Search


15ನೇ ವರ್ಷಕ್ಕೆ ಐಪಿಎಲ್‌ನಲ್ಲಿ ಆರೆಂಜ್‌ ಕ್ಯಾಪ್‌ ಪಡೆದ ವೈಭವ್‌ ಸೂರ್ಯವಂಶಿ...!

ಐಪಿಎಲ್ 2026ರ ಆರೆಂಜ್‌ ಕ್ಯಾಪ್‌ 15ರ ಬಾಲಕ ವೈಭವ್‌ ಸೂರ್ಯವಂಶಿ ಪಾಲಾಗಿದೆ. ಆರೆಂಜ್‌ ಕ್ಯಾಪ್‌ಗಾಗಿ ಗುಜರಾತ್‌ನ ಸಾಯಿ ಸುದರ್ಶನ್‌ ಮತ್ತು ವೈಭವ್‌ ನಡುವೆ ತೀವ್ರ ಪೈಪೋಟಿ ನಡೆದಿತ್ತು, ಆದರೆ ಟೂರ್ನಿಯ ಕಡೆಯಲ್ಲಿ ಈ ಹೆಗ್ಗಳಿಕೆ ವೈಭವ್‌ ಪಾಲಾಗಿದೆ.

ಇಡೀ ಆವೃತ್ತಿಯಲ್ಲಿ ಯಾರು ಅತ್ಯಧಿಕ ರನ್ ಕಲೆಹಾಕುತ್ತಾರೋ ಅವರಿಗೆ ಆರೆಂಜ್ ಕ್ಯಾಪ್ ನೀಡಲಾಗುತ್ತದೆ. ಈ ಆರೆಂಜ್ ಕ್ಯಾಪ್ ರೇಸ್​ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿ ಅಗ್ರಸ್ಥಾನದಲ್ಲಿದ್ದರು. ಆದಾಗ್ಯೂ ಅದರ ನಂತರದ ಎರಡು ಸ್ಥಾನಗಳಲ್ಲಿ ಗುಜರಾತ್ ತಂಡದ ಶುಭ್​ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಇದ್ದ ಕಾರಣ ಫೈನಲ್ ಪಂದ್ಯ ಮುಗಿದ ಬಳಿಕವಷ್ಟೇ ಆರೆಂಜ್ ಕ್ಯಾಪ್ ಯಾರ ಪಾಲಾಗಲಿದೆ ಎಂಬುದನ್ನು ಅಧಿಕೃತವಾಗಿ ಹೇಳಬಹುದಾಗಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಗಿಲ್ ಹಾಗೂ ಸುದರ್ಶನ್, ಸೂರ್ಯವಂಶಿ ಅವರನ್ನು ಮೀರಿಸದ ಕಾರಣ ಅವರಿಬ್ಬರು ಈ ರೇಸ್​ನಿಂದ ಹೊರಬಿದ್ದಿದ್ದು, ವೈಭವ್​ಗೆ ಈ ಕ್ಯಾಪ್ ಸಿಕ್ಕಿದೆ.

ಈ ಬಾರಿಯ ಐಪಿಎಲ್‌ನಲ್ಲಿ ಆಡಿದ 16 ಇನ್ನಿಂಗ್ಸ್‌ಗಳಲ್ಲಿ ವೈಭವ್ ಸೂರ್ಯವಂಶಿ 776 ರನ್ ಬಾರಿಸಿ ಆರೆಂಜ್ ಕ್ಯಾಪ್ ರೇಸ್​ನಲ್ಲಿ ಅಗ್ರಸ್ಥಾನದಲ್ಲಿದ್ದರು. ಆದರೆ ಈ ರೇಸ್​ನಲ್ಲಿ ಅವರ ಹಿಂದೆಯೇ ಇದ್ದ ಶುಭ್​ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಕ್ರಮವಾಗಿ 722 ರನ್ ಮತ್ತು 710 ರನ್ ಬಾರಿಸಿದ್ದರು. ಹೀಗಾಗಿ ವೈಭವ್ ಅವರನ್ನು ಹಿಂದಿಕ್ಕಲು ಗಿಲ್​ಗೆ 55 ರನ್‌ ಮತ್ತು ಸುದರ್ಶನ್‌ಗೆ 67 ರನ್‌ಗಳು ಬೇಕಾಗಿದ್ದವು. 

ಆದರೆ ಫೈನಲ್ ಪಂದ್ಯದಲ್ಲಿ ಅವರಿಬ್ಬರು ಇಷ್ಟು ರನ್ ಬಾರಿಸುವಲ್ಲಿ ವಿಫಲರಾದರು.ನಾಯಕ ಶುಭ್​ಮನ್ ಗಿಲ್ ಕೇವಲ 10 ರನ್ ಗಳಿಸಿ ಔಟಾದರೆ, ಸುದರ್ಶನ್ 12 ರನ್‌ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಹೀಗಾಗಿ, ಗಿಲ್ ಅವರ ಸೀಸನ್ 732 ರನ್‌ಗಳೊಂದಿಗೆ ಮತ್ತು ಸುದರ್ಶನ್ ಅವರ 722 ರನ್‌ಗಳೊಂದಿಗೆ ಕೊನೆಗೊಂಡಿತು. ಆದ್ದರಿಂದ 16 ಪಂದ್ಯಗಳಲ್ಲಿ 776 ರನ್ ಬಾರಿಸಿದ್ದ ವೈಭವ್​ಗೆ ಆರೆಂಜ್ ಕ್ಯಾಪ್ ಸಿಕ್ಕಿದೆ. ಈ ಮೂಲಕ ವೈಭವ್ ಈ ಪ್ರಶಸ್ತಿ ಗೆದ್ದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

By Ravikumar - 01-06-2026


Ads in Post