ಲಕ್ನೋ: ಹಿಜಾಬ್(Hijab) ಕುರಿತು ಅಲಹಾಬಾದ್ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ, ವಿದ್ಯಾರ್ಥಿಯೊಬ್ಬಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ʻಸ್ತ್ರೀಯರು ಹಿಜಾಬ್ ಧರಿಸುವುದು ಮುಸ್ಲಿಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಆದೇಶಿಸಿದೆ.
ಪ್ರಯಾಗ್‌ರಾಜ್‌ನ ಖಾಸಗಿ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಶಾಲಾ ಸಮವಸ್ತ್ರದ ಜೊತೆಗೆ ಹಿಜಾಬ್ ಧರಿಸಲು ಅನುಮತಿ ಕೋರಿ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಿದ್ದಳು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಶೈಕ್ಷಣಿಕ ಸಂಸ್ಥೆಗಳು ನಿಗದಿಪಡಿಸಿರುವ ಸಮವಸ್ತ್ರ ಸಂಹಿತೆಯನ್ನ ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಆದ್ಯತೆಗಳಿಗೆ ತಕ್ಕಂತೆ ಬದಲಾಯಿಸುವ ಯಾವುದೇ ಹಕ್ಕನ್ನ ಹೊಂದಿಲ್ಲ ಎಂದು ಹೇಳಿದೆ.
ವಿದ್ಯಾರ್ಥಿನಿಯ ವಾದವೇನು..!
ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದ ವಿದ್ಯಾರ್ಥಿನಿ 10ನೇ ತರಗತಿ ಉತ್ತೀರ್ಣರಾಗಿ ಅದೇ ಶಾಲೆಯಲ್ಲಿ 11ನೇ ತರಗತಿಗೆ ಪ್ರವೇಶ ಪಡೆಯಲು ಇಚ್ಛಿಸಿದ್ದಳು, ಶಾಲಾ ಸಮವಸ್ತ್ರದ ಜೊತೆಗೆ ಹಿಜಾಬ್ ಧರಿಸಲು ಅನುಮತಿ ನೀಡಬೇಕು. ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಆಚರಣೆಯಾಗಿದ್ದು, 6ನೇ ತರಗತಿಯಿಂದಲೂ ತಾನು ಅದನ್ನು ಧರಿಸುತ್ತಿದ್ದೇನೆ ಎಂದು ಶಾಲಾ ಆಡಳಿತ ಮಂಡಳಿಯ ಮುಂದೆ ಕೋರಿದ್ದಳು, ಆದರೆ ಶಾಲಾ ಆಡಳಿತ ಮಂಡಳಿ ಅದಕ್ಕೆ ಅವಕಾಶ ಮಾಡಿಕೊಡದ ಹಿನ್ನಲೆ, ತನ್ನ ತಾಯಿ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಳು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಜೆ. ಮುನೀರ್ ಮತ್ತು ಇಂದ್ರಜಿತ್ ಶುಕ್ಲಾ ಅವರಿದ್ದ ದ್ವಿಸದಸ್ಯ ಪೀಠವು, ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಸ್ಪಷ್ಟಪಡಿಸಿತು. ಈ ವಿಷಯ ಬಂದಾಗಲೆಲ್ಲಾ ಹೈಕೋರ್ಟ್‌ಗಳು ಹಿಜಾಬ್ ಧರಿಸದಿರುವುದರಿಂದ ಧರ್ಮಕ್ಕೆ ಯಾವುದೇ ಧಕ್ಕೆ ಬರುವುದಿಲ್ಲ ಎಂಬ ಏಕಾಭಿಪ್ರಾಯದ ತೀರ್ಪುಗಳನ್ನು ನೀಡಿವೆ ಎಂದು ಪೀಠ ಉಲ್ಲೇಖಿಸಿದೆ.
ಶಾಲೆಯ ತರಗತಿಗಳ ಫೋಟೋಗಳನ್ನು ಪರಿಶೀಲಿಸಿದ ನ್ಯಾಯಾಲಯ, ಅರ್ಜಿದಾರ ವಿದ್ಯಾರ್ಥಿನಿಯ ಸಮುದಾಯಕ್ಕೆ ಸೇರಿದ ಇತರ ಯಾವುದೇ ವಿದ್ಯಾರ್ಥಿನಿಯರೂ ಹಿಜಾಬ್ ಧರಿಸಿಲ್ಲ, ಕೇವಲ ಈ ವಿದ್ಯಾರ್ಥಿನಿ ಮಾತ್ರ ಧರಿಸಿದ್ದಾಳೆ ಎಂಬುದನ್ನು ಗಮನಿಸಿತು. ಸಮವಸ್ತ್ರ ನಿಯಮವು ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನವಾಗಿ ಅನ್ವಯಿಸುತ್ತದೆ. ವೈಯಕ್ತಿಕ ಆಯ್ಕೆಯ ಆಧಾರದ ಮೇಲೆ ಪ್ರತಿಯೊಬ್ಬ ವಿದ್ಯಾರ್ಥಿಗೂ ವಿನಾಯಿತಿ ನೀಡಿದರೆ ಸಮವಸ್ತ್ರದ ಮೂಲ ಪರಿಕಲ್ಪನೆ ಹಾಗೂ ಶಾಲೆಯ ಶಿಸ್ತೇ ಹಾಳಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.