ಹಾಸನ: ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ, ಕಾಂಗ್ರೆಸ್ ಅಭ್ಯರ್ಥಿಯ ವಿರುದ್ದ ಷಡ್ಯಂತ್ರ ಮಾಡಿರುವ ಆರೋಪ ಎದುರಿಸುತ್ತಿರುವ ಜಮೀರ್ ಅಹಮ್ಮದ್ (Zameer Ahmed), ಡಿಕೆಶಿ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ, ಇದರ ನಡುವೆ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯವೊಂದನ್ನ ನುಡಿದಿದ್ದು. "ಜಮೀರ್ ಸಾಹೇಬ್ರು ಮತ್ತೊಮ್ಮೆ ಮಂತ್ರಿ ಮಂಡಲ ಸೇರ್ತಾರೆ" ಎಂದಿದ್ದಾರೆ.
ಜಮೀರ್ ಅಹಮ್ಮದ್ ಅವರದ್ದು ಎನ್ನಲಾದ ಆಡಿಯೋವೊಂದು ಇತ್ತೀಚೆಗೆ ವೈರಲ್ ಆಗಿತ್ತು, ಈ ಆಡಿಯೋದಲ್ಲಿ ಜಮೀರ್ ಅವರು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಷಡ್ಯಂತ್ರ ರೂಪಿಸಿದ್ದರು ಎನ್ನಲಾಗಿತ್ತು. ಇದರ ಬಗ್ಗೆಯೂ ಮಾತನಾಡಿರುವ ಕೋಡಿಮಠ ಸ್ವಾಮೀಜಿ "ಜಮೀರ್ ಅವರ ಆಡಿಯೋ ವಿಚಾರ ಅಪಪ್ರಚಾರದ ಉದ್ದೇಶದಿಂದ ಆಗಿದೆ. ಇನ್ನೊಂದು ದೊಡ್ಡ ಅಪಪ್ರಚಾರ ಇತ್ತು. ಇದು ಮೊದಲು ಬಂದು ಆ ಅಪಪ್ರಚಾರ ಮುಚ್ಚಿ ಹೋಗುತ್ತಿದೆ. ಜಮೀರ್ ಹೆದರುವ ಅವಶ್ಯಕತೆ ಇಲ್ಲ. ಅವರು ಮತ್ತೊಮ್ಮೆ ಮಂತ್ರಿಮಂಡಲ ಸೇರುತ್ತಾರೆ ಎಂದಿದ್ದಾರೆ.
ಅರಸೀಕೆರೆಯ ಅಲ್ ಅಮೀನ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿವೇತನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಸ್ವಾಮೀಜಿ, ʻಜಮೀರ್ ಅವರ ಜೊತೆಗೆ ನಮ್ಮ ಶಿವಲಿಂಗೇಗೌಡರಿಗೂ ಮಂತ್ರಿ ಸ್ಥಾನ ಸಿಗುತ್ತದೆ. ಯೋಚನೆ ಮಾಡುವುದು ಬೇಡ. ಸಂಬಂಧಪಟ್ಟವರ ಜೊತೆ ನಾನು ಈಗಾಗಲೇ ಮಾತನಾಡಿದ್ದೇನೆ. ನಾಳೆಯೂ ಮಾತನಾಡುತ್ತೇನೆ. ಯಾವ ಕಾರಣಕ್ಕೂ ಜಮೀರ್ ಇಲ್ಲದ ಸರ್ಕಾರ ಆಗಲ್ಲ. ಜಮೀರ್ ಇದ್ದರೆ ಮಾತ್ರ ಅದು ಸರ್ಕಾರ ಎನಿಸಿಕೊಳ್ಳುತ್ತದೆ. ಆ ದೃಷ್ಟಿಯಿಂದ ಅವರು ಮತ್ತೊಮ್ಮೆ ಮಂತ್ರಿ ಆಗುತ್ತಾರೆ. ಯಾವುದೇ ಕಾರಣಕ್ಕೂ ಆಕ್ರೋಶಕ್ಕೆ ಒಳಗಾಗಬೇಡಿ. ಶಾಂತಿಯಿಂದ ಇರಿ. ಇದರ ಬಗ್ಗೆ ನಾನು ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಜಮೀರ್ಗೆ ಮಂತ್ರಿ ಸ್ಥಾನ ಸಿಕ್ಕಿದ ಕೂಡಲೇ ಇಲ್ಲಿಗೆ ಕರೆದುಕೊಂಡು ಬರೋಣ. ಅವರ ಮೇಲೆ ಭಗವಂತನ ಕೃಪೆ ಇದೆ. ಅವರು ಜಾತ್ಯತೀತವಾಗಿ ದುಡಿದು ಸಮಾಜ ಸೇವೆ ಮಾಡಿದ್ದಾರೆ. ಅವರಿಗೆ ನಾವೆಲ್ಲಾ ಬೆಂಬಲ ಕೊಡೋಣ. ಅವರು ಮತ್ತೆ ರಾಜ್ಯದ ಮಂತ್ರಿಯಾಗುವುದನ್ನು ನೋಡಿ ಸಂತೋಷ ಪಡೋಣ. ಮುಂದೆ ಜಮೀರ್ ಮತ್ತು ಶಿವಲಿಂಗೇಗೌಡ ಇಬ್ಬರಿಗೂ ನಮ್ಮ ಮಠದಲ್ಲಿ ಸನ್ಮಾನ ಮಾಡೋಣ ಎಂದು ಜಮೀರ್ ಪರ ಸ್ವಾಮೀಜಿ ಬ್ಯಾಟ್ ಬೀಸಿದ್ದಾರೆ