Search


ನಟಿ ತ್ರಿಶಾ ಕುರಿತು ಅಶ್ಲೀಲ ಹೇಳಿಕೆ; ಉದಯನಿಧಿ ಸ್ಟಾಲಿನ ಬಂಧನ ಸಾಧ್ಯತೆ

ಚೆನ್ನೈ: ನಟಿ ತ್ರಿಶಾ ಕುರಿತು ನೀಡಿದ ಎನ್ನಲಾದ ಆಕ್ಷೇಪಾರ್ಹ ಹಾಗೂ ದ್ವಂದ್ವಾರ್ಥದ ಹೇಳಿಕೆ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಡಿಎಂಕೆ ಮುಖಂಡ ಉದಯನಿಧಿ ಸ್ಟಾಲಿನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ಬೆಳಗ್ಗೆ ಚೆನ್ನೈನ ನೀಲಾಂಕರೈನಲ್ಲಿರುವ ಅವರ ನಿವಾಸದಿಂದ ಅವರನ್ನು ವಶಕ್ಕೆ ಪಡೆಯಲಾಗಿದೆ.

ತಂಜಾವೂರಿನಲ್ಲಿ ನಡೆದ ಕಾವೇರಿ ನೀರು ಹಾಗೂ ರೈತರ ಸಮಸ್ಯೆ ಕುರಿತ ಪ್ರತಿಭಟನಾ ಸಭೆಯಲ್ಲಿ ಉದಯನಿಧಿ ಸ್ಟಾಲಿನ್ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರನ್ನು ಟೀಕಿಸಿ ಮಾತನಾಡುತ್ತಿದ್ದರು. ಈ ವೇಳೆ ಸಭೆಯಲ್ಲಿದ್ದವರು ನಟಿ ತ್ರಿಶಾ ಅವರ ಹೆಸರನ್ನು ಕೂಗಿದ್ದು, ಅದಕ್ಕೆ ಉದಯನಿಧಿ ನೀಡಿದ ಪ್ರತಿಕ್ರಿಯೆ ಮಹಿಳೆಯ ಬಗ್ಗೆ ಅವಹೇಳನಕಾರಿಯಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು.

ವಿವಾದದ ಬೆನ್ನಲ್ಲೇ ತಮಿಳಗ ವೆಟ್ರಿ ಕಳಗಂ (TVK) ಮಹಿಳಾ ಘಟಕ ಸೇರಿದಂತೆ ವಿವಿಧರು ಉದಯನಿಧಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮದ ಸಾಧ್ಯತೆ ಎದುರಾಗುತ್ತಿದ್ದಂತೆ ಉದಯನಿಧಿ ಮದ್ರಾಸ್ ಹೈಕೋರ್ಟ್‌ನಲ್ಲೂ ಕಾನೂನು ರಕ್ಷಣೆ ಕೋರಿದ್ದರು.

ಉದಯನಿಧಿ ಬಂಧನಕ್ಕೆ ಬಿಜೆಪಿ ಸೇರಿದಂತೆ ಹಲವು ರಾಜಕೀಯ ನಾಯಕರು ಬೆಂಬಲ ವ್ಯಕ್ತಪಡಿಸಿ, ಹೇಳಿಕೆಯನ್ನು ಖಂಡಿಸಿದ್ದಾರೆ. ಮತ್ತೊಂದೆಡೆ, ಡಿಎಂಕೆ ನಾಯಕರು ಉದಯನಿಧಿ ಯಾವುದೇ ಮಹಿಳೆಯನ್ನು ಗುರಿಯಾಗಿಸಿಕೊಂಡು ಮಾತನಾಡಿಲ್ಲ ಮತ್ತು ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಉದಯನಿಧಿ ಬಂಧನದೊಂದಿಗೆ ತಮಿಳುನಾಡಿನಲ್ಲಿ DMK–TVK ನಡುವಿನ ರಾಜಕೀಯ ಸಂಘರ್ಷ ಮತ್ತಷ್ಟು ತೀವ್ರವಾಗುವ ಸಾಧ್ಯತೆ ಕಂಡುಬಂದಿದೆ. ಪ್ರಕರಣದಲ್ಲಿ ಮುಂದಿನ ಕಾನೂನು ಕ್ರಮ ಹಾಗೂ ನ್ಯಾಯಾಲಯದ ವಿಚಾರಣೆಯತ್ತ ಇದೀಗ ಗಮನ ನೆಟ್ಟಿದೆ.

By Ravikumar - 04-08-2026


Ads in Post