ಜೈಪುರ: ರಾಜಸ್ಥಾನದ ಶಾಲೆಯೊಂದನ್ನು ಪರಿಶೀಲಿಸಲು ತೆರಳಿದ್ದ ಸಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಯಾಗಿರುವ ಘಟನೆ ಜೈಪುರದ ರಾಂಪುರ ಎಂಬ ಗ್ರಾಮದಲ್ಲಿ ನಡೆದಿದೆ. ಈ ಘಟನೆಯನ್ನ ಸಿಜೆಪಿ ಮುಖ್ಯಸ್ಥ ಅಭಿಜಿತ್ ದೀಪ್ಕೆ ತೀವ್ರವಾಗಿ ಖಂಡಿಸಿದ್ದು, ಬಿಜೆಪಿಯ ಗೂಂಡಾಗಳು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜಸ್ಥಾನದ ಜೈಪುರ ಜಿಲ್ಲೆಯ ಬಾಗ್ರು ವಿಧಾನಸಭಾ ಕ್ಷೇತ್ರದ ರಾಂಪುರ-ಕನ್ವರ್ಪುರ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಅದಕ್ಕೆ ಕಾರಣ, ದೇಶಾದ್ಯಂತ ಸದ್ದು ಮಾಡುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಘಟನೆಯ ಕಾರ್ಯಕರ್ತರು ಮತ್ತು ಮುಖಂಡರ ಮೇಲೆ ಸ್ಥಳೀಯ ಗ್ರಾಮಸ್ಥರು ಅಟ್ಟಾಡಿಸಿ ಹೊಡೆದಿರುವ ಘಟನೆ ವರದಿಯಾಗಿದೆ. ಸಿಜೆಪಿ ಹಮ್ಮಿಕೊಂಡಿದ್ದ 'ಸ್ಕೂಲ್ ಟೀಕ್ ಕರೋ' (ಶಾಲಾ ತಪಾಸಣೆ) ಅಭಿಯಾನದ ವೇಳೆ ಈ ಹಲ್ಲೆ ನಡೆದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ರಾಂಪುರ ವ್ಯಾಪ್ತಿಯ ಕಾನ್ವರ್ಪುರದಲ್ಲಿರುವ ಸರ್ಕಾರಿ ಶಾಲೆಯೊಂದು ಕಳೆದ ಹಲವು ವರ್ಷಗಳಿಂದ ದನಗಳ ಕೊಟ್ಟಿಗೆಯಲ್ಲಿ ನಡೆಯುತ್ತಿದೆ ಎಂದು ಆರೋಪಿಸಿ, ಸಿಜೆಪಿ ತಂಡವು ಅದರ ಆಡಿಟ್ ಮಾಡಲು ಮತ್ತು ಪರಿಶೀಲನೆ ನಡೆಸಲು ಅಲ್ಲಿಗೆ ಭೇಟಿ ನೀಡಿತ್ತು. ಸಿಜೆಪಿಯ ಪ್ರಮುಖ ವಕ್ತಾರ ಅಶುತೋಷ್ ರಾಂಕಾ ನೇತೃತ್ವದ ತಂಡ ಗ್ರಾಮ ಪ್ರವೇಶಿಸುವ ವೇಳೆ ಗ್ರಾಮಸ್ಥರು ಅವರನ್ನ ತಡೆದಿದ್ದು."ನಮ್ಮ ಮಕ್ಕಳು ಎಲ್ಲೇ ಓದಿದರೂ ನಮಗೆ ತೊಂದರೆಯಿಲ್ಲ, ಹೊರಗಿನವರು ಬಂದು ರಾಜಕೀಯ ಮಾಡುವುದು ಬೇಡ" ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಶಾಲೆಯ ಅಭಿವೃದ್ಧಿಗೆ ಈಗಾಗಲೇ ಹನ್ನೆರಡು ಲಕ್ಷ ರೂಪಾಯಿ ಅನುಮೋದನೆಯಾಗಿದೆ ಎಂದು ಗ್ರಾಮಸ್ಥರು ವಾದಿಸಿದರು. ಈ ವೇಳೆ ಎರಡೂ ತಂಡಗಳ ನಡುವೆ ತೀವ್ರ ವಾಗ್ವಾದ ನಡೆದು ಪರಿಸ್ಥಿತಿ ಕೈಮೀರಿದೆ. ಕೋಪಗೊಂಡ ಗ್ರಾಮಸ್ಥರು ಮತ್ತು ಸ್ಥಳೀಯರು ಸಿಜೆಪಿ ಕಾರ್ಯಕರ್ತರನ್ನು ಅಟ್ಟಾಡಿಸಿ, ತಳ್ಳಿ ಕೆಡವಿ ಹಲ್ಲೆ ನಡೆಸಿದ್ದಾರೆ. ಮುಂದುವರೆದು, ದಾಳಿಯ ವೇಳೆ ಸಿಜೆಪಿ ಕಾರ್ಯಕರ್ತರು ಬಂದಿದ್ದ ಕಾರಿನ ಕಿಟಕಿ ಗಾಜುಗಳನ್ನು ಕಲ್ಲುಗಳಿಂದ ಹೊಡೆದು ಪುಡಿ ಮಾಡಲಾಗಿದೆ. ಜೊತೆಗೆ, ಹಲ್ಲೆಯಿಂದಾಗಿ ಸಿಜೆಪಿ ವಕ್ತಾರ ಅಶುತೋಷ್ ರಾಂಕಾ ಸೇರಿದಂತೆ ಹಲವು ಕಾರ್ಯಕರ್ತರು ಗಾಯಗೊಂಡಿದ್ದಾರೆ.
ಇನ್ನು ಈ ಘಟನೆ ಬೆನ್ನಲ್ಲೇ, ಬಿಜೆಪಿ ವಿರುದ್ಧ ಹರಿಹಾಯ್ದ ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಹಾಗೂ ಅಶುತೋಷ್ ರಾಂಕಾ, "ಬಿಜೆಪಿ ಗೂಂಡಾಗಳು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಕೊಟ್ಟಿಗೆಯಲ್ಲಿ ಶಾಲೆ ನಡೆಯುತ್ತಿದ್ದರೂ ಅವರಿಗೆ ಚಿಂತೆಯಿಲ್ಲ, ಶಾಲೆಯ ಅಸಲಿ ಪರಿಸ್ಥಿತಿ ಮುಚ್ಚಿಡಲು ಇಂತಹ ಕೃತ್ಯ ನಡೆಸಲಾಗುತ್ತಿದೆ. ಆದರೆ ಅದನ್ನು ಸರಿಪಡಿಸಲು ಹೋದರೆ ಇವರಿಗೆ ಕೋಪ ಬರುತ್ತದೆ" ಎಂದು ಆರೋಪಿಸಿದ್ದಾರೆ.