ನವದೆಹಲಿ: ದೆಹಲಿಯಲ್ಲಿ ಶನಿವಾರ ನಡೆಯಲಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆಗೆ ಮುನ್ನ ಪೊಲೀಸರು ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಿದ್ದಾರೆ. ಪ್ರತಿಭಟನೆಗಳ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವ ಪೊಲೀಸರು, ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡುವಂತೆ ಮಸೀದಿಯ ಮೈಕ್ ಮೂಲಕ ಪೋಷಕರಿಗೆ ಮನವಿ ಮಾಡಿದ್ದಾರೆ.
ಹಳೆ ದೆಹಲಿಯ ಚಾಂದನಿ ಚೌಕ್ ಪ್ರದೇಶದ ಟೌನ್ ಹಾಲ್ ಸಮೀಪದಲ್ಲಿರುವ ಶಾಹಿ ಮಸೀದಿಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಈ ಮನವಿ ಮಾಡಿದ್ದಾರೆ. ಪ್ರಾರ್ಥನೆಗೆ ಆಗಮಿಸಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಅಧಿಕಾರಿ, ಶಾಂತಿ ಕಾಪಾಡುವಂತೆ ಹಾಗೂ ವದಂತಿಗಳು ಮತ್ತು ಪ್ರಚೋದನಕಾರಿ ಸಂದೇಶಗಳಿಗೆ ಕಿವಿಗೊಡದಂತೆ ಸೂಚಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ತಮ್ಮ ಮಕ್ಕಳು, ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ಅನಗತ್ಯವಾಗಿ ಜನಸಂದಣಿ ಸೇರುವುದನ್ನು ತಪ್ಪಿಸುವಂತೆ ತಿಳಿಹೇಳಬೇಕು ಎಂದು ಪೊಲೀಸ್ ಅಧಿಕಾರಿ ಮನವಿ ಮಾಡಿದ್ದಾರೆ. ಪ್ರತಿಭಟನೆಗಳಲ್ಲಿ ಭಾಗವಹಿಸದಂತೆ ಮಕ್ಕಳಿಗೆ ಸೂಚಿಸಬೇಕು ಹಾಗೂ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಾರದು ಎಂದು ಹೇಳಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಿರೋಧಿಸಿ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು CJP ಕರೆ ನೀಡಿದೆ. ಆದರೆ, ಕಾನೂನು ಸುವ್ಯವಸ್ಥೆಯ ಆತಂಕದ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ನಿರ್ಬಂಧ ವಿಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ನಿರ್ಬಂಧಗಳನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಾಗಿದ್ದು, ಮೆಟ್ರೋ ನಿಲ್ದಾಣಗಳನ್ನು ಮುಚ್ಚಿರುವುದು, ರೈಲುಗಳ ಸಂಚಾರ ರದ್ದುಗೊಳಿಸಿರುವುದು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗಿರುವುದರ ಕುರಿತು ವಕೀಲರು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರತಿಭಟಿಸುವ ಹಕ್ಕು ಮತ್ತು ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳು ಲಭ್ಯವಾಗುವ ಹಕ್ಕಿನ ನಡುವೆ ಸಮತೋಲನ ಕಾಯ್ದುಕೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೆ, ನಿರ್ಬಂಧಗಳಿಗೆ ಸಂಬಂಧಿಸಿದಂತೆ ಪೊಲೀಸರು ಹೊರಡಿಸಿರುವ ಅಧಿಕೃತ ಆದೇಶವನ್ನು ಸಲ್ಲಿಸುವಂತೆ ಸೂಚಿಸಿದೆ. ಈ ನಡುವೆ, ಪ್ರತಿಭಟನೆಗೂ ಮುನ್ನ ದೆಹಲಿಯಾದ್ಯಂತ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದ್ದು, ವದಂತಿಗಳನ್ನು ನಂಬದಂತೆ ಮತ್ತು ಸಾರ್ವಜನಿಕ ಶಾಂತಿಗೆ ಧಕ್ಕೆ ಉಂಟುಮಾಡಬಹುದಾದ ಗುಂಪುಗಳಿಂದ ದೂರವಿರುವಂತೆ ಪೊಲೀಸರು ಜನರಿಗೆ ಮನವಿ ಮಾಡಿದ್ದಾರೆ.