ಬೆಂಗಳೂರು: ವಿಧಾನ ಪರಿಷತ್ ಕಲಾಪದ ವೇಳೆ ವಂದೇ ಮಾತರಂ ಗೀತೆ ವಿಚಾರವಾಗಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು. ಕಲಾಪ ಆರಂಭಕ್ಕೂ ಮುನ್ನ ವಂದೇ ಮಾತರಂ ಗೀತೆಯನ್ನು ಪ್ರಸ್ತುತಪಡಿಸಲಾಗಿದ್ದು, ಎರಡು ಚರಣಗಳ ಬಳಿಕ ಗೀತೆ ಸ್ಥಗಿತಗೊಳಿಸಿದ ಕ್ರಮಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಬಿಜೆಪಿ ಸದಸ್ಯರು ಗೀತೆಯನ್ನು ಪೂರ್ಣವಾಗಿ ಹಾಡಲು ಮುಂದಾದ ಹಿನ್ನೆಲೆಯಲ್ಲಿ ಸದನದಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು.
ಸಚಿವ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಎರಡು ಚರಣಗಳನ್ನು ಮಾತ್ರ ಹಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಧಾನಿ ಹಾಗೂ ರಾಷ್ಟ್ರಪತಿಗಳ ಕಾರ್ಯಕ್ರಮಗಳಲ್ಲಿ ಮಾತ್ರ ಪೂರ್ಣ ಗೀತೆಯನ್ನು ಹಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿ, ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡಬೇಕು ಎಂದು ಆಗ್ರಹಿಸಿದರು. ಬಿಜೆಪಿ ಸದಸ್ಯ ರವಿಕುಮಾರ್, ಸದನದಲ್ಲಿ ಈ ಹಿಂದೆ ಪೂರ್ಣ ಗೀತೆ ಹಾಡಲಾಗುತ್ತಿತ್ತು. ಈಗ ಎರಡು ಚರಣಗಳಿಗೆ ಸೀಮಿತಗೊಳಿಸಿರುವುದು ಏಕೆ ಎಂದು ಪ್ರಶ್ನಿಸಿದರು.
ಬಿ.ಕೆ. ಹರಿಪ್ರಸಾದ್ ಮಧ್ಯಪ್ರವೇಶಿಸಿ, ಸದನದಲ್ಲಿ ಈ ಹಿಂದೆ ಎರಡು ಚರಣಗಳನ್ನು ಹಾಡುವ ಪದ್ಧತಿ ಇತ್ತು. ಬಿಜೆಪಿ ಸದಸ್ಯರು ಸಭಾಪತಿಗಳು ಬಂದ ಸಂದರ್ಭದಲ್ಲಿ ಪೂರ್ಣ ಗೀತೆ ಹಾಡಲು ಆರಂಭಿಸಿದ್ದಾರೆ. ಈ ವಿಚಾರವಾಗಿ ಸದನದಲ್ಲಿ ಚರ್ಚೆ ನಡೆಯಲಿ ಎಂದು ಹೇಳಿದರು. ಇದಕ್ಕೆ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಸದನವು ಕಾಂಗ್ರೆಸ್ ಕಚೇರಿಯಲ್ಲ ಎಂದು ಆಕ್ಷೇಪಿಸಿದ ಸದಸ್ಯರು, ವಂದೇ ಮಾತರಂ ಗೀತೆಯನ್ನು ಏಕೆ ಪೂರ್ಣವಾಗಿ ಹಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಈ ವೇಳೆ ಸಭಾಪತಿಗೆ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ, ಸರ್ಕಾರದ ಆದೇಶದಂತೆ ನಡೆದುಕೊಳ್ಳಲಾಗಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು. ಇದಕ್ಕೆ ಬಿಜೆಪಿ ಸದಸ್ಯರಾದ ಸಿ.ಟಿ. ರವಿ ಹಾಗೂ ಛಲವಾದಿ ನಾರಾಯಣಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಭಾಪತಿಗಳ ಕೈಯಲ್ಲಿ ಏನೂ ಇಲ್ಲ ಎಂದು ಸಭಾನಾಯಕರು ಹೇಳುವುದು ಸರಿಯಲ್ಲ. ಸಭಾಪತಿಗಳು ಕಾಂಗ್ರೆಸ್ ಪಕ್ಷದವರೇ ಅಥವಾ ಸದನದ ಸಭಾಪತಿಗಳೇ ಎಂದು ಪ್ರಶ್ನಿಸಿದ ಛಲವಾದಿ ನಾರಾಯಣಸ್ವಾಮಿ, ಈ ಬಗ್ಗೆ ಸಭಾಪತಿಗಳು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಮುಂದುವರಿದ ಗದ್ದಲದ ನಡುವೆ ಯತೀಂದ್ರ ಸಿದ್ದರಾಮಯ್ಯ ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಲು ಮುಂದಾದರು. ಆದರೆ, ಬಿಜೆಪಿ ಸದಸ್ಯರು ಸಭಾಪತಿಗಳೇ ಮಾತನಾಡಬೇಕು ಎಂದು ಒತ್ತಾಯಿಸಿದರು. ಈ ವಿಚಾರದಲ್ಲಿ ಸಿ.ಟಿ. ರವಿ ಕೂಡ ಆಕ್ಷೇಪ ವ್ಯಕ್ತಪಡಿಸಿ, ಸಭಾಪತಿ ಪೀಠವು ಸಂವಿಧಾನದ ಪೀಠವೇ ಅಥವಾ ಕಾಂಗ್ರೆಸ್ ಪೀಠವೇ ಎಂದು ಪ್ರಶ್ನಿಸಿದರು. ವಂದೇ ಮಾತರಂ ಗೀತೆ ವಿಚಾರಕ್ಕೆ ಸಂಬಂಧಿಸಿದಂತೆ ಆಡಳಿತ ಮತ್ತು ವಿಪಕ್ಷಗಳ ನಡುವಿನ ವಾಗ್ವಾದದಿಂದಾಗಿ ಪರಿಷತ್ ಕಲಾಪದಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು.