ಧಾರವಾಡ: ಪ್ರಸಕ್ತ ವರ್ಷದ ಹಿಂಗಾರು ಮಳೆ ಉತ್ತಮವಾಗಿ ಆಗಲಿದ್ದು, ಬೆಳೆಗಳು ಸಮೃದ್ಧವಾಗಿ ಬೆಳೆಯಲಿವೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ಈ ಹಿಂದೆ ಮುಂಗಾರು ಮಳೆಯ ಕೊರತೆ, ನೀರಿಗಾಗಿ ಹಾಹಾಕಾರ ಹಾಗೂ ಆಹಾರದ ಅಭಾವ ಉಂಟಾಗುವ ಬಗ್ಗೆ ಹೇಳಿದ್ದೆ. ಅದರಂತೆ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಈ ಬಾರಿ ಹಿಂಗಾರು ಮಳೆ ಚೆನ್ನಾಗಿ ಆಗಲಿದ್ದು, ಜನರಿಗೆ ಸುಭಿಕ್ಷೆ ಹಾಗೂ ನೆಮ್ಮದಿ ದೊರೆಯಲಿದೆ. ಜಲಚರಗಳಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.
ಅಖಂಡ ಕರ್ನಾಟಕ ಒಂದಾಗಿರಬೇಕು. ಇದಕ್ಕೆ ಸಾಹಿತ್ಯಿಕ, ಸಾಂಸ್ಕೃತಿಕ ಪರಂಪರೆ, ಜನಜೀವನ ಹಾಗೂ ಮಳೆ-ಬೆಳೆಗಳ ಸಮೃದ್ಧಿ ಪ್ರಮುಖವಾಗಿವೆ ಎಂದು ಶ್ರೀಗಳು ಹೇಳಿದರು. ಧಾರವಾಡದಲ್ಲಿ ನಡೆಯುತ್ತಿರುವ ಜಂಬೂ ಸವಾರಿ ಅಖಂಡ ಕರ್ನಾಟಕದ ಸಂಸ್ಕೃತಿಯ ಪ್ರತೀಕವಾಗಿದೆ. ಮೈಸೂರು ಮತ್ತು ಉತ್ತರ ಕರ್ನಾಟಕದಲ್ಲಿ ನಡೆಯುವ ಜಂಬೂ ಸವಾರಿಗಳು ಏಕತೆಯ ಸಂದೇಶ ಸಾರುತ್ತವೆ. ಮನುಷ್ಯರು ಉತ್ತಮವಾಗಿ ಬದುಕಲು ಹಿರಿಯರ ಆದರ್ಶಗಳನ್ನು ಪಾಲಿಸುವುದು ಅಗತ್ಯ. ದಸರಾ ಕಾರ್ಯಕ್ರಮವು ಅಂತಹ ಆದರ್ಶಗಳ ಸಂಕೇತವಾಗಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯ ರಾಜಕಾರಣದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯದ ಬಗ್ಗೆ ನನಗಿಂತ ನಿಮಗೇ ಹೆಚ್ಚು ತಿಳಿದಿದೆ ಎಂದು ಹೇಳಿದರು. ಎಲ್ಲರಿಗೂ ಒಳ್ಳೆಯದಾಗಲಿ, ದೈವಕೃಪೆ ದೊರೆಯಲಿ ಎಂದು ಹಾರೈಸಿದ ಅವರು, ಜನರಿಗೆ ಮುಖ್ಯವಾಗಿ ಬೇಕಾಗಿರುವುದು ಉತ್ತಮ ಮಳೆ ಮತ್ತು ಬೆಳೆ. ರೋಗ-ರುಜಿನಗಳು ದೂರವಾಗಿ ಜನಜೀವನದಲ್ಲಿ ನೆಮ್ಮದಿ ಹಾಗೂ ಶಾಂತಿ ನೆಲೆಸಬೇಕು ಎಂದು ಆಶಯ ವ್ಯಕ್ತಪಡಿಸಿದರು.