Search


ನೀರು ನಮ್ಮನ್ನ ಒಗ್ಗೂಡಿಸಬೇಕು; ತಮಿಳು ನೆಲದಲ್ಲಿ ನಿಂತು ಅಬ್ಬರಿಸಿದ ಡಿಕೆಶಿ

ಮಹಾಬಲಿಪುರಂ: ತಮಿಳುನಾಡಿನ ಮಹಾಬಲಿಪುರಂನಲ್ಲಿ ಗುರುವಾರ ನಡೆದ 31ನೇ ದಕ್ಷಿಣ ವಲಯ ಮಂಡಳಿ (Southern Zonal Council) ಸಭೆಯಲ್ಲಿ ಡಿಕೆ ಶಿವಕುಮಾರ್‌ ಸಿಎಂ ವಿಜಯ್‌ ಎದುರು ಕಾವೇರಿ ನದಿ ನೀರಿನ ವಿವಾದವನ್ನ ಪ್ರಸ್ತಾಪಿಸಿದ್ದಾರೆ, ಜಲ ಹಂಚಿಕೆ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯಾಗಿರುವ ಕುರಿತು ಮಾತನಾಡಿದ ಡಿಕೆ, ʻನೀರು ನಮ್ಮನ್ನ ಒಗ್ಗೂಡಿಸಬೇಕೆ ವಿನಃ, ಅದು ನಮ್ಮನ್ನ ಬೇರ್ಪಡಿಸಬಾರದು, ನಾವು ಈ ವಿಷಯದಲ್ಲಿ ಸ್ಪರ್ಧೆಗೆ ಬೀಳದೆ, ಪಾಲುದಾರರ ರೀತಿ ಕುಳಿತು ಚರ್ಚಿಸಿ ತೀರ್ಮಾನ ಮಾಡಬೇಕು ಎಂದು ಹೇಳಿದ್ದಾರೆ.

ಕಾವೇರಿ, ಕೃಷ್ಣಾ, ತುಂಗಭದ್ರಾ, ಪೆನ್ನಾರ್ ಮತ್ತು ಪಾಲಾರ್ ನದಿಗಳು ದಕ್ಷಿಣ ಪರ್ಯಾಯ ದ್ವೀಪದ ಜೀವನಾಡಿಗಳಾಗಿವೆ. ನದಿಗಳು ಯಾವುದೇ ರಾಜಕೀಯ ಗಡಿಗಳನ್ನು ಗುರುತಿಸುವುದಿಲ್ಲ. ನೀರು ರಾಜ್ಯಗಳನ್ನು ಒಗ್ಗೂಡಿಸಬೇಕೇ ಹೊರತು ವಿಭಜಿಸಬಾರದು. ಜೂನ್ 25 ರಂದು ಕೇಂದ್ರ ಜಲಶಕ್ತಿ ಸಚಿವರ ಉಪಸ್ಥಿತಿಯಲ್ಲಿ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಮುಖ್ಯಮಂತ್ರಿಗಳ ಜೊತೆ ನಡೆಸಿದ ಜಂಟಿ ಸಭೆಯನ್ನು ಉದಾಹರಿಸಿದ ಡಿಕೆಶಿ “ನಾವು ಸ್ಪರ್ಧಿಗಳಾಗಿ ಅಲ್ಲ, ಪಾಲುದಾರರಾಗಿ ಕುಳಿತು ಚರ್ಚಿಸಿದ್ದೇವೆ”  ಜಲ ಹಂಚಿಕೆ ವಿಷಯದಲ್ಲಿ ಸಮಾನತೆ, ಪಾರದರ್ಶಕತೆ ಮತ್ತು ಸಹಕಾರ ಎಂಬ 3 ಸೂತ್ರಗಳನ್ನು ಕರ್ನಾಟಕ ಅನುಸರಿಸುತ್ತದೆ ಎಂದು ಹೇಳಿದರು.

ನೆರೆ ರಾಜ್ಯಗಳ ಹಕ್ಕುಗಳನ್ನು ಗೌರವಿಸುವಂತೆಯೇ, ನ್ಯಾಯಮಂಡಳಿಗಳ ತೀರ್ಪಿನಂತೆ ಕರ್ನಾಟಕಕ್ಕೆ ದೊರೆಯಬೇಕಾದ ಕಾನೂನುಬದ್ಧ ನೀರಿನ ಪಾಲು ಹಾಗೂ ನೀರಾವರಿ ಯೋಜನೆಗಳ ಸಮಯೋಚಿತ ಅನುಷ್ಠಾನಕ್ಕೆ ಸಹಕಾರ ಕೋರಲಾಯಿತು. ಕೃಷ್ಣಾ ನದಿ ವಿವಾದ, ಮೇಲ್ದಂಡೆ ಭದ್ರಾ ಯೋಜನೆ ಹಾಗೂ ನದಿಗಳ ಜೋಡಣೆ ವಿಷಯದಲ್ಲಿ ಕರ್ನಾಟಕದ ನಿಲುವನ್ನು ಸ್ಪಷ್ಟಪಡಿಸಲಾಯಿತು.

ಅನುದಾನ ತಾರತಮ್ಯಕ್ಕೆ ಡಿಕೆ ಬೇಸರ..!

 “ಕರ್ನಾಟಕ ಬಲಿಷ್ಠವಾದಾಗ ದಕ್ಷಿಣ ಭಾರತ ಮತ್ತಷ್ಟು ಬಲಿಷ್ಠವಾಗುತ್ತದೆ. ದಕ್ಷಿಣ ಭಾರತ ಬಲಿಷ್ಠವಾದರೆ ಭಾರತವೂ ಬಲಿಷ್ಠವಾಗುತ್ತದೆ. ದೇಶದ ಅಭಿವೃದ್ಧಿಗೆ ಶೇ.33ರಷ್ಟು ಜಿಡಿಪಿ ಕೊಡುಗೆ ನೀಡುವ ದಕ್ಷಿಣ ಭಾರತಕ್ಕೆ ಅನುದಾನ ಮತ್ತು ಸಂಪನ್ಮೂಲ ಹಂಚಿಕೆಯಲ್ಲಿ ಸೂಕ್ತ ನ್ಯಾಯ ಸಿಗಬೇಕು” ಎಂದು ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಪಾದಿಸಿದ್ದಾರೆ. ದಕ್ಷಿಣದ 5 ರಾಜ್ಯಗಳು ದೇಶದ ಒಟ್ಟು ಜಿಡಿಪಿಗೆ ಶೇ.33ರಷ್ಟು ಕೊಡುಗೆ ನೀಡುತ್ತಿದ್ದು, ದೇಶದ ಆರ್ಥಿಕತೆಯ ಎಂಜಿನ್‌ನಂತೆ ಕೆಲಸ ಮಾಡುತ್ತಿವೆ. ಭಾರತದ ಸಾಫ್ಟ್‌ವೇರ್ ರಫ್ತಿನಲ್ಲಿ ಕರ್ನಾಟಕದ್ದು ಶೇ. 42 ರಷ್ಟು ಪಾಲು. ದೇಶದ ಜಿಡಿಪಿಗೆ ಕರ್ನಾಟಕ ಶೇ. 9 ರಷ್ಟು ಕೊಡುಗೆ ನೀಡುತ್ತದೆ. ಆದರೆ, 15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕದ ಪಾಲು ಶೇ. 4.7 ರಿಂದ ಶೇ. 3.6 ಕ್ಕೆ ಇಳಿಕೆಯಾಗಿದ್ದು, 6 ವರ್ಷಗಳಲ್ಲಿ 65,000 ಕೋಟಿ ರೂ. ನಷ್ಟವಾಗಿದೆ. ಶಿಫಾರಸು ಮಾಡಿದ್ದ 11,495 ಕೋಟಿ ರೂ. ವಿಶೇಷ ಅನುದಾನವೂ ಬಂದಿಲ್ಲ ಎಂದು ಹೇಳಿದ್ದಾರೆ.

By Ravikumar - 21-08-2026


Ads in Post