Search


ಕಾಂಗ್ರೆಸ್ ಪಕ್ಷವನ್ನ ಟ್ರ್ಯಾಪ್ ಮಾಡ್ತಿದ್ದಾರೆ; ED ದಾಳಿ ಬಗ್ಗೆ ಸಿಎಂ ಪ್ರತಿಕ್ರಿಯೆ

ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ ಮನೆ ಮೇಲೆ ನಡೆದ ED ದಾಳಿಯ ಕುರಿತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, 'ಜಾರಕಿಹೊಳಿ ಯಾವುದೇ ತಪ್ಪು ಮಾಡಿಲ್ಲ. ಅವರು ಕಾನೂನು ಚೌಕಟ್ಟಿನಲ್ಲಿಯೇ ವ್ಯವಹಾರ ನಡೆಸಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಅವರು ತಮ್ಮ ಸಹೋದ್ಯೋಗಿಯಾಗಿದ್ದು, ಅವರ ವ್ಯವಹಾರಗಳಲ್ಲಿ ಯಾವುದೇ ಅಕ್ರಮವಿಲ್ಲ ಎಂದು ಸಮರ್ಥಿಸಿಕೊಂಡರು. “ಹೊರಗಡೆ ಹೋಗಬಾರದು, ವ್ಯವಹಾರ ಮಾಡಬಾರದು ಎಂದು ಎಲ್ಲಿದೆ? ಇದೆಲ್ಲ ರಾಜಕೀಯ. ಇನ್ನೂ ಮೂರ್ನಾಲ್ಕು ಜನರ ಮೇಲೂ ದಾಳಿ ನಡೆಯಬಹುದು. ಇಡೀ ಕಾಂಗ್ರೆಸ್ ಪಕ್ಷವನ್ನೇ ಟ್ರ್ಯಾಪ್ ಮಾಡಲು ತಯಾರಿ ನಡೆಯುತ್ತಿದೆ” ಎಂದು ಆರೋಪಿಸಿದರು. ಬಿಜೆಪಿಯವರ ಮೇಲೆ ದಾಳಿ ನಡೆಯುತ್ತಿಲ್ಲ. ಸಮುದಾಯವೊಂದನ್ನು ಮಾತ್ರವಲ್ಲ, ಇಡೀ ಪಕ್ಷವನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದರು.

ವಂದೇ ಮಾತರಂ ಗೀತೆ ವಿಚಾರದಲ್ಲಿಯೂ ಕಾಂಗ್ರೆಸ್ ಪಕ್ಷದ ನಿಲುವು ಸ್ಪಷ್ಟವಾಗಿದೆ. ಈ ವಿಚಾರವನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು. ಇದೇ ವೇಳೆ ಅರಣ್ಯ ಹುತಾತ್ಮರಿಗೆ ಗೌರವ ಸಲ್ಲಿಸಲಾಗಿದ್ದು, ಅರಣ್ಯ ಸಿಬ್ಬಂದಿಯೊಂದಿಗೆ ಪೊಲೀಸ್ ಸಿಬ್ಬಂದಿಯೂ ಭತ್ಯೆಗಾಗಿ ಮನವಿ ಮಾಡಿದ್ದಾರೆ. ಈ ಕುರಿತು ಚರ್ಚಿಸುವುದಾಗಿ ತಿಳಿಸಿದರು.

ಅಕ್ರಮವಾಗಿ ಬಂದೂಕು ಹೊಂದಿರುವವರಿಗೆ ನವೆಂಬರ್ 1ರವರೆಗೆ ಶಸ್ತ್ರಾಸ್ತ್ರಗಳನ್ನು ಸರ್ಕಾರಕ್ಕೆ ಒಪ್ಪಿಸಲು ಅವಕಾಶ ನೀಡಲಾಗಿದೆ. ಪೊಲೀಸರು ಮತ್ತು ಅಧಿಕಾರಿಗಳು ಜನರನ್ನು ಮನವೊಲಿಸಬೇಕು. ಬಂದೂಕನ್ನು ಒಪ್ಪಿಸುವವರು ಕ್ಷಮೆಯಾಚನಾ ಪತ್ರ ನೀಡಿದರೆ ಸಾಕು. ನಿಗದಿತ ಅವಧಿಯ ಬಳಿಕವೂ ಶರಣಾಗದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ರಕ್ಷಣೆಗಾಗಿ ಬಂದೂಕಿನ ಅಗತ್ಯವಿದ್ದರೆ ಕಾನೂನುಬದ್ಧವಾಗಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.

ಕಸ್ತೂರಿರಂಗನ್ ವರದಿ ವಿಚಾರವಾಗಿ ಮಂಗಳೂರಿಗೆ ಭೇಟಿ ನೀಡಿದ ಬಳಿಕ ಇನ್ನೂ ಮೂರು-ನಾಲ್ಕು ಜಿಲ್ಲೆಗಳಿಗೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸುವುದಾಗಿ ಡಿಕೆ ಶಿವಕುಮಾರ್ ತಿಳಿಸಿದರು. ರೈತರ ಸಮಸ್ಯೆ, ಬರ ಪರಿಸ್ಥಿತಿ ಹಾಗೂ ಕಸ್ತೂರಿರಂಗನ್ ವರದಿ ಸಂಬಂಧಿತ ವಿಚಾರಗಳ ಕುರಿತು ವಿಶೇಷ ಅಧಿವೇಶನ ಕರೆಯಲಾಗಿದೆ ಎಂದರು.

By Ravikumar - 11-09-2026


Ads in Post