Search


ಏಕರೂಪ ನಾಗರಿಕ ಸಂಹಿತೆ ಜಾರಿಗೆ ಮುಹೂರ್ತ ಫಿಕ್ಸ್; ದೊಡ್ಡ ಘೋಷಣೆ ಮಾಡಿದ ಅಮಿತ್ ಷಾ

ನವದೆಹಲಿ: ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ (Uniform Civil Code - UCC) ಜಾರಿ ಕುರಿತು ಹಲವು ವರ್ಷಗಳಿಂದ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಇದೀಗ ಬಿಜೆಪಿ ಹಾಗೂ ಎನ್‌ಡಿಎ ಆಡಳಿತವಿರುವ ರಾಜ್ಯಗಳಲ್ಲಿ ಯುಸಿಸಿ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಹತ್ವದ ಹೇಳಿಕೆ ನೀಡಿದ್ದಾರೆ. 2029ರೊಳಗೆ ಎನ್‌ಡಿಎ ಆಡಳಿತದಲ್ಲಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರಲಿದೆ ಎಂದು ಅವರು ಹೇಳಿದ್ದಾರೆ.

ಯುಸಿಸಿ ಕುರಿತು ಮಾತನಾಡಿದ ಅಮಿತ್ ಶಾ, ಕಳೆದ 12 ವರ್ಷಗಳಲ್ಲಿ ಬಿಜೆಪಿ ನೀಡಿದ್ದ ಹಲವು ಭರವಸೆಗಳನ್ನು ಈಡೇರಿಸಲಾಗಿದೆ. ತ್ರಿವಳಿ ತಲಾಖ್‌ ನಿಷೇಧದ ಮೂಲಕ ಮುಸ್ಲಿಂ ಮಹಿಳೆಯರಿಗೆ ಸಮಾನ ಹಕ್ಕು ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇದೀಗ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವತ್ತ ಸರ್ಕಾರ ಮುಂದಾಗಿದೆ ಎಂದು ಅವರು ತಿಳಿಸಿದರು.

ಬಿಜೆಪಿ ಹಾಗೂ ಎನ್‌ಡಿಎ ಆಡಳಿತವಿರುವ 21 ರಾಜ್ಯಗಳಲ್ಲಿ ಯುಸಿಸಿ ಜಾರಿಗೆ ತರಲಾಗುವುದು. 2029ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. 2029ರಲ್ಲಿ ಮುಂದಿನ ಲೋಕಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಅದಕ್ಕೂ ಮುನ್ನ ಯುಸಿಸಿ ಜಾರಿಯಾಗುವ ಸಾಧ್ಯತೆಯ ಕುರಿತು ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಭಾರತಕ್ಕೆ ಯುಸಿಸಿ ಅಗತ್ಯ: ಅಮಿತ್ ಶಾ

ಏಕರೂಪ ನಾಗರಿಕ ಸಂಹಿತೆ ಭಾರತಕ್ಕೆ ಅಗತ್ಯವಾಗಿದ್ದು, ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಬದ್ಧವಾಗಿದೆ, ವಿವಿಧ ಸಮುದಾಯಗಳಿಗೆ ಸಂಬಂಧಿಸಿದ ವೈಯಕ್ತಿಕ ಕಾನೂನುಗಳ ಬದಲಾಗಿ, ನಾಗರಿಕರಿಗೆ ಸಮಾನ ಕಾನೂನು ವ್ಯವಸ್ಥೆ ಕಲ್ಪಿಸುವುದು ಯುಸಿಸಿಯ ಪ್ರಮುಖ ಉದ್ದೇಶವಾಗಿದೆ,  ಕಳೆದ 12 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಇನ್ನಷ್ಟು ಮಹತ್ವದ ಯೋಜನೆಗಳು ಹಾಗೂ ಐತಿಹಾಸಿಕ ಮಸೂದೆಗಳನ್ನು ತರಲಾಗುವುದು ಎಂದು ಅವರು ತಿಳಿಸಿದ್ದಾರೆ. 2014ಕ್ಕೂ ಮೊದಲು ಭಾರತೀಯ ರಾಜಕೀಯವು ಭ್ರಷ್ಟಾಚಾರ, ಜಾತಿವಾದ ಮತ್ತು ವಂಶವಾದದ ಸುತ್ತ ಕೇಂದ್ರೀಕೃತವಾಗಿತ್ತು. ಆದರೆ 2014ರ ಬಳಿಕ ರಾಜಕೀಯದ ಬಗ್ಗೆ ಜನರ ದೃಷ್ಟಿಕೋನ ಬದಲಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಜನರು ಇದೀಗ ಸರ್ಕಾರವನ್ನು ಅದರ ಆಡಳಿತ, ಕಾರ್ಯಕ್ಷಮತೆ ಮತ್ತು ಅಭಿವೃದ್ಧಿಯ ಆಧಾರದ ಮೇಲೆ ಮೌಲ್ಯಮಾಪನ ಮಾಡುತ್ತಿದ್ದಾರೆ. ಜನರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆಯೇ, ಮೂಲಸೌಕರ್ಯ ಅಭಿವೃದ್ಧಿಯಾಗಿದೆಯೇ ಹಾಗೂ ದೇಶ ಪ್ರಗತಿಯಲ್ಲಿದೆಯೇ ಎಂಬ ಮಾನದಂಡಗಳ ಮೂಲಕ ಸರ್ಕಾರದ ಕಾರ್ಯವೈಖರಿಯನ್ನು ನೋಡುತ್ತಿದ್ದಾರೆ. ಇದು ಭಾರತದಲ್ಲಿ ಉಂಟಾಗಿರುವ ಮಹತ್ವದ ರಾಜಕೀಯ ಬದಲಾವಣೆ ಎಂದು ಅಮಿತ್ ಶಾ ಹೇಳಿದ್ದಾರೆ

By Ravikumar - 13-09-2026


Ads in Post