Search


ತಾಳಿ, ಕುಂಕುಮ, ವ್ರತ ಎಂಬ ನಿಯಮಗಳು ಮಹಿಳೆಯರೇ ಪಾಲಿಸಬೇಕೆ, ಗಂಡಸರಿಗೆ ಇವೆಲ್ಲ ಅನ್ವಯವಾಗಲ್ವ ; ನಟಿ ನಮಿತಾ ಪ್ರಶ್ನೆ

ನಟಿ ನಮಿತಾ ಇತ್ತೀಚೆಗೆ ನೀಡಿರುವ ಸಂದರ್ಶನವೊಂದರಲ್ಲಿ ಭಾರತೀಯ ವಿವಾಹ ಸಂಪ್ರದಾಯಗಳು ಹಾಗೂ ಮಹಿಳೆಯರ ಮೇಲೆ ಸಮಾಜ ಹೇರಿರುವ ಕೆಲವು ಆಚರಣೆಗಳ ಬಗ್ಗೆ ತಮ್ಮದೇ ಆದ ವಿಭಿನ್ನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ವಿಶೇಷವಾಗಿ ವಿವಾಹದ ಬಳಿಕ ಮಹಿಳೆಯರೇ ತಾಳಿ ಧರಿಸಬೇಕು, ಬೊಟ್ಟು ಇಡಬೇಕು, ಗಂಡನ ದೀರ್ಘಾಯುಷ್ಯ ಹಾಗೂ ಕ್ಷೇಮಕ್ಕಾಗಿ ವರಮಹಾಲಕ್ಷ್ಮೀ ವ್ರತದಂತಹ ಉಪವಾಸಗಳನ್ನು ಆಚರಿಸಬೇಕು ಎಂಬ ಸಾಮಾಜಿಕ ನಿರೀಕ್ಷೆಯ ಬಗ್ಗೆ ಅವರು ಪ್ರಶ್ನೆ ಎತ್ತಿದ್ದಾರೆ. ಪುರುಷರಿಗೆ ಇದೇ ರೀತಿಯ ನಿಯಮಗಳು ಏಕೆ ಇಲ್ಲ ಎಂಬುದು ಅರ್ಥವಾಗುತ್ತಿಲ್ಲ ಎಂದು ಹೇಳಿರುವ ನಮಿತಾ, ವಿವಾಹದ ನಂತರ ಮಹಿಳೆಯರ ಮೇಲೆಯೇ ಹೆಚ್ಚಿನ ಜವಾಬ್ದಾರಿಗಳನ್ನು ಏಕೆ ಹೇರಲಾಗುತ್ತದೆ ಎಂಬ ವಿಚಾರವನ್ನು ಚರ್ಚಿಸಿದ್ದಾರೆ. ಅವರ ಈ ನೇರವಾದ ಪ್ರಶ್ನೆಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಗೆ ಕಾರಣವಾಗಿವೆ.

ಮಹಿಳೆಯರೇ ತಾಳಿ ಧರಿಸಬೇಕು, ಮಹಿಳೆಯರೇ ಬೊಟ್ಟು ಇಡಬೇಕು ಹಾಗೂ ಮದುವೆಯ ನಂತರ ಹಲವು ಸಂಪ್ರದಾಯಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಮಾಜ ಏಕೆ ನಿರೀಕ್ಷಿಸುತ್ತದೆ, ಪುರುಷರಿಗೆ ಇಲ್ಲದ ಕೆಲವು ನಿಯಮಗಳು ಮಹಿಳೆಯರಿಗೆ ಮಾತ್ರ ಅನ್ವಯವಾಗುತ್ತಿರುವುದು ಏಕೆ ಎಂಬುದು ತಮ್ಮ ಪ್ರಶ್ನೆ ಎಂದು ಅವರು ಹೇಳಿದ್ದಾರೆ. ಅದರಲ್ಲೂ ಗಂಡನ ಆರೋಗ್ಯ, ಸುರಕ್ಷತೆ ಹಾಗೂ ದೀರ್ಘಾಯುಷ್ಯಕ್ಕಾಗಿ ಮಹಿಳೆಯರು ಉಪವಾಸ ಮಾಡುವ ಸಂಪ್ರದಾಯದ ಕುರಿತು ಅವರು ವಿಶೇಷವಾಗಿ ಮಾತನಾಡಿದ್ದಾರೆ. “ನನ್ನ ಗಂಡ ಸುರಕ್ಷಿತವಾಗಿರಬೇಕು ಎಂದು ನಾನು ಉಪವಾಸ ಮಾಡುತ್ತೇನೆ. ಆದರೆ ಪತ್ನಿಯ ಕ್ಷೇಮಕ್ಕಾಗಿ ಗಂಡ ವರ್ಷದಲ್ಲಿ ಕನಿಷ್ಠ ಒಂದು ದಿನವಾದರೂ ಉಪವಾಸ ಮಾಡಬೇಕು ಎಂಬ ನಿಯಮ ಇದೆಯೇ?” ಎಂದು ಪ್ರಶ್ನಿಸಿರುವ ಅವರು, ಇಂತಹ ಆಚರಣೆಗಳು ಹೆಚ್ಚಾಗಿ ಮಹಿಳೆಯರ ಮೇಲೆಯೇ ಏಕೆ ಕೇಂದ್ರಿತವಾಗಿವೆ ಎಂಬುದನ್ನು ಚರ್ಚಿಸಿದ್ದಾರೆ.

ನಮಿತಾ ಅವರ ಪ್ರಕಾರ, ಇಂತಹ ಹಲವು ನಿಯಮಗಳು ಸಮಾಜದ ಮೂಲಕ ರೂಪುಗೊಂಡಿರುವ ಆಚರಣೆಗಳಾಗಿವೆ. ಮಹಿಳೆಯರು ಮಾತ್ರ ಕೆಲವು ನಿರ್ದಿಷ್ಟ ಸಂಪ್ರದಾಯಗಳನ್ನು ಪಾಲಿಸಬೇಕು, ಕುಟುಂಬದ ಪುರುಷರ ಕ್ಷೇಮಕ್ಕಾಗಿ ವ್ರತ ಮತ್ತು ಉಪವಾಸ ಮಾಡಬೇಕು ಎಂಬ ನಿರೀಕ್ಷೆ ಸಮಾಜದಲ್ಲಿ ಗಟ್ಟಿಯಾಗಿ ಬೆಳೆದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಪತ್ನಿಯರಿಗಾಗಿ ಗಂಡಂದಿರು ಇದೇ ರೀತಿಯ ಆಚರಣೆಗಳನ್ನು ಪಾಲಿಸುವ ಬಗ್ಗೆ ಏಕೆ ಹೆಚ್ಚು ಚರ್ಚೆಯಾಗುವುದಿಲ್ಲ ಎಂಬುದನ್ನು ಅವರು ಪ್ರಶ್ನಿಸಿದ್ದಾರೆ. ಇವೆಲ್ಲವೂ ಸಮಾಜವೇ ಸೃಷ್ಟಿಸಿಕೊಂಡಿರುವ ನಿಯಮಗಳು, ಯಾವುದೇ ಗ್ರಂಥಗಳಲ್ಲೂ ಇಂತಹ ನಿಯಮಗಳ ಬಗ್ಗೆ ಉಲ್ಲೇಖವಿಲ್ಲ ಎಂಬುದು ತಮ್ಮ ಅಭಿಪ್ರಾಯ ಎಂದು ನಮಿತಾ ಸಂದರ್ಶನದಲ್ಲಿ ಹೇಳಿದ್ದಾರೆ. ಅವರ ಹೇಳಿಕೆಗಳು ಹೊರಬಂದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ಜೋರಾಗಿದ್ದು, ಕೆಲವರು ಮಹಿಳೆಯರ ಮೇಲಿನ ಸಾಮಾಜಿಕ ನಿರೀಕ್ಷೆಗಳ ಕುರಿತು ಅವರು ಎತ್ತಿರುವ ಪ್ರಶ್ನೆಗಳನ್ನು ಬೆಂಬಲಿಸಿದರೆ, ಇನ್ನೂ ಕೆಲವರು ಭಾರತೀಯ ಸಂಪ್ರದಾಯಗಳಿಗೆ ತಮ್ಮದೇ ಆದ ಅರ್ಥ ಮತ್ತು ಮಹತ್ವವಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಕನ್ನಡ ಪ್ರೇಕ್ಷಕರಿಗೂ ಪರಿಚಿತರಾಗಿರುವ ನಮಿತಾ, ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ‘ನೀಲಕಂಠ’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪರಿಚಿತರಾದ ಅವರು, ಬಳಿಕ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ವಿಶೇಷವಾಗಿ ತಮಿಳು ಚಿತ್ರರಂಗದಲ್ಲಿ ನಮಿತಾ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ದೊರೆತಿದ್ದು, ಅಲ್ಲಿನ ಪ್ರೇಕ್ಷಕರಲ್ಲಿ ಅವರು ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. 2017ರಲ್ಲಿ ಉದ್ಯಮಿ ವೀರೇಂದ್ರ ಚೌಧರಿ ಅವರನ್ನು ವಿವಾಹವಾದ ನಮಿತಾ, ತಮ್ಮ ವೈಯಕ್ತಿಕ ಜೀವನದ ಹಲವು ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ತಮ್ಮ 41ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ತಾವು ಗರ್ಭಿಣಿಯಾಗಿರುವುದನ್ನು ಸಾಮಾಜಿಕ ಜಾಲತಾಣದ ಮೂಲಕ ಘೋಷಿಸಿದ್ದ ಅವರು, 2022ರ ಆಗಸ್ಟ್‌ನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು.

ಇನ್ನು ಸಿನಿಮಾರಂಗದ ವಿಚಾರಕ್ಕೆ ಬಂದರೆ, 2020ರಲ್ಲಿ ಬಿಡುಗಡೆಯಾದ ‘ಮಿಯಾ’ ಸಿನಿಮಾ ನಮಿತಾ ಅಭಿನಯದ ಕೊನೆಯ ಚಿತ್ರವಾಗಿದೆ. ಕಳೆದ ಕೆಲವು ವರ್ಷಗಳಿಂದ ಚಿತ್ರರಂಗದಿಂದ ದೂರವಿದ್ದರೂ, ಇದೀಗ ಮತ್ತೆ ಸಿನಿಮಾರಂಗಕ್ಕೆ ಮರಳುವ ಮೂಲಕ ತಮ್ಮ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ಸಿದ್ಧರಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇತ್ತೀಚಿನ ದಿನಗಳಲ್ಲಿ ವರ್ಕೌಟ್ ಹಾಗೂ ಫಿಟ್‌ನೆಸ್‌ಗೆ ಹೆಚ್ಚಿನ ಗಮನ ನೀಡುತ್ತಿರುವ ನಮಿತಾ, ತಮ್ಮ ಬದಲಾಗಿರುವ ಲುಕ್ ಹಾಗೂ ಇತ್ತೀಚಿನ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅವರು ನೀಡಿರುವ ವಿವಾಹ ಸಂಪ್ರದಾಯಗಳ ಕುರಿತ ಹೇಳಿಕೆಗಳು ವೈರಲ್ ಆಗಿದ್ದು, ಮಹಿಳೆಯರು ಮತ್ತು ಪುರುಷರಿಗೆ ಸಂಬಂಧಿಸಿದ ಸಾಮಾಜಿಕ ಆಚರಣೆಗಳಲ್ಲಿ ಸಮಾನತೆಯ ಅಗತ್ಯವಿದೆಯೇ ಎಂಬ ಚರ್ಚೆಯನ್ನೂ ಹುಟ್ಟುಹಾಕಿವೆ.

By Ravikumar - 13-09-2026


Ads in Post