ಬೆಂಗಳೂರು : ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಖಚಿತವಾಗುತ್ತಿದ್ದಂತೆ, ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಮುನ್ನಲೆಗೆ ಬಂದಿದೆ. ಸಿಎಂ ಸ್ಥಾನಕ್ಕಾಗಿ ಕಳೆದ 3 ವರ್ಷದಿಂದ ಡಿ.ಕೆ ಶಿವಕುಮಾರ್ ಲಾಭಿ ನಡೆಸುತ್ತಿದ್ದು, ಅವರನ್ನೇ ಮುಂದಿನ ಸಿಎಂ ಎಂಬಂತೆ ನೋಡಲಾಗುತ್ತಿತ್ತು. ಆದರೆ ಇದರ ನಡುವೆ ಸಿಎಂ ಆಪ್ತ ಪರಮೇಶ್ವರ್ ಅವರಿಗೆ ಅದೃಷ್ಟ ಖುಲಾಯಿಸುವ ಸಾಧ್ಯತೆ ಇದ್ದು. ಒಂದು ವೇಳೆ ಸಿದ್ದರಾಮಯ್ಯ ಹೈಕಮಾಂಡ್ ಮುಂದೆ ಪರಮೇಶ್ವರ್ ಅವರನ್ನ ಸಿಎಂ ಮಾಡುವಂತೆ ಒತ್ತಡ ಹೇರಿದರೆ, ಪರಮೇಶ್ವರ್ ಸಿಎಂ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ನಿನ್ನೆ ದೆಹಲಿಯ ಎಐಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕತ್ವಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಿದ್ದರಾಮಯ್ಯರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿ, ಆ ಸ್ಥಾನಕ್ಕೆ ಬೇರೊಬ್ಬ ನಾಯಕರನ್ನ ತರಲು ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ. ಆದರೆ ಹೊಸ ಸಿಎಂ ಯಾರಾಗಲಿದ್ದಾರೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ, ಸಿದ್ದರಾಮಯ್ಯರ ನಂತರ ಡಿಕೆಶಿಗೆ ಸಿಎಂ ಸ್ಥಾನ ಸಿಗಲಿದೆ ಎಂದು ಅನೇಕರು ಹೇಳುತ್ತಿದ್ದರು, ಆದರೆ ನಿನ್ನೆಯ ಸಭೆಯ ನಂತರ ಈ ವಿಚಾರ ಇನ್ನು ಸ್ಪಷ್ಟವಾಗಿಲ್ಲ ಎಂಬ ಸೂಚನೆಗಳು ದೊರಕುತ್ತಿವೆ.
ನಿನ್ನೆ ಸಭೆ ಬಳಿಕ ಹೊರಬಂದ ಸಿದ್ದರಾಮಯ್ಯರ ಮುಖದಲ್ಲಿ ರಾಜೀನಾಮೆ ನೀಡುವ ಬೇಸರ ಕಾಣಿಸಿದರು ಕೂಡ, ಡಿಕೆ ಶಿವಕುಮಾರ್ ಅವರ ಮುಖದಲ್ಲಿ ಮುಂದಿನ ಸಿಎಂ ಆಗುತ್ತಿರುವ ಸಂತೋಷವಾಗಲಿ ಅಥವಾ ಕಾಂಗ್ರೆಸ್ ಹೈಕಮಾಂಡ್ ತಮ್ಮ ಪರವಾಗಿ ನಿರ್ಧಾರ ತೆಗೆದುಕೊಂಡಿರುವ ಸೂಚನೆಗಳು ಕಾಣಿಸಿಲ್ಲ, ಜೊತೆಗೆ ಒಂದು ಹಂತದಲ್ಲಿ ಈ ಕುರಿತು ಪ್ರಶ್ನೆ ಮಾಡಿದ ಮಾಧ್ಯಮದವರ ಮೇಲೂ ಡಿಕೆ ಸಿಟ್ಟಾದರು. ಜೊತೆಗೆ ಸಿಎಂ ಬೆಂಗಳೂರಿಗೆ ವಾಪಸಾಗಿದ್ದರು ಕೂಡ, ಡಿಕೆಶಿ ದೆಹಲಿಯಲ್ಲೇ ಇರುವುದೂ ರಾಜಕೀಯ ಪಂಡಿತರ ಕುತೂಹಲಕ್ಕೆ ಕಾರಣವಾಗಿದೆ.
ಪರಂಗೆ ಖುಲಾಯಿಸುತ್ತಾ ಅದೃಷ್ಟ..!
ಕಳೆದ ಕೆಲ ತಿಂಗಳಿಂದಲೂ ರಾಜ್ಯದಲ್ಲಿ ದಲಿತ ಸಿಎಂ ಕೂಗು ಕೇಳಿ ಬರುತ್ತಲೆ ಇದೆ, ಪರಮೇಶ್ವರ್ ಅವರನ್ನ ಸಿಎಂ ಮಾಡುವಂತೆ ಅನೇಕ ನಾಯಕರು ಹೈಕಮಾಂಡ್ ಮುಂದೆ ಬೇಡಿಕೆಯನ್ನ ಇಟ್ಟಿದ್ದಾರೆ. ಆದರೆ ಡಿಕೆ ಶಿವಕುಮಾರ್ ಪರವಾಗಿ ಹೈಕಮಾಂಡ್ ಒಲವು ತೋರಿದ ಕಾರಣ, ಪರಂ ಹೆಸರು ಮುನ್ನಲೆಗೆ ಬಂದಿರಲಿಲ್ಲ, ಆದರೆ ಸಿಎಂ ಸ್ಥಾನ ಬಿಟ್ಟುಕೊಡುತ್ತಿರುವ ಸಿದ್ದು ಪರಮೇಶ್ವರ್ ಅವರನ್ನ ಸಿಎಂ ಮಾಡುವಂತೆ ಹೈಕಮಾಂಡ್ ಮುಂದೆ ಒತ್ತಡ ಹೇರಿದರೆ, ಪರಮೇಶ್ವರ್ ಕೂಡ ಸಿಎಂ ಆಗುವ ಸಾಧ್ಯತೆಗಳನ್ನ ಅಲ್ಲಗಳೆಯಲು ಸಾಧ್ಯವಿಲ್ಲ.