Search


ನಾವು ಮೊದಲು ಹಿಂದೂ, ನಂತರ ಲಿಂಗಾಯತರು ಪ್ರಸ್ತುತ ಹಿಂದೂ ಸಮುದಾಯವನ್ನು ವಿಭಜಿಸಲು ಅನೇಕ ಪ್ರಯತ್ನಗಳು ನಡೆಯುತ್ತಿವೆ

ಪುಣೆ: ಹಿಂದೂಗಳ ಸಂಘಟನೆಯೇ ಹಿಂದೂತ್ವದ ಶಾಶ್ವತ ಧರ್ಮ ಆದರೆ ಕಾಲಬದಲಾವಣೆಯ ಅನುಸಾರ ಸಾಮಾಜಿಕ ಸಮರಸತೆ, ಕುಟುಂಬ ಪ್ರಬೋಧನ, ಪರಿಸರ ಸಂರಕ್ಷಣೆ, ಸ್ವದೇಶಿ ಮತ್ತು ನಾಗರಿಕ ಕರ್ತವ್ಯಗಳ ಪಾಲನೆ ಎಂಬ ಈ ಪಂಚ ಪರಿವರ್ತನೆ ಮಂತ್ರವೇ ಈಗ ಹಿಂದೂತ್ವದ ಯುಗಧರ್ಮವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದರು.

ಅವರು ಮಹಾರಾಷ್ಟ್ರದ ಪುಣೆ ನಗರದ ಯಳವಂಡಿಯ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ನಡೆದ ಆಯುಷ್ ಇಲಾಖೆ ಆಡಳಿತ ಮಂಡಳಿ ಸದಸ್ಯರಾದ ಅನಂತ ಬಿರಾದಾರ ಅವರ ಕುಟುಂಬದ ಸ್ನೇಹಮಿಲನ ಮತ್ತು ಕುಟುಂಬ ಪ್ರಬೋಧನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವ್ಯಕ್ತಿತ್ವ ನಿರ್ಮಾಣ ಮತ್ತು ಸಮಾಜದ ಸಂಘಟನೆ ಸಂಘದ ಮೂಲಾಧಾರವಾಗಿದೆ ಆದರೆ ಕಾಲಾನುಸಾರ ಸಮಾಜ ಪರಿವರ್ತನೆಗಾಗಿ ಸಂಘವು ಪಂಚ ಪರಿವರ್ತನೆ ಎಂಬ ವಿಚಾರವನ್ನು ಜನರ ಮುಂದಿಟ್ಟಿದೆ,ಜನ್ಮದ ಆಧಾರದ ಮೇಲೆ ನಡೆಯುವ ಭೇದಭಾವ ದೇವರ ವಿರೋಧಿಯಾಗಿದೆ ಮತ್ತು ಅದಕ್ಕೆ ಹಿಂದೂ ಸಮಾಜದಲ್ಲಿ ಯಾವುದೇ ಸ್ಥಾನವಿಲ್ಲ ಸಮಾಜದಲ್ಲಿನ ಭೇದಭಾವ ಸಂಪೂರ್ಣವಾಗಿ ನಾಶವಾಗಬೇಕು, ಪರಿಸರ ಸಂರಕ್ಷಣೆಗೆ ಕೇವಲ ಕಾನೂನು ಮಾಡಿದರೆ ಸಾಲದು ಅದು ನಿತ್ಯ ಸಂಸ್ಕಾರಗಳ ಮೂಲಕ ಜಾರಿಯಾಗಬೇಕು, ನಾಗರಿಕರು ಸಂವಿಧಾನ ನೀಡಿರುವ ಹಕ್ಕುಗಳ ಜೊತೆಗೆ ತಮ್ಮ ಕರ್ತವ್ಯಗಳ ಅರಿವನ್ನು ಹೊಂದಿರಬೇಕು, ಕುಟುಂಬವೇ ರಾಷ್ಟ್ರದ ಆರ್ಥಿಕ ಮತ್ತು ಸಾಮಾಜಿಕ ಘಟಕವಾಗಿದ್ದು ಇದೇ ಕುಟುಂಬ ವ್ಯವಸ್ಥೆಯ ಕಾರಣದಿಂದ ಭಾರತವು ಸಾವಿರಾರು ವರ್ಷಗಳ ಕಾಲ ವಿದೇಶಿಯರ ಆಕ್ರಮಣಗಳನ್ನು ಯಶಸ್ವಿಯಾಗಿ ಎದುರಿಸಿದೆ, ಆದರೆ ಇಂದಿನ ತಾಂತ್ರಿಕ ಯುಗದಲ್ಲಿ ಪಾಶ್ಚಾತ್ಯ ದೇಶಗಳ ಅಂಧಾನುಕರಣದಿಂದ ನಮ್ಮ ಕುಟುಂಬ ವ್ಯವಸ್ಥೆಗೆ ದೊಡ್ಡ ಸವಾಲು ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ವಾಸಿಸುವ ಪ್ರತಿಯೊಬ್ಬರು ಕನ್ನಡ ತಿಳಿದಿರಬೇಕು, ಮಹಾರಾಷ್ಟ್ರದಲ್ಲಿ ವಾಸಿಸುವ ಪ್ರತಿಯೊಬ್ಬರೂ ಮರಾಠಿ ಭಾಷೆಯನ್ನು ತಿಳಿದಿರಬೇಕು ಭಾರತದ ಪ್ರತಿಯೊಂದು ಭಾಷೆಯಲ್ಲಿಯೂ ವಿಶ್ವದ ಅತ್ಯುತ್ತಮ ಸಾಹಿತ್ಯ ನಿರ್ಮಾಣವಾಗಿದೆ ಮಕ್ಕಳಿಗೆ ವಿದೇಶಿ ಭಾಷೆಗಳನ್ನು ಕಲಿಸಿ, ಆದರೆ ಮಾತೃ ಭಾಷೆಯನ್ನು ಮಾತನಾಡುವುದರಲ್ಲಿ ಯಾವುದೇ ಹೀನಭಾವ ಇರಬಾರದು ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಕೇವಲ ಹೆಮ್ಮೆಪಡುವುದರಿಂದ ಸಾಲದು ಅದನ್ನು ಪ್ರತಿದಿನದ ಆಚರಣೆಯಲ್ಲಿ ತೋರಿಸಬೇಕು ಈ ನಿಟ್ಟಿನಲ್ಲಿ ಅನಂತ ಬಿರಾದರ ಅವರು ತಮ್ಮ ಮದುವೆಯ 25 ನೇ ವಾರ್ಷೀಕ ಮಹೋತ್ಸವದ ನಿಮಿತ್ತ ತಮ್ಮ ಕುಟುಂಬ ಹಾಗೂ ಬಂಧು ಬಳಗದವರನ್ನೆಲ್ಲ ಒಂದೆಡೆ ಸೇರಿಸಿ ಕುಟುಂಬ ಪ್ರಬೋದನ ಕಾರ್ಯಕ್ರಮ ಹಮ್ಮಿಕೊಂಡಿದ್ದು ನಿಜಕ್ಕು ಶ್ಲಾಘನೀಯವಾಗಿದೆ ಎಂದರು.

ಶ್ವಾಸಗುರುಗಳೆಂದೇ ಜಗತ್ಪ್ರಸಿದ್ಧರಾದ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ (ಹರಪೀಠ)ದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ನಾವು ಮೊದಲು ಹಿಂದೂ, ನಂತರ ಲಿಂಗಾಯತರು ಪ್ರಸ್ತುತ ಹಿಂದೂ ಸಮುದಾಯವನ್ನು ವಿಭಜಿಸಲು ಅನೇಕ ಪ್ರಯತ್ನಗಳು ನಡೆಯುತ್ತಿವೆ ಆದರೆ ಲಿಂಗಾಯತರು ಮೊದಲಿಗೆ ಹಿಂದೂಗಳು, ನಂತರ ಲಿಂಗಾಯತರು ಎಂಬ ವಿಚಾರ ಸ್ಪಷ್ಟವಾಗಿರಬೇಕು ಈ ದಿಶೆಯಲ್ಲಿ ಧರ್ಮದ ಪರಂಪರೆಯನ್ನು ಮುಂದಿನ ತಲೆಮಾರಿಗೆ ತಿಳಿಸಲು ಅನಂತ ಬಿರಾದಾರ ಅವರು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ತಂದೆ-ತಾಯಿ, ಅಜ್ಜ-ಅಜ್ಜಿ, ಮಕ್ಕಳು, ಮೊಮ್ಮಕ್ಕಳು,ಬಂಧು ಬಳಗದವರೆಲ್ಲ ಕುಟುಂಬ ಸಮೇತರಾಗಿ ಭಾಗವಹಿಸಿದರ ಪರಿಣಾಮವಾಗಿ ಭಾರತೀಯ ಸಂಸ್ಕೃತಿಯ ಜೀವಂತ ಚಿತ್ರಣ ಕಂಗೊಳಿಸುತ್ತಿತ್ತು, ಅದು ಕೇವಲ ಒಂದು ವಿವಾಹ ವಾರ್ಷಿಕೋತ್ಸವ ಸಮಾರಂಭವಾಗಿರದೆ
ಕುಟುಂಬವೆಂಬ ಮೌಲ್ಯದ ಪುನರ್ ‌ಪ್ರತಿಷ್ಠಾಪನೆಯ ಮಹಾಯೋಗಮೇಳವಾಗಿತ್ತು ಎಂದರು.

ಬರುವ ದಿನಗಳಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯಲ್ಲಿಯೇ ದೇಶದ ಭವಿಷ್ಯದ ಚಿಕಿತ್ಸಾ ಪದ್ಧತಿಯಿದೆ ಇದನ್ನು ಜನಮಾನಸಕ್ಕೆ ತಲುಪಿಸಲು ಕಳೆದ ಮೂರು ದಶಕಗಳಿಂದ ಪದ್ಮಶ್ರೀ ಜಯಪ್ರಕಾಶ ಅಗ್ರವಾಲ್ ಅವರ ಮಾರ್ಗದರ್ಶನದಲ್ಲಿ ಸೂರ್ಯ ಫೌಂಡೇಶನ್ ಅಂಗಸಂಸ್ಥೆಯಾದ ಇಂಟರ್ನ್ಯಾಶನಲ್ ನ್ಯಾಚುರೋಪತಿ ಆರ್ಗನೈಜೆಶನ್ ಅದ್ಯಕ್ಷರಾದ ಅನಂತ ಬಿರಾದಾರ ಅವರು ಮಾಡುತ್ತಿರುವ ಸಮಾಜಮುಖಿ ಕಾರ್ಯಗಳು ನಿಜಕ್ಕೂ ಅನೇಕರಿಗೆ ಪ್ರೇರಣಾದಾಯಿಯಾಗಿದೆ ಎಂಬುದಕ್ಕೆ ಇಲ್ಲಿ ಮೂಡಿಬಂದ ಅವರ ಜೀವನದ ಸಾಕ್ಷ್ಯಚಿತ್ರವೇ ಸಾಕ್ಷಿ ಎಂದರು.

ಅನಂತ ಬಿರಾದಾರ ಅವರು 
ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿಯೊಬ್ಬರಿಗು ಬಾಲ್ಯದಲ್ಲಿಯೆ ಸರಿಯಾದ ಸಂಸ್ಕಾರ ಸಿಗಬೇಕು ನನಗೆ ನನ್ನ ತಂದೆ ತಾಯಿ ಹಾಗೂ ಆರ್.ಎಸ್ಎಸ್ ಮತ್ತು ಎ.ಬಿ.ವಿ.ಪಿ ನೀಡಿದ ಸಂಸ್ಕಾರದ ಫಲವಾಗಿಯೆ ನಾನು ಇಂದು ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡಲು ಸಾಧ್ಯವಾಗಿದೆ ಇಲ್ಲವಾದಲ್ಲಿ ಯಾವುದಾದರೊಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿರುತ್ತಿದ್ದೆ ಕೆಲಸದ ಒತ್ತಡದಲ್ಲಿ ಸಂಬಂಧಗಳ ಮಹತ್ವನೆ ಕಳೆದುಕೊಳ್ಳುತ್ತಿರುವ ಸಮಯದಲ್ಲಿ ಸಂಘದ ಕುಟುಂಬ ಪ್ರಬೋದನ ಕಾರ್ಯಕ್ರಮ ಆಯೋಜಿಸಿದ್ದೆನೆ ಎಂದರು.

ಈ ಸಂದರ್ಭದಲ್ಲಿ ಬಿರಾದಾರ ಪರಿವಾರದ ರಂಗರಾವ,ತಾನಾಜಿ,ನಾರಾಯಣ, ಮನೋಜ,ಮಹೇಶ,ಕಿರಣ,ಹರ್ಷ ಸೇರಿದಂತೆ ಪ್ರಮುಖರಾದ ಗುರುನಾಥ ರಾಜಗೀರಾ, ಈಶ್ವರ ರುಮ್ಮಾ, ಕೃಷ್ಣಾ ನಾಮದೇವ, ದಿಗಂಬರರಾವ ಮಾನಕಾರಿ, ಜನಾರ್ದನ ಬಿರಾದಾರ, ರಾವಸಾಹೇಬ ಬಿರಾದಾರ, ಉದ್ಯಮಿಗಳಾದ ಡಿ.ಡಿ ಪವಾರ, ಜಿ.ಡಿ ಪವಾರ, ಸತೀಷ ಚೊಂಡೆ, ವಿಜಯಲಕ್ಷ್ಮಿ ಚೊಂಡೆ ಉಪಸ್ಥಿತರಿದ್ದರು.

By News Desk - 18-05-2026


Ads in Post