ಬೆಂಗಳೂರು: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದಲಿತರ ನೀಲಿ ಶಾಲು ಹಾಗೂ ದಲಿತ ಸಂಘಟನೆಗಳ ಕುರಿತು ಪ್ರತಾಪ್ ಸಿಂಹ ನೀಡಿರುವ ಹೇಳಿಕೆಗಳನ್ನು ಖಂಡಿಸಿದ ಅವರು, ಪ್ರತಾಪ್ ಸಿಂಹ ವಿರುದ್ಧ ಹಲವು ಕಠಿಣ ಪದಗಳನ್ನು ಬಳಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮುಟ್ಟಾಳ, ನಾಲಾಯಕ್, ನಾಮರ್ದ ಎಂಬ ಪದಗಳನ್ನು ಬಳಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಪ್ರದೀಪ್ ಈಶ್ವರ್, “ದಲಿತರ ನೀಲಿ ಶಾಲಿನ ಬಗ್ಗೆ ಮಾತನಾಡಲು ನೀನು ಯಾರು? ಕೇಸರಿ ಶಾಲಿನ ಬಗ್ಗೆ ಮಾತನಾಡಿಕೋ. ನೀನು ಒಂದು ಕೇಸರಿ ಶಾಲು ಹಾಕಿಕೊಂಡು ಬಾ, ನಾವು ಸಾವಿರ ನೀಲಿ ಶಾಲು ಹಾಕಿಕೊಂಡು ಬರುತ್ತೇವೆ” ಎಂದು ಸವಾಲು ಹಾಕಿದರು. ಪೊಲೀಸ್ ಅಧಿಕಾರಿ ಹಾಗೂ ಇಸ್ಲಾಂ ಧರ್ಮದ ಕುರಿತು ಪ್ರತಾಪ್ ಸಿಂಹ ಮಾತನಾಡಿರುವ ರೀತಿಯನ್ನೂ ಅವರು ಪ್ರಶ್ನಿಸಿದರು.
ದಲಿತರು ಹಾಗೂ ಡಿಎಸ್ಎಸ್ ಕುರಿತು ಮಾತನಾಡುವಾಗ ಬಾಯಿ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎಂದು ಎಚ್ಚರಿಸಿದ ಪ್ರದೀಪ್ ಈಶ್ವರ್, “ಒಂದು ಕೇಸ್ ಹಾಕಿದ್ದೀಯಾ, ಇನ್ನೂ ನೂರು ಕೇಸ್ ಹಾಕು” ಎಂದು ಹೇಳಿದರು. ದೇಶ ಕಟ್ಟುವಲ್ಲಿ ದಲಿತರ ಕೊಡುಗೆ ಮಹತ್ವದ್ದಾಗಿದೆ ಎಂದು ಹೇಳಿದ ಅವರು, ಕಾಂಗ್ರೆಸ್ ಪಕ್ಷ ದಲಿತರನ್ನು ಗೌರವದಿಂದ ನಡೆಸಿಕೊಳ್ಳುತ್ತದೆ ಎಂದು ಪ್ರತಿಪಾದಿಸಿದರು. ಪ್ರತಾಪ್ ಸಿಂಹ ಅವರು ದಲಿತ ಸಮುದಾಯದ ಕ್ಷಮೆ ಕೇಳಬೇಕು ಹಾಗೂ ಡಿಎಸ್ಎಸ್ ವಿರುದ್ಧದ ಹೇಳಿಕೆಗಳಿಗೆ ಕ್ಷಮೆಯಾಚಿಸಬೇಕು ಎಂದು ಪ್ರದೀಪ್ ಈಶ್ವರ್ ಆಗ್ರಹಿಸಿದರು. ಇದೇ ವೇಳೆ ಪ್ರತಾಪ್ ಸಿಂಹ ವಿರುದ್ಧ ವೈಯಕ್ತಿಕವಾಗಿ ಕಠಿಣ ಪದಗಳನ್ನು ಬಳಸಿ ಎಚ್ಚರಿಕೆ ನೀಡಿದರು.