ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ (Karnataka BJP) ಒಳಜಗಳಕ್ಕೆ ಮದ್ದು ಹರಿಯಲು RSS ಮುಂದೆ ಬಂದಿದೆ. ನಿನ್ನೆ ನಡೆದ RSS ಮತ್ತು ಬಿಜೆಪಿ ಸಮನ್ವಯ ಸಮಿತಿಯಲ್ಲಿ, ಪಕ್ಷದೊಳಗಿನ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳಲು ಸಲಹೆ ನೀಡಲಾಗಿದೆ. ಈ ವೇಳೆ ಶಾಸಕ ಎಸ್.ಆರ್ ವಿಶ್ವನಾಥ್ ಮತ್ತು ಸಂಸದ ಸುಧಾಕರ್ ನಡುವೆ ಸಂಧಾನ ಮಾಡಿಸಿದ್ದು. ಇಬ್ಬರು ನಾಯಕರು ವೈಮನಸ್ಸು ಬಿಟ್ಟು ಕೈಕುಲುಕಿ ಒಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ನಿನ್ನೆ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪಕ್ಷದಲ್ಲಿ ಉಂಟಾಗಿರುವ ಒಡಕುಗಳ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಗಿದೆ. ಪಕ್ಷದ ಮುಖ್ಯ ಕಚೇರಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ರಾಜ್ಯ ಬಿಜೆಪಿ ಸಹ ಉಸ್ತುವಾರಿ ಸುಧಾಕರ ರೆಡ್ಡಿ ಸಮ್ಮುಖದಲ್ಲಿ ಸಂಧಾನ ಸಭೆ ನಡೆದಿದ್ದು, ಸಂಘ ಪರಿವಾರ ಆಕ್ರೋಶ ವ್ಯಕ್ತಪಡಿಸಿರುವ ಬಗ್ಗೆ ಸಭೆಯಲ್ಲಿ ಉಲ್ಲೇಖಿಸಿ ಇನ್ಮುಂದೆ ಬಹಿರಂಗ ಹೇಳಿಕೆ ನೀಡದಂತೆ ಸುಧಾಕರ್, ವಿಶ್ವನಾಥ್ ಹಾಗೂ ಸದಾನಂದಗೌಡ ಅವರಿಗೆ ತಾಕೀತು ಮಾಡಲಾಗಿದೆ. ಅಲ್ಲದೇ ಏನೇ ಸಮಸ್ಯೆಯಿದ್ದರು ನಾಯಕರ ಗಮನಕ್ಕೆ ತಂದು ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಲಾಗಿದೆ.
ಬಹಿರಂಗವಾಗಿ ಏಕವಚನದಲ್ಲಿ ಪರಸ್ಪರ ಬೈದಾಡಿಕೊಂಡು ಸವಾಲು ಹಾಕಿದ್ದ ಡಾ.ಕೆ.ಸುಧಾಕರ್ ಮತ್ತು S.R.ವಿಶ್ವನಾಥ್ ನಡುವೆ ನಡೆದ ಸಂಧಾನ ಸಭೆ ಸಕ್ಸಸ್ ಆಗಿದೆ. ಹಿರಿಯರ ಸಮ್ಮುಖದಲ್ಲಿ ಸಂಧಾನ ಆಗಿದ್ದು, ಜಟಾಪಟಿಯನ್ನ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ಪರಸ್ಪರ ಕಿತ್ತಾಡಿಕೊಳ್ಳೋದು ಇಬ್ಬರಿಗೂ ಶೋಭೆ ತರಲ್ಲ. ಪರಸ್ಪರ ಹೇಳಿಕೆಗಳನ್ನ ಕೊಡದಂತೆ ಇಬ್ಬರಿಗೂ ಸೂಚನೆ ನೀಡಲಾಗಿದೆ. ಹಿರಿಯರ ಮಾತಿಗೆ ಮನ್ನಣೆ ನೀಡಿದ ಇಬ್ಬರು ಸುಧಾಕರ್ ಹಾಗೂ ವಿಶ್ವನಾಥ್ ಪರಸ್ಪರ ಶೇಕ್ ಹ್ಯಾಂಡ್ ಮಾಡಿಕೊಂಡರು.