Search


ಯಾವಾಗ ಬ್ಯಾಟಿಂಗ್ ಕ್ರಮಾಂಕ ಕುಸಿದು ಬೀಳುತ್ತದೆಯೋ ಆಪದ್ಬಾಂಧವನಂತೆ ರಾಹುಲ್ ನಿಂತು ಬಿಡುತ್ತಾನೆ.

ತುಳಿಯುತ್ತಲೇ ಇರಿ.. ತಳ್ಳುತ್ತಲೇ ಇರಿ.. ತುಳಿದಷ್ಟೂ ತಳ್ಳಿದಷ್ಟೂ ಮೇಲೆದ್ದು ನಿಲ್ಲುತ್ತಲೇ ಇರುತ್ತಾನೆ..!

ಕಾರಣ, ಕೊಲ್ಲಲು ಹತ್ತು ಜನ ನಿಂತು ಬಿಟ್ಟರೆ ಕಾಯಲು ಒಬ್ಬ ಇದ್ದೇ ಇರುತ್ತಾನೆ.. ಅವನನ್ನು ಕಾಯುತ್ತಿರುವುದು ಅವನ ನಂಬಿಕೆ, ಹಠ..

ಉಳಿ ಪೆಟ್ಟು ಬಿದ್ದಷ್ಟೂ ಶಿಲೆ ಕಲೆಯಾಗಿ ಅರಳುತ್ತದೆ ಎಂಬ ಮಾತಿದೆ.. ಆದರೆ ಅರಳಿದ ಕಲೆಯ ಮೇಲೂ ಉಳಿಪೆಟ್ಟು ಬೀಳುತ್ತಲೇ ಇದ್ದರೆ ಕಲೆಯಾಗಿ ಅರಳಿದ ಕಲ್ಲೇ ಕರಗಿ ಬಿಡುತ್ತದೆ.

ರಾಹುಲ್ ಮೇಲೆ ಬಿದ್ದ ಕಲ್ಲುಗಳು, ಉಳಿ ಪೆಟ್ಟುಗಳು ಒಂದಾ.. ಎರಡಾ..? ಹತ್ತಾರು, ನೂರಾರು, ಸಾವಿರಾರು.. ಆದರೆ ಅವನು ಬಗ್ಗುತ್ತಲೂ ಇಲ್ಲ, ಜಗ್ಗುತ್ತಲೂ ಇಲ್ಲ.. ಕಾರಣ, ಅವನು ಕಲ್ಲಲ್ಲ.. ಗರುಡಗಂಬ.. ಭಾರತ ತಂಡದ ಗರುಡಗಂಬ..

ಸಿಗುವುದೇ ಮೂರು ಮತ್ತೊಂದು ಅವಕಾಶ.. ಪ್ರತೀ ಪಂದ್ಯವನ್ನೂ ಅವನು ಒತ್ತಡದಲ್ಲೇ ಆಡಬೇಕು. ಈ ಪಂದ್ಯದಲ್ಲಿ ಐದನೇ ಕ್ರಮಾಂಕದಲ್ಲಿ ಆಡಿದರೆ ನಾಳೆ ಮತ್ತೆ ಅದೇ ಜಾಗದಲ್ಲಿ ಆಡುತ್ತೇನೆ ಎಂಬ ನಂಬಿಕೆಯೂ ಇಲ್ಲ, ಭರವಸೆಯೂ ಇಲ್ಲ.. ಅವನಿಗೆಂದೇ ಒಂದು ಕ್ರಮಾಂಕವಿಲ್ಲ.. ಸ್ಪಷ್ಟತೆಯಂತೂ ಇಲ್ಲವೇ ಇಲ್ಲ..

ಆದರೆ ಆಡಿದ ಕ್ರಮಾಂಕಗಳಲ್ಲೆಲ್ಲಾ ಅವನದ್ದು ಅಧಿಕಾರಯುತ ಆಟ.. ಇವತ್ತು ವೆಸ್ಟ್ ಇಂಡೀಸ್ ವಿರುದ್ಧ ರಾಹುಲ್’ನದ್ದು pure class under pressure. ಏಕದಿನ ಅಂತರಾಷ್ಟ್ರೀಯ ವೃತ್ತಿಜೀವನದ ಗರಿಷ್ಠ ಸ್ಕೋರ್ ಜೊತೆಗೆ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 10,000 ರನ್’ಗಳ ಮೈಲುಗಲ್ಲು..

ಫ್ಲ್ಯಾಟ್ ಟ್ರ್ಯಾಕ್’ಗಳಲ್ಲಿ ರಾಹುಲ್’ಗೆ ಬ್ಯಾಟಿಂಗ್ ಅವಕಾಶ ಸಿಗುವುದೇ ವಿರಳ. ಕಾರಣ, ಅದನ್ನು ಅಗ್ರಕ್ರಮಾಂಕದವರ ಅಧಿಕಾರವಾಗಿಸಿ ವರ್ಷಗಳೇ ಕಳೆದಿವೆ..

ಆದರೆ ಯಾವಾಗ ಬ್ಯಾಟಿಂಗ್ ಕ್ರಮಾಂಕ ಕುಸಿದು ಬೀಳುತ್ತದೆಯೋ ಆಪದ್ಬಾಂಧವನಂತೆ ರಾಹುಲ್ ನಿಂತು ಬಿಡುತ್ತಾನೆ.

ಈ ಪಂದ್ಯಕ್ಕೂ ಮುನ್ನ 100 ಓವರ್ ಸ್ಟಂಪ್ ಹಿಂದೆ ನಿಂತವನಿಗೆ ಸ್ಟಂಪ್ ಮುಂದೆ ಬ್ಯಾಟ್ ಹಿಡಿದು ನಿಲ್ಲುವ ಅವಕಾಶವೇ ಸಿಗಲಿಲ್ಲ.. ಆದರೆ ಅವಕಾಶ ಸಿಗುತ್ತಿದ್ದಂತೆ ರಾಹುಲ್ ತನ್ನ ತಾಕತ್ತು ತೋರಿಸಿ ಬಿಟ್ಟ.. ಜಾಗ ಯಾವುದೇ ಇರಲಿ.. ಪರಿಸ್ಥಿತಿ ಎಂಥದ್ದೇ ಇರಲಿ.. ರಾಹುಲ್’ನಷ್ಟು ಪರಿಸ್ಥಿತಿಗೆ ಹೊಂದಿಕೊಂಡು ಅಚ್ಚುಕಟ್ಟಾಗಿ ಜವಾಬ್ದಾರಿ ನಿಭಾಯಿಸುವ ಮತ್ತೊಬ್ಬನನ್ನು ತೋರಿಸಿ.. ಸಾಧ್ಯವೇ ಇಲ್ಲ.. ಒಬ್ಬ ರಾಹುಲ್ ದ್ರಾವಿಡ್ ಬಿಟ್ಟರೆ ಮತ್ತೊಬ್ಬ ರಾಹುಲ್ ಅಷ್ಟೇ..

ರಾಹುಲ್ ಅಗ್ರಕ್ರಮಾಂಕದ ಅತ್ಯಂತ ನಂಬಿಕಸ್ಥ ದಾಂಡಿಗ.. ಭಾರತ ತಂಡದ ಕಥೆ ಹೇಳುತ್ತಿಲ್ಲ.. ಕರ್ನಾಟಕ ಪರ ಅವನು ಆಡಿದ ದೊಡ್ಡ ದೊಡ್ಡ ಇನ್ನಿಂಗ್ಸ್’ಗಳು, ಕರ್ನಾಟಕಕ್ಕೆ ರಣಜಿ ಟ್ರೋಫಿ ಗೆದ್ದುಕೊಟ್ಟ ಶತಕಗಳೆನ್ನೆಲ್ಲಾ ಬಾರಿಸಿದ್ದು ಆರಂಭಿಕನಾಗಿ. ಮಧ್ಯೆ 3ನೇ ಕ್ರಮಾಂಕದಲ್ಲಿ ಆಡಿದ್ದೂ ಇದೆ. ಆದರೆ.. ಈ 5, 6ನೇ ಕ್ರಮಾಂಕ ಅವನಿಗೆ ಪರಿಸ್ಥಿತಿಯ ಅನಿವಾರ್ಯತೆಗೆ ಸಿಕ್ಕ ಉಡುಗೊರೆ.

ಆಟ ಬಲ್ಲವನಿಗೆ ಅಖಾಡ ಯಾವುದಾದರೇನು..?

5ನೇ ಕ್ರಮಾಂಕದಲ್ಲಿ ರಾಹುಲ್ ಆಟವನ್ನೊಮ್ಮೆ ನೋಡಿ..

- 36 ಇನ್ನಿಂಗ್ಸ್

- 1646 ರನ್

- 68.58 ಸರಾಸರಿ

- 103.19 ಸ್ಟ್ರೈಕ್ ರೇಟ್

- 4 ಶತಕ

- 10 ಅರ್ಧಶತಕ

ಇಂತಹ ಅಮೋಘ ದಾಖಲೆಯನ್ನು ಬೆನ್ನಿಗೆ ಕಟ್ಟಿಕೊಂಡಿರುವ ಆಟಗಾರನನ್ನು ಇನ್ನೂ ಫುಟ್ಬಾಲ್ ಆಡುತ್ತಾರೆ ಎಂದಾದರೆ ಅದು ವಿಕೃತಿಯಲ್ಲದೆ ಮತ್ತಿನ್ನೇನೂ ಅಲ್ಲ.

ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 5ನೇ ಕ್ರಮಾಂಕದಲ್ಲಿ ಭಾರತ ಪರ ಅತೀ ಹೆಚ್ಚು ಶತಕಗಳು

 

By Reporter Desk - 04-10-2026


Ads in Post