನು ಯಾಕೆ ಹೊಸ ಐ ಫೋನ್ ತೆಗೆದುಕೊಳ್ಳಬೇಕು ? ನಾನು ಯಾಕೆ ಐಶಾರಾಮಿ ಕಾರು ಖರೀದಿಸಬೇಕು?. ನಾನು ಯಾಕೆ ಡೈಮಂಡ್ ವಾಚ್ ಕಟ್ಟಬೇಕು? ನಾನು ಯಾಕೆ ಪ್ರೈವೆಟ್ ಜೆಟ್ ಖರೀದಿಸಬೇಕು.? ಆದರಿಂದ ಜಗತ್ತಿಗೆ ಏನು ಲಾಭ ? ನನಗೆ ಏನು ಸಿಗುತ್ತದೆ..? ನನಗೆ ಅದರಿಂದ ಖುಷಿ, ನೆಮ್ಮದಿ ಸಿಗುತ್ತೆ ಅಂತ ನಾನು ಅಂದುಕೊಂಡಿಲ್ಲ..! ನನ್ನ ಜನರಿಗೆ ಒಂದು ಹೊತ್ತಿನ ಊಟ, ಶಿಕ್ಷಣ, ಆರೋಗ್ಯ, ನೀರು ಸೇರಿದಂತೆ ಮೂಲಸೌಕರ್ಯ ಸಿಕ್ಕದ್ರೆ ಸಾಕು. ಅದೇ ನನಗೆ ನೆಮ್ಮದಿ. ಯಾಕಂದ್ರೆ ನಾನು ಹಸಿವನ್ನು ಸಹಿಸಿಕೊಂಡು ಬದುಕಿದ ಹಾಗೇ ನನ್ನ ಊರಿನ ಮಕ್ಕಳು ಹಾಗೇ ಬದುಕಬಾರದು".. ಅಬ್ಬಾ ಎಂಥ ಮನಸ್ಸು ನಿನ್ನದು ಮಹಾರಾಯ. ಖಂಡಿತವಾಗಿಯೂ ನೀನು ಬರೀ ಫುಟ್‍ಬಾಲ್ ಆಟಗಾರನಲ್ಲ. ಕಲ್ಮಶವಿಲ್ಲದ ಹೃದಯವಂತನೂ ಹೌದು. ಹೆಮ್ಮೆಯಿಂದ ಹೇಳಬಹುದು ನೀನು ಕೋಟಿಯಲ್ಲಿ ಒಬ್ಬನೇ ಒಬ್ಬ....!

ಒಟ್ಟಿನಲ್ಲಿ ಸ್ಯಾಡಿಯೊ ಮಾನೆ ಬರೀ ಫುಟ್‍ಬಾಲ್ ಆಟಗಾರನಲ್ಲ. ಆತನ ಜೀವನ ಚರಿತ್ರೆಯೇ ಬದುಕಿನ ಪಾಠ. ದುಡ್ಡು, ಹೆಸರು ಇವತ್ತು ಬರುತ್ತೆ.. ನಾಳೆ ಹೋಗುತ್ತೆ. ಆದ್ರೆ, ಮನುಷ್ಯತ್ವವನ್ನು ಮರೆಯಬಾರದು. ತಾನು ಬೆಳೆದು ಬಂದ ಹಾದಿಯನ್ನು ಮರೆಯಬಾರದು. ಇದಕ್ಕೆ ಜ್ವಲಂತ ನಿದರ್ಶನದ ಒಂದೇ ಹೆಸರು ಅದು ಸ್ಯಾಡಿಯೊ ಮಾನೆ. ಬಂಗಾರದಂತಹ ಮನಸ್ಸಿನ ಬಂಗಾರದ ಮನುಷ್ಯ..! 

ಸನತ್ ರೈ

By thebigbulletin.com - 02-07-2026


Ads in Post