ಬೆಂಗಳೂರು : ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ಸಂಸ್ಥೆಯಿಂದ ಆಯೋಜನೆಗೊಂಡಿದ್ದ ಪಂದ್ಯಾವಳಿಯ ವೇಳೆ ಆಟಗಾರನೊರ್ವ ಹೃದಯಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಯುವಕನನ್ನು 36 ವರ್ಷದ ಅಕ್ಷಯ್ ಎಂದು ಗುರುತಿಸಲಾಗಿದ್ದು. ಘಟನೆ ಸಂಬಂಧ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲತಃ ಶಿವಮೊಗ್ಗ ಮೂಲದ ಅಕ್ಷಯ್ ಕ್ರಿಕೆಟ್ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿದ್ದರು. ಅಷ್ಟೇ ಅಲ್ಲದೆ ರಣಜಿ ಪಂದ್ಯಗಳನ್ನು ಆಡಿದ ಅನುಭವವಿತ್ತು,ಇಂದು ಬೊಮ್ಮಸಂದ್ರದ ಎಸ್ಎಲ್ಎಸ್ ಕ್ರೀಡಾಂಗಣದಲ್ಲಿ ಕೆಎಸ್ಸಿಎ ನಸೂರ್ ಸ್ಮಾರಕ ಶೀಲ್ಡ್ ಏಕದಿನ ಲೀಗ್ ಪಂದ್ಯಾವಳಿ ನಡೆಯುತ್ತಿತ್ತು. ಪಂದ್ಯದಲ್ಲಿ ಅಕ್ಷಯ್ ಎಂದಿನಂತೆ ಉತ್ಸಾಹದಿಂದಲೇ ಪಾಲ್ಗೊಂಡು 4 ಓವರ್ ಬೌಲಿಂಗ್ ಮಾಡಿದ್ದರು. ಆದರೆ, ಆ ಬಳಿಕ ತಮಗೆ ಸ್ವಲ್ಪ ಆರೋಗ್ಯ ಸಮಸ್ಯೆ ಕಾಡುತ್ತಿದೆ ಎಂದು ಹೇಳಿ ಮೈದಾನದಿಂದ ಅರ್ಧಕ್ಕೆ ಹೊರಬಂದಿದ್ದರು. ಕ್ರೀಡಾಂಗಣದ ಹೊರಗೆ ಬಂದು ನೀರು ಕುಡಿಯುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.
ತಕ್ಷಣ ಅಕ್ಷಯ್ರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ. ಸದ್ಯ ಮೃತದೇಹವನ್ನು ಅವಲಹಳ್ಳಿಯ ಈಸ್ಟ್ ಪಾಯಿಂಟ್ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಘಟನೆ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ರಣಜಿ ಪಂದ್ಯಾವಳಿಗಳನ್ನು ಆಡಿದ ಉತ್ತಮ ಅನುಭವ ಹೊಂದಿದ್ದ ಪ್ರತಿಭಾವಂತ ಆಟಗಾರನೊಬ್ಬ ಪಂದ್ಯದ ಮಧ್ಯೆಯೇ ಹೀಗೆ ಇಹಲೋಕ ತ್ಯಜಿಸಿರುವುದು ಸದ್ಯ ತೀವ್ರ ಆಘಾತ ಉಂಟುಮಾಡಿದೆ.