ಮೈಸೂರು: 2028ರ ಚುನಾವಣಾ ಕಣ ಈಗಿನಿಂದಲೇ ರಂಗೇರುತ್ತಿದೆ, ಅದರಲ್ಲೂ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿ ವಿಚಾರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ನೀಡಿರುವ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಶಾಸಕ ಜಿ.ಟಿ ದೇವೇಗೌಡ ಮತ್ತು ಅವರ ಪುತ್ರ ಹರೀಶ್ ಗೌಡ ನಡುವೆ ಫೈಟ್ ನಡೆಯುವ ಸಾಧ್ಯತೆ ಇದೆ. ಅಪ್ಪ-ಮಗನ ನಡುವೆಯೇ ಕುಮಾರಸ್ವಾಮಿ ಹುಳಿ ಹಿಂಡಿದರ ಅನ್ನೋ ಪ್ರಶ್ನೆ ಕೂಡ ರಾಜಕೀಯ ವಲಯದಲ್ಲಿ ಕೇಳಿ ಬರಲಾರಂಭಿಸಿದೆ,
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ʻ2028ರ ವಿಧಾನಸಭೆ ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿ ನನ್ನ ಹಿಂದೆ, ಮುಂದೆಯೇ ಇರಬಹುದು. ನಮ್ಮಲ್ಲಿ ಅನೇಕರು ಸಮರ್ಥರಿದ್ದಾರೆ. ಯಾರೇ ಸ್ಪರ್ಧಿಸಿದರೂ ನನಗಾಗಿ ಜನರು ಗೆಲ್ಲಿಸುತ್ತಾರೆ ಎಂದು ಪ್ರತಿಕ್ರಿಯಿಸಿದರು. ಪರೋಕ್ಷವಾಗಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜಿ,ಟಿ ದೇವೇಗೌಡ ಪುತ್ರ ಹರೀಶ್ ಗೌಡ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದ ಟಿಕೆಟ್ ನೀಡುವುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ. ಆ ಮೂಲಕ ಅಪ್ಪನ ವಿರುದ್ಧವೇ ಮಗನನ್ನು ಎತ್ತಿ ಕಟ್ಟುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಪಕ್ಷಕ್ಕೆ ಬರುವವರಿಗೆ ಸ್ವಾಗತ..!
ಇನ್ನು ಜೆಡಿಎಸ್ ಪಕ್ಷವನ್ನ ಬಲಗೊಳಿಸುವ ಕುರಿತು ಮಾತನಾಡಿದ ಹೆಚ್ಡಿಕೆ ʻಪಕ್ಷ ಸೇರಲು ಅನೇಕರು ಮುಂದೆ ಬರುತ್ತಿದ್ದಾರೆ. ಕಾಂಗ್ರೆಸ್ನವರೂ ಸಂಪರ್ಕದಲ್ಲಿದ್ದಾರೆ. ಅನೇಕರನ್ನು ಕರೆತರುವ ಚಿಂತನೆ ಇದೆ. ಆದರೆ, ಎಲ್ಲರನ್ನೂ ಕರೆದುಕೊಳ್ಳುವುದಿಲ್ಲ. ಜೆಡಿಎಸ್ ಮುಗಿಸುತ್ತೇವೆ ಎಂದವರಿಗೆ ನಾವೂ ಉತ್ತರ ಕೊಡಬೇಕಲ್ಲವೇ? ಒಳ್ಳೆಯ ನಾಯಕರನ್ನು ಗುರುತಿಸಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ. ಅದೇ ರೀತಿ ಜನತಾ ಪರಿವಾರದ ಕೆಲ ನಾಯಕರು ಕೂಡ ವಾಪಸ್ ಬರುತ್ತಾರೆ ಎಂಬ ಚರ್ಚೆ ನಡೆಯುತ್ತಿದೆ. ಯಾರೇ ಬಂದರೂ ಪಕ್ಷಕ್ಕೆ ಒಳ್ಳೆಯದು ಆಗುವುದಿದ್ದರೆ ಸೇರಿಸಿಕೊಳ್ಳುತ್ತೇವೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
ಗಟ್ಟಿ ಮುಟ್ಟಾದ ಸರ್ಕಾರ ತರುವ ಅವಶ್ಯಕತೆಯಿದೆ ಎಂದಿದ್ದಾರೆ ಅದಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಕಚೇರಿ ಸಮೇತ ಜೆಡಿಎಸ್ ಮುಗಿಸುತ್ತೇನೆ, ಜೆಡಿಎಸ್ 12 ಶಾಸಕರನ್ನು ಕರೆದುಕೊಂಡು ಹೋಗ್ತೀನಿ, ಜೆಡಿಎಸ್ ನಿರ್ನಾಮ ಮಾಡುತ್ತೇನೆ ಎಂದು ಮಾನ್ಯ ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ನನಗೆನು ವಿಷಯ ತಿಳಿಯೋದಿಲ್ವಾ ಎಂದು ಪ್ರಶ್ನಿಸಿದ್ದಾರೆ. ಮಂದಿನ ಲೋಕಸಭೆ ಚುನಾವಣೆಯಲ್ಲಿ 20 ಕ್ಷೇತ್ರ ನನ್ನ ಟಾರ್ಗೆಟ್ ಎಂದು ಸಿಎಂ ಹೇಳಿದ್ದಾರೆ ಎಂದರು.