ರಾಮನಗರ: ಬಿಡದಿ ಟೌನ್ಶಿಪ್ ಯೋಜನೆಗೆ ವಿರೋಧವಾಗಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಜೆನ್ Z ಯುವಕರು ಬೆಂಬಲ ಸೂಚಿಸಿದ್ದಾರೆ. ಹೋರಾಟ ನಡೆಯುತ್ತಿರುವ ಗ್ರಾಮಗಳಿಗೆ ಭೇಟಿ ನೀಡಿದ ಯುವಕರು ರೈತರೊಂದಿಗೆ ಮಾತುಕತೆ ನಡೆಸಿ, ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಕಳೆದ ಕೆಲ ತಿಂಗಳಿಂದ ರಾಜ್ಯ ಸರ್ಕಾರಕ್ಕೆ ತಲೆ ನೋವಾಗಿರುವ ಬಿಡದಿ ಟೌನ್ಶಿಪ್ ಯೋಜನೆ ವಿರೋಧಿಸಿ ಇದೀಗ ಯುವಕರು ಬೀದಿಗೆ ಇಳಿದಿದ್ದಾರೆ. ಯುವಕರ ಪ್ರತಿನಿಧಿಗಳು, ರೈತರ ಭೂಮಿ ಮತ್ತು ಜೀವನೋಪಾಯವನ್ನು ಕಸಿದುಕೊಳ್ಳುವ ಯಾವುದೇ ಯೋಜನೆಯನ್ನು ಒಪ್ಪಲಾಗದು ಎಂದು ಹೇಳಿದ್ದು, ಇದು ಕೇವಲ ರೈತರ ಸಮಸ್ಯೆಯಲ್ಲ, ರಾಜ್ಯದ ಪ್ರತಿಯೊಬ್ಬ ನಾಗರಿಕನ ಹೋರಾಟವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರೈತರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ತಮ್ಮ ಒಪ್ಪಿಗೆಯಿಲ್ಲದೆ ಭೂಸ್ವಾಧೀನ ಮಾಡಬಾರದು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಸರ್ಕಾರ ಯೋಜನೆಯಿಂದ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳುತ್ತಿದ್ದರೆ, ರೈತರು ತಮ್ಮ ಕೃಷಿಭೂಮಿ ಉಳಿಸಿಕೊಳ್ಳಲು ಹೋರಾಟ ಮುಂದುವರಿಸಿದ್ದಾರೆ. ಜೆನ್ Z ಯುವಕರು ಮುಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲೂ ಈ ಹೋರಾಟಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದ್ದು, ರೈತರ ನ್ಯಾಯಸಮ್ಮತ ಬೇಡಿಕೆ ಈಡೇರುವವರೆಗೆ ಹೋರಾಟದ ಜೊತೆ ನಿಲ್ಲುವುದಾಗಿ ಘೋಷಿಸಿದ್ದಾರೆ..