Search


ತಮಿಳುನಾಡು ಮೈತ್ರಿಯಲ್ಲಿ ಬಿರುಕು; ಪ್ರಧಾನಿ ಹುದ್ದೆಗಾಗಿ ರಾಹುಲ್-ವಿಜಯ್ ನಡುವೆ ಫೈಟ್

ತಮಿಳುನಾಡಿನ ರಾಜಕೀಯದಲ್ಲಿ ಪ್ರಧಾನಿ ಅಭ್ಯರ್ಥಿ ಕುರಿತ ಚರ್ಚೆ ಹೊಸ ತಿರುವು ಪಡೆದುಕೊಂಡಿದ್ದು, ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮತ್ತು ಕಾಂಗ್ರೆಸ್ ನಡುವಿನ ಭಿನ್ನಾಭಿಪ್ರಾಯ ಬಹಿರಂಗವಾಗಿದೆ. ಎರಡೂ ಪಕ್ಷಗಳ ನಾಯಕರು ತಮ್ಮ ತಮ್ಮ ನಾಯಕರ ಪರವಾಗಿ ಹೇಳಿಕೆ ನೀಡುತ್ತಿರುವುದು ಮೈತ್ರಿಕೂಟದಲ್ಲಿ ಬಿಕ್ಕಟ್ಟಿನ ವಾತಾವರಣಕ್ಕೆ ಕಾರಣವಾಗಿದೆ.

ದಕ್ಷಿಣ ಭಾರತದವರೇ ದೇಶದ ಮುಂದಿನ ಪ್ರಧಾನಿಯಾಗಬೇಕು' ಎಂದು ಅಲ್ಲಿನ ಲೋಕೋಪಯೋಗಿ ಸಚಿವ ಆಧವ್ ಅರ್ಜುನ್ ಇತ್ತೀಚೆಗೆ ನೀಡಿದ್ದ ಹೇಳಿಕೆಯೇ ಮಿತ್ರ ಪಕ್ಷಗಳ ನಡುವಣ ಒಡಕಿಗೆ ಮೂಲ. ಅದಾದ ನಂತರ, ನಟ, ತಮಿಳುನಾಡು ಮುಖ್ಯಮಂತ್ರಿ ಚಂದ್ರಶೇಖ‌ರ್ ಜೋಸೆಫ್ ವಿಜಯ್ ಅವರು ರಾಜ್ಯದಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ಜನಪ್ರಿಯತೆ ಹೊಂದಿದ್ದಾರೆ. ಹಾಗಾಗಿ, 2029ರ ಲೋಕಸಭಾ ಚುನಾವಣೆ ವೇಳೆಗೆ ದೇಶದ ಪ್ರಧಾನಿಯಾಗುವ ಸಾಮರ್ಥ್ಯ ಅವರಲ್ಲಿದೆ ಎಂದು ಟಿವಿಕೆ ನಾಯಕರು ಪ್ರತಿಪಾದಿಸುತ್ತಿದ್ದಾರೆ.

'ವಿಜಯ್ ಅವರೇ ಮುಂದಿನ ಪ್ರಧಾನಿ' ಎಂಬುದು ಟಿವಿಕೆಯ ಅಧಿಕೃತ ಹೇಳಿಕೆಯೇನಲ್ಲ. ಆದಾಗ್ಯೂ, ತಮ್ಮ ನಾಯಕ ರಾಹುಲ್ ಗಾಂಧಿ ಅವರೇ 2029ರ ಲೋಕಸಭಾ ಚುನಾವಣೆ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಎದುರಾಳಿ ಎಂದು ಬಿಂಬಿಸಲು ಹೊರಟಿರುವ ಕಾಂಗ್ರೆಸ್ಸಿಗರಿಗೆ ಬೇಸರವನ್ನುಂಟು ಮಾಡಿದೆ.

ತಮಿಳುನಾಡಿನ 234 ವಿಧಾನಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಟಿವಿಕೆ ಗಮನಾರ್ಹ ಸಾಧನೆ ಮಾಡಿದೆ. ಚುನಾವಣೋತ್ತರ ಸಮೀಕ್ಷೆಗಳು ಬೇರೆ ರೀತಿಯ ಫಲಿತಾಂಶವನ್ನು ಊಹಿಸಿದ್ದರೂ, ಅಂತಿಮ ಫಲಿತಾಂಶದಲ್ಲಿ ರಾಜಕೀಯ ಲೆಕ್ಕಾಚಾರಗಳು ಬದಲಾಗಿದ್ದವು. ಟಿವಿಕೆ 108 ಸ್ಥಾನಗಳನ್ನು ಗೆದ್ದು ಪ್ರಮುಖ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದರೆ, ಇತರ ಪ್ರಮುಖ ಪಕ್ಷಗಳಾದ ಎಐಎಡಿಎಂಕೆ ಮತ್ತು ಡಿಎಂಕೆ ಕ್ರಮವಾಗಿ 59 ಹಾಗೂ 47 ಸ್ಥಾನಗಳಿಗೆ ಸೀಮಿತವಾಗಿದ್ದವು. ಸರ್ಕಾರ ರಚಿಸುವ ವಿಚಾರದಲ್ಲಿ ವಿವಿಧ ಪಕ್ಷಗಳ ಬೆಂಬಲವೂ ಟಿವಿಕೆಗೆ ಮಹತ್ವದ್ದಾಯಿತು.

ಚುನಾವಣೆಯ ನಂತರ ಕಾಂಗ್ರೆಸ್‌ನ ಪಾತ್ರವೂ ಮಹತ್ವ ಪಡೆದುಕೊಂಡಿದೆ. ದೀರ್ಘಕಾಲದ ಬಳಿಕ ರಾಜ್ಯ ರಾಜಕೀಯದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುವ ಅವಕಾಶ ಕಾಂಗ್ರೆಸ್‌ಗೆ ದೊರೆತಿದೆ. ಆದರೆ ಪ್ರಧಾನಿ ಅಭ್ಯರ್ಥಿ ವಿಚಾರದಲ್ಲಿ ಟಿವಿಕೆ ಮತ್ತು ಕಾಂಗ್ರೆಸ್ ನಡುವೆ ಒಮ್ಮತ ಮೂಡದಿರುವುದು ಮೈತ್ರಿಯ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಟಿವಿಕೆ ನಾಯಕರು ವಿಜಯ್ ಅವರನ್ನು ರಾಷ್ಟ್ರೀಯ ಮಟ್ಟದ ನಾಯಕನಾಗಿ ಮುನ್ನೆಲೆಗೆ ತರಲು ಪ್ರಯತ್ನಿಸುತ್ತಿದ್ದರೆ, ಕಾಂಗ್ರೆಸ್ ಮಾತ್ರ ರಾಹುಲ್ ಗಾಂಧಿ ನಾಯಕತ್ವಕ್ಕೆ ಆದ್ಯತೆ ನೀಡುತ್ತಿದೆ. ಈ ಭಿನ್ನಾಭಿಪ್ರಾಯ ಮುಂದುವರಿದರೆ, 2029ರ ಲೋಕಸಭಾ ಚುನಾವಣೆಗೆ ಮುನ್ನ ಮೈತ್ರಿಕೂಟದ ರಾಜಕೀಯ ಸಮೀಕರಣದಲ್ಲಿ ಮಹತ್ವದ ಬದಲಾವಣೆಗಳಾಗುವ ಸಾಧ್ಯತೆ ಇದೆ.

By Ravikumar - 31-08-2026


Ads in Post