Search


‘ಉರ್ದು ಕೂಡ ಈ ನೆಲದ ಭಾಷೆಯೇ ಅಲ್ಲವೇ?’; ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು: ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬ ಆಚರಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ಉರ್ದು ಕೂಡ ದೇಶದ ಭಾಷೆಗಳಲ್ಲಿ ಒಂದಾಗಿರುವುದರಿಂದ ಅದರ ಆಚರಣೆಯಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ಈ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿರುವ ಬಿಜೆಪಿ ವಿರುದ್ಧವೂ ಅವರು ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಉರ್ದು ಈ ದೇಶದ ಭಾಷೆಯಲ್ಲವೇ ಎಂದು ಪ್ರಶ್ನಿಸಿದರು. ಉರ್ದು ಹಬ್ಬದ ಜೊತೆಗೆ ಹಿಂದಿ, ತಮಿಳು, ತೆಲುಗು, ಒಡಿಯಾ ಸೇರಿದಂತೆ ದೇಶದಲ್ಲಿ ಅಸ್ತಿತ್ವದಲ್ಲಿರುವ ವಿವಿಧ ಭಾಷೆಗಳ ಆಚರಣೆಗಳನ್ನೂ ನಡೆಸಬಹುದು ಎಂದು ಹೇಳಿದರು. ದೇಶದ ಭಾಷೆಗಳನ್ನು ಆಚರಿಸುವುದರಿಂದ ಯಾರಿಗೂ ಯಾವುದೇ ತೊಂದರೆಯಾಗಬಾರದು ಎಂದರು.

ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರು ಈ ಕುರಿತು ಯಾವ ರೀತಿಯ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂಬ ಸಂಪೂರ್ಣ ಮಾಹಿತಿ ತಮ್ಮ ಬಳಿ ಇಲ್ಲ ಎಂದು ಖರ್ಗೆ ಸ್ಪಷ್ಟಪಡಿಸಿದರು. ಆದರೆ ದೇಶದಲ್ಲಿ ಅಸ್ತಿತ್ವದಲ್ಲಿರುವ ಯಾವುದೇ ಭಾಷೆಯ ಆಚರಣೆ ನಡೆಸುವುದರಲ್ಲಿ ತಪ್ಪೇನಿದೆ? ಇದರಿಂದ ಏನು ಸಮಸ್ಯೆಯಾಗುತ್ತದೆ ಎಂದು ಅವರು ಪ್ರಶ್ನಿಸಿದರು.

ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ, ಆಂಧ್ರಪ್ರದೇಶದಲ್ಲಿ ಉರ್ದು ಎರಡನೇ ಅಧಿಕೃತ ಭಾಷೆಯಾಗಿರುವುದನ್ನು ಉಲ್ಲೇಖಿಸಿದರು. ಅಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿರುವಾಗ ಉರ್ದು ವಿಚಾರದಲ್ಲಿ ಸಮಸ್ಯೆ ಕಾಣದವರು ಕರ್ನಾಟಕದಲ್ಲಿ ಮಾತ್ರ ಏಕೆ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು. ಬಿಜೆಪಿ ಜನರ ನೈಜ ಸಮಸ್ಯೆಗಳನ್ನು ಬದಿಗೊತ್ತಿ ಭಾವನಾತ್ಮಕ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದೆ ಎಂದು ಖರ್ಗೆ ಆರೋಪಿಸಿದರು. ರೈತರ ಸಮಸ್ಯೆ, ನಿರುದ್ಯೋಗ, ವಿದೇಶಾಂಗ ನೀತಿ ಹಾಗೂ ದೇಶದ ಆರ್ಥಿಕ ಪರಿಸ್ಥಿತಿಯಂತಹ ಜನಪರ ವಿಷಯಗಳ ಕುರಿತು ಚರ್ಚೆ ನಡೆಸಲಿ ಎಂದು ಅವರು ಹೇಳಿದರು.

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಕಬ್ಬು ಬೆಳೆಗಾರರು ನಡೆಸಿದ ಪ್ರತಿಭಟನೆಯನ್ನೂ ಉಲ್ಲೇಖಿಸಿದ ಖರ್ಗೆ, ರೈತರ ಸಮಸ್ಯೆಗಳ ಕುರಿತು ಬಿಜೆಪಿ ನಾಯಕರು ಏಕೆ ಧ್ವನಿ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರು. ರೈತರ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ತೆರಳಿ ಪರಿಹಾರ ಕೇಳಲು ಒಟ್ಟಾಗಿ ಬರುವಂತೆ ಆಹ್ವಾನಿಸಿದರೂ ಬಿಜೆಪಿ ನಾಯಕರು ಬರುತ್ತಿಲ್ಲ. ಆದರೆ ಹಿಂದೂ-ಮುಸ್ಲಿಂ ಹಾಗೂ ಉರ್ದು ಭಾಷೆಯಂತಹ ವಿಚಾರಗಳು ಬಂದಾಗ ಮಾತ್ರ ಹೆಚ್ಚಿನ ಆಸಕ್ತಿ ತೋರುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.

By Ravikumar - 01-10-2026


Ads in Post