ಬೆಂಗಳೂರು: ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸುವಂತಹ ಹೇಳಿಕೆ ನೀಡಿದ್ದಾರೆ. ಶೀಘ್ರದಲ್ಲಿ “ದೇಶವೇ ಅಲ್ಲೋಲ ಕಲ್ಲೋಲ ಆಗುವ ವಿಷಯವನ್ನು ಹೇಳುತ್ತೇನೆ” ಎಂದು ಹೇಳಿರುವ ಅವರು, ಶೀಘ್ರದಲ್ಲೇ ರಾಜಕೀಯಕ್ಕೆ ಸಂಭಂದಿಸಿದ ದೊಡ್ಡ ಸುದ್ದಿ ಬಹಿರಂಗಗೊಳಿಸುವ ಹಿಂಟ್ ನೀಡಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿ ಮಾಧ್ಯಮಗಳ ಜೊತೆ.ಮಾತನಾಡಿದ ಕುಮಾರಸ್ವಾಮಿ, ಮುಂದಿನ ದಿನಗಳಲ್ಲಿ ಒಂದೊಂದೇ ವಿಚಾರವನ್ನು ಜನರ ಮುಂದೆ ಬಹಿರಂಗಪಡಿಸುವುದಾಗಿ ತಿಳಿಸಿದ್ದಾರೆ. “ನಿಮಗೆ ದಿನಕ್ಕೊಂದು ಸುದ್ದಿ ಕೊಡುತ್ತೇನೆ. ಆಗ ಹೆಚ್.ಡಿ. ಕುಮಾರಸ್ವಾಮಿ ಏನು ಎಂಬುದು ಗೊತ್ತಾಗುತ್ತದೆ” ಎಂದು ಹೇಳಿದ್ದಾರೆ.ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧವೂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಕೆಪಿಎಸ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಅಕ್ರಮಗಳ ಆರೋಪ ಮಾಡಿರುವ ಅವರು, ಒಎಂಆರ್ ಶೀಟ್ಗಳಲ್ಲಿ ತಿದ್ದುಪಡಿ ಮಾಡಿ ಕೆಲ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆಯೇ ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ.
ತಾವು ಹೇಳುತ್ತಿರುವ ಆರೋಪಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಹೊಂದಿರುವುದಾಗಿ ಸೂಚಿಸಿರುವ ಕುಮಾರಸ್ವಾಮಿ, ಸೂಕ್ತ ಸಮಯದಲ್ಲಿ ಅವುಗಳನ್ನು ಬಹಿರಂಗಪಡಿಸುವುದಾಗಿ ಹೇಳಿದ್ದಾರೆ. ಕುಮಾರಸ್ವಾಮಿ ಅವರ ಈ ಹೇಳಿಕೆ ಇದೀಗ ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದ್ದು, ಅವರು ಯಾವ ವಿಚಾರವನ್ನು ಬಹಿರಂಗಪಡಿಸಲಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ.