Search


ಸ್ಪೀಕರ್‌ ಸ್ಥಾನಕ್ಕೆ ಯು.ಟಿ ಖಾದರ್‌ ರಾಜೀನಾಮೆ: ಸಂಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು : ವಿಧಾನ ಸಭೆಯ ಸ್ಪೀಕರ್‌ ಸ್ಥಾನಕ್ಕೆ ಯು.ಟಿ ಖಾದರ್‌ (UT Khader) ಅವರು ರಾಜೀನಾಮೆ ನೀಡಿದ್ದು, ಈ ಮೂಲಕ ಇಂದು ಸಂಜೆ ಡಿಕೆ ಶಿವಕುಮಾರ್‌(DK Shivakumar)​​  ಅವರ ಜೊತೆ ಪ್ರಮಾಣ ವಚನ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ. ಲೋಕಭವನದಲ್ಲೇ ಡೆಪ್ಯುಟಿ ಸ್ಪೀಕರ್​ಗೆ ಖಾದರ್​​ ರಾಜೀನಾಮೆ ಪತ್ರ ಸಲ್ಲಿಸಿದ್ದು, ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ಬರುವಂತೆ ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್​​ ಅವರಿಂದ ಕರೆ ಬೆನ್ನಲ್ಲೇ ಈ ವಿದ್ಯಮಾನ ನಡೆದಿದೆ.

ಇನ್ನು ಸ್ಪೀಕರ್ ಆಗಿ ಮೂರು ವರ್ಷಗಳ ಅವಧಿಯಲ್ಲಿ ಸಹಕಾರ ನೀಡಿದ್ದಕ್ಕೆ ರಾಜ್ಯಪಾಲ ಥಾವರ್​​ಚಂದ್​ ಗೆಹ್ಲೋಟ್​​ಗೆ ಯು.ಟಿ. ಖಾದರ್​​ ಧನ್ಯವಾದ ತಿಳಿಸಿದ್ದಾರೆ. ಲೋಕಭವನಕ್ಕೆ ತೆರಳಿ ಗವರ್ನರ್​​ ಭೇಟಿಯಾಗಿರುವ ಅವರು, ರಾಜ್ಯಪಾಲರಿಗೆ ರಾಜೀನಾಮೆ ವಿಷಯ ತಿಳಿಸಿದ್ದಾರೆ ಎನ್ನಲಾಗಿದೆ. ಇನ್ನು ಈ ಹಿಂದೆ ಆರೋಗ್ಯ ಸಚಿವರಾಗಿ ಸೇವೆ ಸಲ್ಲಿಸಿರುವ ಅನುಭವ ಹೊಂದಿರುವ ಖಾದರ್​​ಗೆ ಡಿಕೆಶಿ ಸರ್ಕಾರದಲ್ಲೂ ಅದೇ ಖಾತೆ ಸಿಗಬಹುದೆಂಬ ನಿರೀಕ್ಷೆ ಇದೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಖಾದರ್‌ "ನಾನು ಯಾವುದೇ ಖಾತೆಗೆ ಬೇಡಿಕೆ ಇಟ್ಟಿಲ್ಲ. ಆದರೆ ಆರೋಗ್ಯ ಖಾತೆ ಅಥವಾ ವಸತಿ ಖಾತೆ ಸಿಕ್ಕರೆ ಒಳಿತೆಂಬ ಬಯಕೆ ಇದೆ. ನಾಯಕರು ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ. ಉಪಮುಖ್ಯಮಂತ್ರಿ ಸ್ಥಾನ ಕೊಟ್ಟರೂ ನಿಭಾಯಿಸಲು ತಾನು ಸಿದ್ಧ ಎಂದು ತಿಳಿಸಿದ್ದಾರೆ. ಯುಟಿ ಖಾದರ್‌ ಅವರು ಸಚಿವರಾಗುತ್ತಿರುವುದು ಖಚಿತವಾಗುತ್ತಿದ್ದಂತೆ ಅವರ ಬೆಂಬಲಿಗರು ಸಂಭ್ರಮಿಸಿದ್ದು, ಅವರ ನಿವಾಸಕ್ಕೆ ಆಗಮಿಸಿ ಶುಭ ಕೋರಿದ್ದಾರೆ.

By Ravikumar - 03-06-2026


Ads in Post