ದೇಶದ ಪ್ರತಿಷ್ಟಿತ ಸುದ್ದಿ ವಾಹಿನಿʻಆಜ್ ತಕ್ʼ (Aaj Tak) ಚಾನಲ್ನ ಹಿರಿಯ ನಿರೂಪಕಿ, ಅಂಜನಾ ಓಂ ಕಷ್ಯಪ್ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ನೀಟ್ ಪ್ರಶ್ನೆ ಪತ್ರಿಕೆ ವಿಷಯದ ಕುರಿತು ಮಾತನಾಡುವ ಸಂದರ್ಭದಲ್ಲಿ ಅಂಜನಾ ಅವರು, ಯೂಟ್ಯೂಬ್ ಶಿಕ್ಷಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಅವರ ಹೇಳಿಕೆಯನ್ನ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟಿಸಿದ್ದಾರೆ.
ಆಕ್ರೋಶಕ್ಕೆ ಕಾರಣವೇನು..!
ನಿರೂಪಕಿ ಅಂಜನಾ ಓಂ ಕಷ್ಯಪ್(Anjana Om Kashyap) ಅವರು ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆಯ ಕುರಿತು ಲೈವ್ ಡಿಬೇಟ್ ಕಾರ್ಯಕ್ರಮ ನಡೆಸುತ್ತಿದ್ದರು. ಈ ವೇಳೆ ಯೂಟ್ಯೂಬ್ ಶಿಕ್ಷಕರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು. ʻಯೂಟ್ಯೂಬ್ ಶಿಕ್ಷಕರು ಎರಡು ಕಾಸಿಗೆ ಯೋಗ್ಯತೆ ಇಲ್ಲದವರು, ಅವರಿಗೆ ಯಾವುದೇ ವಿಶ್ವಾಸಾರ್ಹತೆ ಇಲ್ಲ, ಕೇವಲ ವೀಕ್ಷಣೆ ಮತ್ತು ಫಾಲೋವರ್ಸ್ಗಳಿಗಾಗಿ ಇಂತಹ ವಿಡಿಯೋಗಳನ್ನ ಮಾಡುತ್ತಾರೆʼ ಎಂದು ಆರೋಪಿಸಿದ್ದರು.
ನಿರೂಪಕಿ ಅಂಜನಾ ಅವರ ಈ ಹೇಳಿಕೆಗೆ ವಿದ್ಯಾರ್ಥಿ ಮತ್ತು ಶಿಕ್ಷಕರ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ, ಇತ್ತೀಚಿನ ನೀಟ್ (NEET) ಮತ್ತು ಸಿಬಿಎಸ್ಇ (CBSE) ಪರೀಕ್ಷಾ ಹಗರಣಗಳ ಸಂದರ್ಭದಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳು ಮೌನವಾಗಿದ್ದಾಗ, ಈ ಯೂಟ್ಯೂಬ್ ಶಿಕ್ಷಕರೇ ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿದ್ದರು ಎಂದು ಜನರು ಸಾಮಾಜಿಕ ಜಾಲತಾಣಗಳಲ್ಲಿ ಆಜ್ ತಕ್ ವಾಹಿನಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಪ್ರತಿಷ್ಟಿತ ಯೂಟ್ಯೂಬ್ ಶಿಕ್ಷಕರಿಂದ ಆಕ್ರೋಶ..!
ಇನ್ನು ಖ್ಯಾತ ನಾಮ ಯೂಟ್ಯೂಬ್ ಶಿಕ್ಷಕರು ಅಂಜನಾ ಅವರಿಗೆ ಬೆವರಿಳಿಸುವ ಕೆಲಸ ಮಾಡಿದ್ದಾರೆ, ಖಾನ್ ಸರ್ ಎಂದೇ ಖ್ಯಾತಿಯಾಗಿರುವ ಫೈಸಲ್ ಖಾನ್ ಅವರು ವ್ಯಂಗ್ಯವಾಗಿ ತಿರುಗೇಟು ನೀಡಿದ್ದು ʻಯೂಟ್ಯೂಬ್ ಶಿಕ್ಷಕರು ದೇಶದ ಗ್ರಾಮೀಣ ಭಾಗದ ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ" ಎಂದು ನೆನಪಿಸಿದ್ದಾರೆ. ಅಲ್ಲದೆ, "ನಾವು ₹2000 ನೋಟಿನಲ್ಲಿ ಚಿಪ್ ಇರುತ್ತದೆ ಎಂಬಂತಹ ಸುಳ್ಳು ಸುದ್ದಿಗಳನ್ನು ಹರಡುವುದಿಲ್ಲ ಅಥವಾ ಅಧಿಕಾರದಲ್ಲಿ ಇರುವವರ ಬೂಟು ನೆಕ್ಕುವುದಿಲ್ಲ" ಎಂದು ಲೇವಡಿ ಮಾಡಿದ್ದಾರೆ.
ಜೊತೆಗೆ ಅಭಿನಯ್ ಶರ್ಮಾ (Abhinay Maths) ಮತ್ತು ನವದೀಪ್ ಸರ್ ಅವರಂತಹ ದೇಶದ ಟಾಪ್ ಡಿಜಿಟಲ್ ಶಿಕ್ಷಕರು ತಮ್ಮ ಯೂಟ್ಯೂಬ್ ಚಾನೆಲ್ಗಳ ಮೂಲಕವೇ ನಿರೂಪಕಿಗೆ ಬಹಿರಂಗ ಸವಾಲು ಹಾಕಿದ್ದಾರೆ. ಕಷ್ಟಪಟ್ಟು ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಶಿಕ್ಷಕರನ್ನು ಕೀಳಾಗಿ ಕಂಡ ಮಾಧ್ಯಮಗಳ "ಟಿಆರ್ಪಿ ರಾಜಕೀಯ" ಮತ್ತು "ಪೇಪರ್ ಲೀಕ್ ಹಗರಣಗಳ ದಬ್ಬಾಳಿಕೆ"ಯನ್ನು ಇವರು ತೀವ್ರವಾಗಿ ಖಂಡಿಸಿದ್ದಾರೆ.
ನಿರೂಪಕಿ ವಿರುದ್ದ ಪ್ರತಿಭಟನೆ..!
ಇನ್ನು ಇತ್ತೀಚೆಗೆ ಅಂಜನಾ ಕಷ್ಯಪ್ ಅವರು ಬಿಹಾರದ ಪಾಟ್ನಾಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಗುಂಪು ಘೇರಾವ್ ಹಾಕಿದ್ದು, "ಅಂಜನಾ, ಮೋದಿ ಮುರ್ದಾಬಾದ್" ಎಂದು ಘೋಷಣೆ ಕೂಗಿದ್ದಾರೆ, ಜೊತೆಗೆ ನಿರೂಪಕಿಗೆ ಬಹಿರಂಗವಾಗಿ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದು, ʻಆಜ್ ತಕ್" ಚಾನಲ್ ಅನ್ ಸಬ್ಸ್ಕ್ರೈಬ್ ಮಾಡುವಂತೆ ಕರೆ ಕೊಡಲಾಗಿದೆ, ಪ್ರಸ್ತುತ ಆಜ್ ತಕ್ ಚಾನಲ್ 75 ಮಿಲಿಯನ್ ಸಬ್ಸ್ಕ್ರೈಬರ್ಗಳನ್ನ ಹೊಂದಿದೆ.
ಈ ಪ್ರತಿಭಟನೆ ಮೇಲ್ನೋಟಕ್ಕೆ ನಿರೂಪಕಿ ಅಂಜನಾ ವಿರುದ್ದ ನಡೆಸುತ್ತಿರುವಂತೆ ಕಾಣಿಸಿದರು ಕೂಡ, ಯುವ ಸಮೂಹ ಪ್ರಸ್ತುತ ಮಾಧ್ಯಮಗಳ ಕಾರ್ಯವೈಖರಿಯಿಂದ ಬೇಸತ್ತಿರುವು ಸ್ಪಷ್ಟವಾಗುತ್ತಿದೆ. ಸದ್ಯ ಮಾಧ್ಯಮಗಳು ನೈಜ ಸುದ್ದಿಗಳಿಗಿಂತ ಹೆಚ್ಚಾಗಿ ಸಂವೇದನಶೀಲ ಮತ್ತು ವಿವಾದಾತ್ಮಕ ಸುದ್ದಿಗಳ ಪ್ರಸಾರಕ್ಕೆ ಆಧ್ಯತೆ ನೀಡುತ್ತಿದ್ದು, ಜನರ ಸಮಸ್ಯೆಗಳನ್ನ ಕಡೆಗಣಿಸುತ್ತಿದ್ದಾರೆ. ಇದರಿಂದಾಗಿ ಯುವಕರಲ್ಲಿ ಆಕ್ರೋಶ ಹೆಚ್ಚಾಗುತ್ತಿದ್ದು, ಈ ಆಕ್ರೋಶದ ಕಟ್ಟೆ ಹೊಡೆಯುವ ಮುನ್ನ ಎಲ್ಲಾ ಮಾಧ್ಯಮಗಳು ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.