ಲಂಕೆಯನ್ನು ಸುಟ್ಟ ಹನುಮನಂತೆ ಧಗಧಗಿಸಿ ಬಿಟ್ಟ ಈ ಬಾಲಪ್ರತಾಪಿ..! ಅವನು ದ್ರಾವಿಡ್ ಗರಡಿಯ ಹುಡುಗ ನಿಜ.. ಆದರೆ ಅವನೊಳಗಿರುವವನು ದ್ರಾವಿಡ್’ರಂಥಾ ಸಂತನಲ್ಲ.. ವಿರಾಟ್ ಕೊಹ್ಲಿಯಂಥಾ ಸಿಡಿಲು.. ಕೆಣಕಿದರೆ ಬೆಂಕಿಯಂತೆ ಧಗಧಗಿಸುವ ವಿರಾಟ್ ಕೊಹ್ಲಿಯನ್ನು ನೋಡುತ್ತಾ ಬೆಳೆದ ಹುಡುಗ..
‘’ವಿರಾಟ್ ಭೈಯ್ಯಾ ನನ್ನ ರೋಲ್ ಮಾಡೆಲ್’ ಎಂದು ಕಳೆದ ಐಪಿಎಲ್ ಸಂದರ್ಭದಲ್ಲಿ ಹೇಳಿದ್ದ ವೈಭವ್ ಸೂರ್ಯವಂಶಿ ಎದುರಲ್ಲಿದ್ದವರು ಕೊಟ್ಟದ್ದನ್ನು ಬಡ್ಡಿ ಸಮೇತ ವಾಪಸ್ ಕೊಡುವ ವಿರಾಟನ ಗುಣದವನು ನಾನು ಎಂಬುದನ್ನು ತೋರಿಸಿ ಬಿಟ್ಟ. ಬಹುಶಃ ಆರು ದಿನಗಳ ಹಿಂದೆ ಆ ಘಟನೆ ನಡೆಯದೇ ಹೋಗಿದ್ದರೆ ವೈಭವ್ ಸೂರ್ಯವಂಶಿ ಇವತ್ತು ಈ ಪರಿ ಬೆಂಕಿಯಾಗುತ್ತಿರಲಿಲ್ಲವೇನೋ.. 14, 44, 21, 38.. ‘ಎ’ ತಂಡಗಳ ತ್ರಿಕೋನ ಸರಣಿಯ ನಾಲ್ಕು ಲೀಗ್ ಪಂದ್ಯಗಳಲ್ಲಿ ವೈಭವ್ ಸೂರ್ಯವಂಶಿ ಹೊಡೆದಿದ್ದ ರನ್. ’ಎಲ್ಲಿ ಹೋದ ನಿಮ್ಮ ಹೀರೋ..? ಎಲ್ಲಿ ಕಳೆದು ಹೋಯಿತು ಐಪಿಎಲ್’ನ ಆ ಪೌರುಷ..?’’ ವಿಷಕಾರಿದವರು ಹಲವರು, ಮನಸ್ಸಿನ ವಿಕೃತಿಯನ್ನು ಹೊರಹಾಕಿದವರು ಹತ್ತಾರು ಮಂದಿ.. ಎಲ್ಲರಿಗೂ ಎಲ್ಲದಕ್ಕೂ ಉತ್ತರ ಈ ಆಟ.. 4 4 4 6 6 0 6 4 4 6 6 4 4 2 4 1 0 4 1 0 0 4 6 0 6 1 6 1 W ಶ್ರೀಲಂಕಾ ಎ ವಿರುದ್ಧದ ತ್ರಿಕೋನ ಸರಣಿಯ ಫೈನಲ್’ನಲ್ಲಿ 29 ಎಸೆತಗಳಲ್ಲಿ 94 ರನ್. ಜೂನ್ 15ರಂದು ಸಣ್ಣ ಕಿಡಿ ಹೊತ್ತಿಕೊಂಡಿತ್ತು. ಇವತ್ತು ಅದೇ ಕಿಡಿ ಕಾಡ್ಗಿಚ್ಚಿನಂತೆ ಧಗಧಗಿಸಿ ಬಿಟ್ಟಿತು. ಆ ಕಾಡ್ಗಿಚ್ಚಿಗೆ ಭಸ್ಮವಾಗಿದ್ದು ಒಂದು ವಿಶ್ವದಾಖಲೆ. 11 ಎಸೆತಗಳಲ್ಲಿ 50 ರನ್.. ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗದ ಅರ್ಧಶತಕ ಬಾರಿಸಿ ಬಿಟ್ಟ ಸೂರ್ಯವಂಶಿ. ಆರೇ ಆರು ರನ್’ಗಳಿಂದ ಕೈ ತಪ್ಪಿದ್ದು ವಿಶ್ವದಾಖಲೆಯ ಶತಕ. ಹೌದು.. ಹುಡುಗ ಆ ದಿನ ಹದ್ದು ಮೀರಿದ್ದ.