Search


ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದ ಕಟ್ಟಡ ಕುಸಿತ; ಕೂದಲೆಳೆ ಅಂತರದಲ್ಲಿ ಪಾರಾದ ಬಿಜೆಪಿ ಶಾಸಕ

ಉತ್ತರಪ್ರದೇಶ: ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ (ಎಡಿಎ) ಕಚೇರಿಯ ಮೆಟ್ಟಿಲು ಏಕಾಏಕಿ ಕುಸಿದ ಬಿದ್ದಿದೆ. ಇದರ ಪರಿಣಾಮ ಬಿಜೆಪಿ ಶಾಸಕ ವೇದ ಪ್ರಕಾಶ್ ಗುಪ್ತಾ ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಅಯೋಧ್ಯೆ ಇತ್ತೀಚಿಗೆ ಹುಂಡಿ ಹಣ ಕಳ್ಳತನದಿಂದ ದೇಶದೆಲ್ಲಡೆ ಸುದ್ದಿಯಲ್ಲಿದೆ. ಇದೀಗ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದ ಕಟ್ಟಡದ ಮೆಟ್ಟಿಲು ಕುಸಿತಗೊಂಡಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಶಾಸಕ ವೇದ ಪ್ರಕಾಶ್ ಗುಪ್ತಾ ಅವರು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಭೇಟಿ ನೀಡಿದ್ದ ವೇಳೆ ಈ ಘಟನೆ ಸಂಭವಿಸಿದೆ. ಪ್ರಾಧಿಕಾರದ ಸ್ವಂತ ಕಟ್ಟಡದಲ್ಲಿದ್ದ ಮೆಟ್ಟಿಲು ಏಕಾಏಕಿ ಕುಸಿದು ಬಿದ್ದ ಪರಿಣಾಮ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅಲ್ಲಿದ್ದವರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಘಟನೆಯಲ್ಲಿ ಶಾಸಕ ವೇದ ಪ್ರಕಾಶ್ ಗುಪ್ತಾ ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ. ಘಟನೆಯ ಬಳಿಕ ಸ್ಥಳದಲ್ಲಿದ್ದವರು ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ತೆರಳಿದರು. ಇದುವರೆಗೆ ಯಾವುದೇ ಗಂಭೀರ ಗಾಯಗಳ ಬಗ್ಗೆ ವರದಿಯಾಗಿಲ್ಲ. ಈ ಘಟನೆ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದ ಕಟ್ಟಡಗಳ ನಿರ್ಮಾಣದ ಗುಣಮಟ್ಟ ಮತ್ತು ನಿರ್ವಹಣೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಅಯೋಧ್ಯೆಯ ಅಭಿವೃದ್ಧಿ ಕಾಮಗಾರಿಗಳ ಮೇಲ್ವಿಚಾರಣೆ ಹೊತ್ತಿರುವ ಪ್ರಾಧಿಕಾರದ ಸ್ವಂತ ಕಟ್ಟಡದಲ್ಲೇ ಇಂತಹ ಘಟನೆ ಸಂಭವಿಸಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಘಟನೆಯ ಬಳಿಕ ಅಧಿಕಾರಿಗಳು ಕುಸಿದ ಭಾಗವನ್ನು ಪರಿಶೀಲಿಸಿದ್ದು, ಮೆಟ್ಟಿಲು ಕುಸಿತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಆರಂಭಿಸಿದ್ದಾರೆ.

ಕಳಪೆ ಕಾಮಗಾರಿ, ಕಟ್ಟಡದ ರಚನಾತ್ಮಕ ದೌರ್ಬಲ್ಯ ಅಥವಾ ನಿರ್ವಹಣೆಯ ಕೊರತೆಯಿಂದ ಈ ಅವಘಡ ಸಂಭವಿಸಿತೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಈ ಘಟನೆ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳ ನಿರ್ಮಾಣ ಗುಣಮಟ್ಟದ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳನ್ನು ಎಬ್ಬಿಸಿದ್ದು, ತನಿಖಾ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

By Ravikumar - 05-07-2026


Ads in Post