ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಶನಿವಾರ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ . ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರನ್ನು ಏಕವಚನದಲ್ಲಿ ಉಲ್ಲೇಖಿಸಿ ವೈಯಕ್ತಿಕ ಟೀಕೆಗಳನ್ನು ಮಾಡಿದರು. ‘ತ್ರಿಪಲ್ ತಲಾಕ್’ ವಿಚಾರವನ್ನು ಪ್ರಸ್ತಾಪಿಸಿದ ಹರಿಪ್ರಸಾದ್, “ಮದುವೆಯೇ ಆಗಿಲ್ಲ, ಇವನಿಗೆ ತ್ರಿಪಲ್ ತಲಾಕ್ ಯಾಕೆ ಬೇಕು?” ಎಂದು ಪ್ರಶ್ನಿಸಿದರು.
ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಹರಿಪ್ರಸಾದ್, “ನಮ್ಮಲ್ಲಿ ಮಹಾಮಾನವರೊಬ್ಬರು ಪ್ರಧಾನಿಯಾಗಿದ್ದಾರೆ. ಅವರು ‘ಮನ್ ಕಿ ಬಾತ್’ ಎಂದು ಮಾತನಾಡುತ್ತಾರೆ. ಪ್ರಧಾನಿಯಾಗಿ 12 ವರ್ಷ ಕಳೆದರೂ ಧಾರ್ಮಿಕತೆ ಬಗ್ಗೆ 12 ನಿಮಿಷ ಮಾತನಾಡಿರುವುದನ್ನು ನೋಡಿದ್ದೀರಾ?” ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯ ಸಾರ್ವಜನಿಕ ವಲಯದ ಉದ್ಯಮಗಳಿದ್ದು, ಅವುಗಳಲ್ಲಿ ಬಹುತೇಕವನ್ನು ಕಾಂಗ್ರೆಸ್ ಸರ್ಕಾರಗಳು ಸ್ಥಾಪಿಸಿವೆ ಎಂದು ಅವರು ಹೇಳಿದರು. “ಮಹಾಮಾನವರು ಪದೇಪದೇ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಾರೆ. ಆದರೆ 26 ಸಾರ್ವಜನಿಕ ಉದ್ಯಮಗಳನ್ನು ಮಾರಾಟ ಮಾಡಿರುವವರು ಯಾರು ಎಂಬುದನ್ನು ಕೇಳಿ ನೋಡಿ” ಎಂದು ಹರಿಪ್ರಸಾದ್ ಟೀಕಿಸಿದರು.
ಪಂಡಿತ್ ಜವಾಹರಲಾಲ್ ನೆಹರು ಅವರಿಂದ ಹಿಡಿದು ಪಿ.ವಿ. ನರಸಿಂಹರಾವ್ ಅವರವರೆಗೆ ಕಾಂಗ್ರೆಸ್ ನಾಯಕತ್ವದ ಅವಧಿಯಲ್ಲಿ ಸಾರ್ವಜನಿಕ ಉದ್ಯಮಗಳನ್ನು ಸ್ಥಾಪಿಸಲಾಯಿತು ಎಂದು ಹರಿಪ್ರಸಾದ್ ಹೇಳಿದರು. ಗುಜರಾತ್ನಲ್ಲಿ ಸುಮಾರು ನಾಲ್ಕೂವರೆ ವರ್ಷ ಕಾಂಗ್ರೆಸ್ ಉಸ್ತುವಾರಿ ವಹಿಸಿದ್ದ ವೇಳೆ ಒಂದೇ ಒಂದು ಸಾರ್ವಜನಿಕ ಉದ್ಯಮ ಸ್ಥಾಪನೆಯಾಗಿಲ್ಲ ಎಂದು ಹೇಳಿದ ಅವರು, “ಈಗ ಅದಾನಿ, ಅಂಬಾನಿ ಸೇರಿದಂತೆ ಕೆಲವೇ ಬಂಡವಾಳಶಾಹಿಗಳು ಎಲ್ಲವನ್ನೂ ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಆರೋಪಿಸಿದರು.