Search


ಅನಂತ ಪದ್ಮನಾಭ ದೇವಾಲಯದಲ್ಲಿ ಕಳ್ಳತನ; ಕೋಟ್ಯಾಂತರ ಮೌಲ್ಯದ ವಜ್ರಾಭರಣಗಳು ನಾಪತ್ತೆ..!

ತಿರುವನಂತಪುರಂ: ದೇಶದ ಅತ್ಯಂತ ಶ್ರೀಮಂತ ದೇವಾಲಯವಾದ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಾಲಯದಲ್ಲಿ ಚಿನ್ನ ಮತ್ತು ವಜ್ರದ ಅಮೂಲ್ಯ ಆಭರಣಗಳು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಶತಮಾನಗಳಷ್ಟು ಹಳೆಯದಾದ ಅಮೂಲ್ಯ ವಸ್ತುಗಳು ದೇವಾಲಯದಿಂದ ನಾಪತ್ತೆಯಾಗಿರುವುದು ದೇಶವ್ಯಾಪ್ತಿ ಕಳವಳಕ್ಕೆ ಕಾರಣವಾಗಿದ್ದು. ಘಟನೆಯ ಕುರಿತು ಕೇರಳದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕೇರಳದ ಪೊಲೀಸ್‌ ಮಹಾನಿರ್ದೇಶಕರು, ಗೃಹ ಕಾರ್ಯದರ್ಶಿಗೆ ಸಲ್ಲಿಸಿರುವ ರಹಸ್ಯ ವರದಿಯಲ್ಲಿ ದೇವಸ್ಥಾನದಿಂದ ಆಭರಣಗಳು ಕಳುವಾಗಿರುವ ಬಗ್ಗೆಉಲ್ಲೇಖಿಸಿದ್ದಾರೆ. ದೇವಾಲಯದ ದಾಸ್ತಾನನ್ನು ಪರಿಶೀಲಿಸಿದಾಗ, ಅಲ್ಲಿ ಸುಮಾರು 78 ಗ್ರಾಂ ಚಿನ್ನದ ಆಭರಣ ಮತ್ತು ಅತ್ಯಂತ ಬೆಲೆಬಾಳುವ "ವೈರಮ್‌ ನಾಮ" ಎಂದು ಕರೆಯಲ್ಪಡುವ ವಜ್ರಖಚಿತ ತುಂಡು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. 

ದುರಸ್ಥಿಗೆ ಕೊಟ್ಟಿದ್ದ ವಜ್ರಾಭರಣ, ಇನ್ನು ವಾಪಾಸ್‌ ಬಂದಿಲ್ಲ...!

ಇನ್ನು ದೇವಾಲಯದ ಆಡಳಿತ ಮಂಡಳಿಯ ಪ್ರಕಾರ  ಈ ‘ವೈರಮ್ ನಾಮ’ವನ್ನು ದುರಸ್ತಿ ಕಾರ್ಯಕ್ಕಾಗಿ ಹಲವು ತಿಂಗಳ ಹಿಂದೆಯೇ ಹೊರಗೆ ತೆಗೆದುಕೊಂಡು ಹೋಗಲಾಗಿತ್ತು. ಆದರೆ, ಅಂದಿನಿಂದ ಇಂದಿನವರೆಗೂ ಅದನ್ನು ಮರಳಿ ತರಲಾಗಿಲ್ಲ. ಅದೇ ರೀತಿ, ಸುಮಾರು ಆರು ತಿಂಗಳ ಹಿಂದೆ ನಿರ್ವಹಣೆಗಾಗಿ ಕಳುಹಿಸಲಾಗಿದ್ದ ಚಿನ್ನದ ದೀಪವೂ ಸಹ ನಿಗೂಢವಾಗಿ ಕಣ್ಮರೆಯಾಗಿದೆ.

ಬಿಗಿ ಭದ್ರತೆಗೆ ಡಿಜಿಪಿ ಖಡಕ್ ಶಿಫಾರಸು

ದೇವಾಲಯದ ಅಸ್ತಿತ್ವದಲ್ಲಿರುವ ಭದ್ರತಾ ವ್ಯವಸ್ಥೆಗಳ ಬಗ್ಗೆ ಡಿಜಿಪಿ ತೀವ್ರ ಕಳವಳ ವ್ಯಕ್ತಪಡಿಸಿದ್ದು, ತಕ್ಷಣವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಕೆಲವು ಪ್ರಮುಖ ಶಿಫಾರಸುಗಳನ್ನು ಮಾಡಿದ್ದಾರೆ. ದೇವಾಲಯದ ಎಲ್ಲಾ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ಅತ್ಯಂತ ಸುರಕ್ಷಿತ ಕಪಾಟುಗಳಿಗೆ ಸ್ಥಳಾಂತರಿಸಬೇಕು. ಭಕ್ತರು ನೀಡುವ ಕಾಣಿಕೆಗಳನ್ನು ಕಡ್ಡಾಯವಾಗಿ ಮೀಸಲಾದ ಲಾಕರ್‌ಗಳಲ್ಲಿಯೇ ಸಂಗ್ರಹಿಸಬೇಕು. ದೇವಾಲಯದ ಪ್ರತಿಯೊಂದು ಪ್ರವೇಶ ದ್ವಾರದಲ್ಲೂ ಕಟ್ಟುನಿಟ್ಟಿನ ತಪಾಸಣೆ ನಡೆಸಬೇಕು ಮತ್ತು ಸರಿಯಾದ ತಪಾಸಣೆ ಇಲ್ಲದೆ ಯಾರನ್ನೂ ಒಳಗಡೆ ಬಿಡಬಾರದು ಎಂದು ಸೂಚಿಸಲಾಗಿದೆ.

By thebigbulletin.com - 27-05-2026


Ads in Post