Search


ಮೋದಿಯಿಂದಾಗಿ ಬಿಜೆಪಿ ಗೆಲ್ಲುತ್ತಿಲ್ಲ, ಕಾಂಗ್ರೆಸ್‌ನಿಂದಾಗಿ ಬಿಜೆಪಿ ಗೆಲ್ಲುತ್ತಿದೆ: "ಕೈ" ವಿರುದ್ದ ಉದಯನಿಧಿ ಆಕ್ರೋಶ

ಚೆನ್ನೈ: ಕಾಂಗ್ರೆಸ್‌ ವಿರುದ್ದ ತಮಿಳುನಾಡು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್‌ ವಾಗ್ದಾಳಿ ನಡೆಸಿದ್ದು, ಮೈತ್ರಿಯನ್ನು ಮುರಿದುಕೊಂಡು ಟಿವಿಕೆ ಜೊತೆ ಕೈಜೋಡಿಸಿದ ಕಾಂಗ್ರೆಸ್‌ ಮೇಲೆ ಕೆಂಡವಾಗಿದ್ದಾರೆ. " ನಮ್ಮ ಬೆನ್ನಿಗೆ ಚೂರಿ ಹಾಕಿದ ಕಾಂಗ್ರೆಸ್‌ನನ್ನು ನಾವು ಎಂದಿಗೂ ನಂಬೋದಿಲ್ಲ, ದೇಶದಲ್ಲಿ ಬಿಜೆಪಿ ನಿರಂತರವಾಗಿ ಚುನಾವಣೆಗಳನ್ನ ಗೆಲ್ಲಲು ಕಾಂಗ್ರೆಸ್‌ ಮಾಡುತ್ತಿರುವ ದ್ರೋಹವೇ ಕಾರಣ" ಎಂದು ಉದಯನಿಧಿ ಕಾಂಗ್ರೆಸ್‌ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟದ ಭಾಗವಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ ಪಕ್ಷವು 5 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ, ಫಲಿತಾಂಶ ಪ್ರಕಟವಾಗಿ ವಿಜಯ್ ಅವರ ಟಿವಿಕೆ ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿದ್ದಂತೆ, ಕಾಂಗ್ರೆಸ್ ತಕ್ಷಣವೇ ಡಿಎಂಕೆ ಜೊತೆಗಿನ ಮೈತ್ರಿಯನ್ನು ಮುರಿದು ವಿಜಯ್ ಸರ್ಕಾರಕ್ಕೆ ಬೆಂಬಲ ಘೋಷಿಸಿತು. ಕಾಂಗ್ರೆಸ್‌ನ ಈ ಹಠಾತ್ ನಿರ್ಧಾರ ಡಿಎಂಕೆ ನಾಯಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಕಾಂಗ್ರೆಸ್‌ ಟಿವಿಕೆಗೆ ಬೆಂಬಲ ಘೋಷಿಸಿದ ದಿನದಿಂದಲೂ ಡಿಎಂಕೆ ನಾಯಕರು ಕಾಂಗ್ರೆಸ್‌ ಮೇಲೆ ವಾಗ್ದಾಳಿ ನಡೆಸುತ್ತಿದ್ದರು. ಆದರೆ ಇಂದು ಡಿಎಂಕೆ ಯುವ ಘಟಕದ ಸಭೆಯಲ್ಲಿ ಮಾತನಾಡಿದ ಉದಯನಿಧಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. “ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಪಕ್ಷವು ನಮ್ಮ ಹೆಗಲ ಮೇಲೆ ಕುಳಿತು ರಾಜಕೀಯ ಲಾಭ ಪಡೆದುಕೊಂಡಿತು. ಆದರೆ ಇಂದು ಅವರು ನಮಗೆ ಬೆನ್ನಿಗೆ ಚೂರಿ ಹಾಕಿದ್ದಾರೆ. ಈ ದ್ರೋಹವನ್ನು ಯಾರೂ ಮರೆಯಬಾರದು. ಭವಿಷ್ಯದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅನ್ನು ನಂಬಬೇಡಿ, ಅವರನ್ನು ನಮ್ಮ ಹತ್ತಿರವೂ ಸೇರಿಸಬೇಡಿ” ಎಂದು ಕಿಡಿಕಾರಿದ್ದಾರೆ.

ದೇಶದಲ್ಲಿ ಬಿಜೆಪಿ ಗೆಲ್ಲಲು ಕಾಂಗ್ರೆಸ್‌ ಕಾರಣ..!

ಜೊತೆಗೆ ಬಿಜೆಪಿ ನಿರಂತರವಾಗಿ ಚುನಾವಣೆ ಗೆಲ್ಲಲು ಕಾಂಗ್ರೆಸ್‌ ಕಾರಣ ಎಂದು ಆರೋಪಿಸಿರುವ ಉದಯನಿಧಿ, " ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಷಾ ಕಾರ್ಯತಂತ್ರದಿಂದ ಬಿಜೆಪಿ ಚುನಾವಣೆಗಳನ್ನ ಗೆಲ್ಲುತ್ತಿದೆ ಎಂದು ನಾನು ಭಾವಿಸಿದ್ದೆ. ಆದರೆ ಬಿಜೆಪಿ ಗೆಲ್ಲಲು ನಿಜವಾದ ಕಾರಣವೆಂದರೆ ಅದು ಕಾಂಗ್ರೆಸ್‌ನ ದುರಾಸೆ ಮತ್ತು ದ್ರೋಹದ ರಾಜಕಾರಣ ಎಂದು ಈಗ ಸ್ಪಷ್ಟವಾಗಿದೆ ಎಂದು ಹೇಳಿದರು. ಮುಂದುವರಿದು ಮಾತನಾಡಿದ ಉದಯನಿಧಿ “ತಮಿಳುನಾಡಿನಲ್ಲಿ ಜಾತ್ಯತೀತತೆಯನ್ನು ಉಳಿಸಲು ಮತ್ತು ಬಿಜೆಪಿಯನ್ನು ದೂರವಿಡಲು ಡಿಎಂಕೆ ಕಾರ್ಯಕರ್ತರು ರಕ್ತ ಮತ್ತು ಬೆವರಿನ ಜಲ ಹರಿಸಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದರು. ಅಸ್ತಿತ್ವವೇ ಇಲ್ಲದ ಕಾಂಗ್ರೆಸ್ ಕೇವಲ ಡಿಎಂಕೆ ಬೆಂಬಲದಿಂದಾಗಿ 5 ಸೀಟು ಗೆದ್ದಿತು. ಆದರೆ ಗೆದ್ದ ತಕ್ಷಣ, ಸೌಜನ್ಯಕ್ಕೂ ನಮಗೆ ತಿಳಿಸದೇ ಅಧಿಕಾರದಾಸೆಗೆ ಓಡಿಹೋಗಿದ್ದಾರೆ. ಕಾಂಗ್ರೆಸ್‌ಗೆ ಕನಿಷ್ಠ ಕೃತಜ್ಞತೆಯೂ ಇಲ್ಲ” ಎಂದು ಉದಯನಿಧಿ ತರಾಟೆಗೆ ತೆಗೆದುಕೊಂಡಿದ್ದಾರೆ.

ತಮಿಳುನಾಡಿನ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ನಟ ವಿಜಯ್ ಅವರ ಸರ್ಕಾರದ ಮೇಲೂ ಉದಯನಿಧಿ ದಾಳಿ ಮುಂದುವರಿಸಿದ್ದಾರೆ. ತಂಜಾವೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಟಿವಿಕೆ ಸರ್ಕಾರದ ಅಸಲಿ ಮುಖ ಕೇವಲ ಹತ್ತು ದಿನಗಳಲ್ಲಿ ಜನರಿಗೆ ಗೊತ್ತಾಗಿದೆ ಎಂದು ಲೇವಡಿ ಮಾಡಿದ್ದಾರೆ.


 

By thebigbulletin.com - 24-05-2026


Ads in Post