ಕಾನೂನು ವಿರೋಧಿ ಚಟುವಟಿಕೆ ಮಾಡಿದ ಆರೋಪದ ಮೇಲೆ ಜೈಲಿನಲ್ಲಿರುವ ಉಮರ್ ಖಾಲಿದ್ ನನ್ನು ದೇಶಪ್ರೇಮಿ ಎಂದು ಕರೆದು ವಿವಾದಕ್ಕೆ ಈಡಾಗಿದ್ದ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಮತ್ತೊಮ್ಮೆ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ, ಉಮರ್ ಖಾಲಿದ್ ನನ್ನು ದೇಶದ್ರೋಹಿ ಎನ್ನುವವರೇ ನಿಜವಾದ ದೇಶದ್ರೋಹಿಗಳು ಎಂದು ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ದೇಶದ ಜನರ ಪರವಾಗಿ ಮಾತನಾಡಿದ ವಿದ್ಯಾವಂತ ಹಾಗೂ ಜನಪರ ಚಳವಳಿಗಾರ ಉಮರ್ ಖಾಲಿದ್ ಅವರನ್ನು ದೇಶದ್ರೋಹಿ ಎನ್ನುವವರೇ ನಿಜವಾದ ರಾಷ್ಟ್ರದ್ರೋಹಿಗಳು ಎಂದು ಹರಿಪ್ರಸಾದ್ ಆರೋಪಿಸಿದ್ದಾರೆ. ಉಮರ್ ಖಾಲಿದ್ ಆರ್ಎಸ್ಎಸ್ನಂತೆ ಪಾಕಿಸ್ತಾನದೊಂದಿಗೆ ಗುಪ್ತ ಚರ್ಚೆ ನಡೆಸಿಲ್ಲ. ಸಂಘ ಪರಿವಾರದವರಂತೆ ಐಎಸ್ಐ ಏಜೆಂಟ್ಗಳೊಂದಿಗೆ ಮಾತುಕತೆ ನಡೆಸಿಲ್ಲ. ಆಹ್ವಾನವಿಲ್ಲದೆ ಪಾಕಿಸ್ತಾನ ಪ್ರಧಾನಿ ಕುಟುಂಬದ ಕಾರ್ಯಕ್ರಮಕ್ಕೆ ತೆರಳಿ ಬಿರಿಯಾನಿ ತಿಂದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ರಾಜಕೀಯವಾಗಿ ಉತ್ತರಿಸಬೇಕಾದ ಪ್ರಶ್ನೆಗಳಿಗೆ ‘ದೇಶದ್ರೋಹ’ ಎಂಬ ಪದ ಬಳಸುತ್ತಿದ್ದಾರೆ ಎಂದು ಹರಿಪ್ರಸಾದ್ ಟೀಕಿಸಿದ್ದಾರೆ. ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಪ್ರತಿಯೊಬ್ಬರನ್ನೂ ದೇಶದ್ರೋಹಿ ಎಂದು ಕರೆಯುವುದು ಪ್ರಜಾಪ್ರಭುತ್ವದ ಭಾಷೆಯಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಪಕ್ಷದ ಬಗ್ಗೆ ವಿಜಯೇಂದ್ರ ಮಾಡಿರುವ ಟೀಕೆಗೂ ಪ್ರತಿಕ್ರಿಯಿಸಿದ ಹರಿಪ್ರಸಾದ್, “ಕಾಂಗ್ರೆಸ್ ಮನೆ ಮೂರು ಬಾಗಿಲು ಎಂದು ಹೇಳುವ ವಿಜಯೇಂದ್ರ ಮೊದಲು ತಮ್ಮ ಮನೆಯ ಬಾಗಿಲುಗಳನ್ನು ಎಣಿಸಿಕೊಳ್ಳಲಿ. ಬಿಜೆಪಿ ಮನೆ ಈಗ ‘ನೂರು ಬಾಗಿಲು’ ಆಗಿದೆ” ಎಂದು ವ್ಯಂಗ್ಯವಾಡಿದ್ದಾರೆ. “ಕಾಂಗ್ರೆಸ್ ಕಚೇರಿಯ ಬಾಗಿಲು, ಕಿಟಕಿಗಳನ್ನು ಎಣಿಸುತ್ತಾ ಕೂರಲು ವಿಜಯೇಂದ್ರ ಕೆಪಿಸಿಸಿಯ ವಾಚ್ಮನ್ ಆಗಿದ್ದಾರೆಯೇ?” ಎಂದು ಪ್ರಶ್ನಿಸಿದ್ದಾರೆ.