Search


ಅನರ್ಹರನ್ನು ಯೋಜನೆಯಿಂದ ಹೊರಗಿಡುವ ಸಂಬಂಧ ಮುಖ್ಯಮಂತ್ರಿ DK Shivakumar ಅವರು ಕೆಲವು ಸೂಚನೆ

 

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪರಿಶೀಲನಾ ಸಭೆಯಲ್ಲಿ ಅರ್ಹ ಫಲಾನುಭವಿಗಳ ಹಿತಕಾಯುವ ಜೊತೆಗೆ ಅನರ್ಹರನ್ನು ಯೋಜನೆಯಿಂದ ಹೊರಗಿಡುವ ಸಂಬಂಧ ಮುಖ್ಯಮಂತ್ರಿ ಶ್ರೀ DK Shivakumar ಅವರು ಕೆಲವು ಸೂಚನೆಗಳನ್ನು ನೀಡಿದರು. ಅವುಗಳೆಂದರೆ;

* ಒಬ್ಬೇ ಒಬ್ಬ ಅರ್ಹ ಫಲಾನುಭವಿಗಳಿಗೆ ತೊಂದರೆ ಆಗಬಾರದು. ಅನರ್ಹ ಫಲಾನುಭವಿಗಳಿಂದ ಆಗುತ್ತಿರುವ ದುರುಪಯೋಗಕ್ಕೆ ಮಾತ್ರ ಬ್ರೇಕ್‌ ಹಾಕಬೇಕು.

* ಹಲವು ಫಲಾನುಭವಿಗಳು ಬ್ಯಾಂಕ್‌ ಸಾಲ ಪಡೆದಿರುತ್ತಾರೆ. ಸಾಲದ ಖಾತೆಗೆ ಗೃಹಲಕ್ಷ್ಮಿ ಹಣ ಹೋದ ತಕ್ಷಣ ಆ ಹಣ ಸಾಲದ ಮೊತ್ತಕ್ಕೆ ಜಮೆ ಆಗಿಬಿಡುತ್ತದೆ. ಆದ್ದರಿಂದ ಅಂತಹ ಫಲಾನುಭವಿಗಳು ಖಾತೆ ಬದಲಾಯಿಸಿರುತ್ತಾರೆ. ಇಂಥಾ ಫಲಾನುಭವಿಗಳಿಗೆ ತೊಂದರೆ ಆಗಬಾರದು.

* ಗೃಹಜ್ಯೋತಿ ಗ್ಯಾರಂಟಿ ಯೋಜನೆ ಜಾರಿ ಆಗುವಾಗ ಹೆಚ್ಚಿನ ದುರುಪಯೋಗ ಆಗದ ಹಾಗೆ ಎಚ್ಚರಿಕೆ ವಹಿಸಿದ್ದರು. ಇದೇ ಎಚ್ಚರಿಕೆ ಇತರೆ ಯೋಜನೆಗಳಲ್ಲೂ ಅನುಸರಿಸಿದ್ದರೆ ದುರುಪಯೋಗದ ಪ್ರಮಾಣ ಕಡಿಮೆ ಆಗುತ್ತಿತ್ತು.

* ಮೃತಪಟ್ಟಿರುವ ಫಲಾನುಭವಿಗಳಿಗೂ ಗೃಹಲಕ್ಷ್ಮಿ ಹಣ ಹೋಗುತ್ತಿರುವುದು ಪತ್ತೆಯಾಗಿದೆ. ಮುಂದೆ ಈ ರೀತಿ ದುರುಪಯೋಗ ಆಗಬಾರದು.

* ಗೃಹಲಕ್ಷ್ಮಿ ಹಣ ಫಲಾನುಭವಿಗಳ ಖಾತೆಗೆ ಜಮೆಯಾದ ತಕ್ಷಣ ಅವರ ಮೊಬೈಲಿಗೆ ವಾಯ್ಸ್‌ ಮೆಸ್ಸೇಜ್‌ ಮೂಲಕ ಖಚಿತಪಡಿಸಬೇಕು.

* ಏರ್‌ಟೆಲ್‌ ಆ್ಯಪ್ ಬ್ಯಾಂಕ್‌ನಲ್ಲಿ (ಏರ್ಟೆಲ್ ಸಿಮ್ ಬಳಕೆದಾರರಿಗೆ ಅವಕಾಶವಿರುವ ಖಾತೆ) ಯುಪಿಐ ಖಾತೆಗಳನ್ನು ತೆರೆದು ದುರುಪಯೋಗ ಮಾಡಿಕೊಳ್ಳುತ್ತಿದ್ದಲ್ಲಿ, ಅಂತಹ ಪ್ರಕರಣಗಳು ಪತ್ತೆ ಸೂಕ್ತ ಕ್ರಮ ವಹಿಸಬೇಕು.

* ಖಾತೆಗಳು ಕರ್ನಾಟಕ ರಾಜ್ಯದಲ್ಲಿ ಮಾತ್ರ ಇರಬೇಕು. ಇತರೆ ರಾಜ್ಯಗಳಲ್ಲಿರುವ ಖಾತೆಗಳಿಗೆ ಹಣ ಹೋಗುತ್ತಿರುವುದು ಪತ್ತೆಯಾಗಿದೆ. ಇವುಗಳಿಗೆ ತಡೆ ಹಾಕಬೇಕು.

* ನಮ್ಮ ರಾಜ್ಯದ ಯೋಜನೆಗಳು ನಮ್ಮ ರಾಜ್ಯದ ಫಲಾನುಭವಿಗಳಿಗೆ ಮಾತ್ರ ಸಿಗಬೇಕು. ಇತರೆ ರಾಜ್ಯದ ಮತದಾರರಿಗೆ ಯೋಜನೆಯ ಲಾಭ ಆಗುತ್ತಿದೆ. ಇದನ್ನು ತಡೆಯಬೇಕು.

* ಅನುಕೂಲಸ್ಥರು ಯಾರಾದರೂ ಗ್ಯಾರಂಟಿ ಯೋಜನೆಗಳನ್ನು ಸ್ವಯಂಪ್ರೇರಿತವಾಗಿ ಬಿಟ್ಟು ಕೊಡುವ ಮೂಲಕ ಇತರೆ ಅರ್ಹ ಫಲಾನುಭವವಿಗಳಿಗೆ ನೆರವಾಗಲು ಮುಂದಾದರೆ ಅಂಥವರನ್ನು ಪ್ರೋತ್ಸಾಹಿಸಬೇಕು.

* ಗೃಹಲಕ್ಷ್ಮಿ ಯೋಜನೆ ಜಾರಿಯಲ್ಲಿ ಕಂಡುಬರುತ್ತಿರುವ ಎರಡು ಪ್ರಮುಖ ತಾಂತ್ರಿಕ ಸಮಸ್ಯೆಗಳ ಬಗ್ಗೆ ಗಮನ ಹರಿಸಿ, ಆದಷ್ಟು ಬೇಗ ಪರಿಹರಿಸಬೇಕು.‌

* ಮರಣ ಹೊಂದಿದ ಫಲಾನುಭವಿಗಳ ಸಂಖ್ಯೆ ಸಕಾಲದಲ್ಲಿ ದೊರೆಯದಿರುವ ಬಗ್ಗೆ ಇ-ಕೆವೈಸಿ ಹಾಗೂ ಬ್ಯಾಂಕ್‌ ಖಾತೆ/ಎನ್‌.ಪಿ.ಸಿ.ಐ ನಿಷ್ಕ್ರಿಯವಾಗಿರುವ ಫಲಾನುಭವಿಗಳ ಕುರಿತು ಅಗತ್ಯ ಕ್ರಮ ವಹಿಸಬೇಕು.

* ಅಕೌಂಟೆಂಟ್ ಜನರಲ್‌ ವರದಿಯಲ್ಲಿ ಉಲ್ಲೇಖವಾಗಿರುವ ಈ ಕೆಳಗಿನ ಸಂಗತಿಗಳ ಕೂಡ ಅತ್ಯಂತ ಗಂಭೀರವಾಗಿವೆ.

* ಒಂದೇ ಖಾತೆಯಲ್ಲಿ ಹಲವು ಫಲಾನುಭವಿಗಳು ಗೃಹಲಕ್ಷ್ಮಿ ಹಣ ಪಡೆಯುತ್ತಿದ್ದಾರೆ. ಮೂರು ಲಕ್ಷ ಕಂತುಗಳಲ್ಲಿ ಒಟ್ಟು 60 ಕೋಟಿ ರೂಪಾಯಿ ಹಣ ಹೋಗಿದೆ ಎನ್ನುವ ಬಗ್ಗೆ ಎಜಿ ಅವರ ವರದಿ ಬಂದಿದೆ.

* ಒಬ್ಬರೇ ಹಲವು ಖಾತೆಗಳನ್ನು ನೋಂದಾಯಿಸಿರುವುದನ್ನು ಎಜಿ ವರದಿಯಲ್ಲಿ ಉಲ್ಲೇಖವಾಗಿದೆ. ಈ ರೀತಿಯಾದಂಥ ಯೋಜನೆಯ ದುರ್ಬಳಕೆಯನ್ನು ಆದಷ್ಟು ಶೀಘ್ರ ತಡೆಬೇಕು.

* ಶಕ್ತಿ ಯೋಜನೆಯಡಿ ಮೇ ಅಂತ್ಯದವರೆಗೆ ಮಹಿಳೆಯರು 763 ಕೋಟಿ ಬಾರಿ ಪ್ರಯಾಣ ಮಾಡಿದ್ದು, ಅವರಿಗೆ ವಿನಿಯೋಗಿಸಲಾದ ಟಿಕೆಟ್ ಮೌಲ್ಯ 20,047.69 ಕೋಟಿ ರೂಪಾಯಿಗಳು. ಇಷ್ಟು ದೊಡ್ಡ ಮಟ್ಟದಲ್ಲಿ ಯೋಜನೆ ಯಶಸ್ವಿಯಾಗಿರುವುದು ಸಂತಸದ ವಿಚಾರ.

* 2026-27ನೇ ಸಾಲಿಗೆ ಸಾಮಾನ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಎಲ್ಲರನ್ನೂ ಸೇರಿಸಿ 10 ಲಕ್ಷ ಉಚಿತ ಬಸ್ ಪಾಸ್ ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲು ಅಂದಾಜಿಸಲಾಗಿದೆ.

* ಗೃಹ ಜ್ಯೋತಿ ಯೋಜನೆಯಡಿ ಮೇ ಅಂತ್ಯದವರೆಗೆ 1.65 ಕೋಟಿ ಫಲಾನುಭವಿಗಳು ಯೋಜನೆಯ ಲಾಭ ಪಡೆದಿರುತ್ತಾರೆ.

* ಹೊರ ರಾಜ್ಯದಿಂದ ಇಲ್ಲಿಗೆ ಬಂದು ನೆಲೆಸಿ ಗೃಹ ಜ್ಯೋತಿ ಲಾಭ ಪಡೆಯುತ್ತಿರುವವರ ಮಾಹಿತಿ ಸಂಗ್ರಹಿಸಿ, ಕ್ರಮ‌ವಹಿಸಬೇಕು.

* ಮತಪಟ್ಟಿಯಲ್ಲಿ ಹೆಸರಿರುವ ಮತದಾರರು ಮಾತ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳಾಗಿರುತ್ತಾರೆ.

ಆದ್ದರಿಂದ ವಿಶೇಷ ಸಮಗ್ರ ಪರಿಷ್ಕರಣೆ ಸಂದರ್ಭದಲ್ಲಿ ಫಲಾನುಭವಿಗಳ ಹೆಸರು ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು.

* ಅನ್ನಭಾಗ್ಯ ಯೋಜನೆಯಡಿ 11,561 ಕೋಟಿ ರೂ.ಗಳನ್ನು ಡಿಬಿಟಿ ಮೂಲಕ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗಿದೆ. ಜುಲೈ-2023 ಯಿಂದ ಡಿಸೆಂಬರ್-2024ರ ವರೆಗೆ ಒಟ್ಟು 72,02,33,970 ಫಲಾನುಭವಿಗಳಿಗೆ ಒಟ್ಟು ರೂ. 11,561.05 ಕೋಟಿಗಳನ್ನು ಡಿಬಿಟಿ ಮೂಲಕ ವರ್ಗಾಯಿಸಲಾಗಿರುತ್ತದೆ.

* 2025ನೇ ಫೆಬ್ರವರಿ ತಿಂಗಳಿನಿಂದ ಇಲ್ಲಿಯವರೆಗೆ ಪ್ರಸ್ತುತರಾಜ್ಯದಲ್ಲಿರುವ ಒಟ್ಟು 4,44,67,942 ಫಲಾನುಭವಿಗಳಿಗೆ ಪ್ರತಿ ತಿಂಗಳು ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿಯಾಗಿ 5 ಕೆ.ಜಿ. ಅಕ್ಕಿಯನ್ನು ವಿತರಿಸಲಾಗುತ್ತಿದೆ. ಇದು ಸಹ ಒಂದು ಐತಿಹಾಸಿಕ ಸಾಧನೆ

* ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮ ಮಾರಾಟವಾಗುತ್ತಿರುವುದನ್ನು ನಿಗ್ರಹಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

ನಮ್ಮ ಗ್ಯಾರಂಟಿ ಯೋಜನೆಗಳು ಜನರ ಬದುಕಿಗೆ ಆಸರೆಯಾಗಬೇಕು ಎಂಬುದು ನಮ್ಮ ಸರ್ಕಾರದ ಒಟ್ಟಾರೆ ಆಶಯವಾದರೂ, ಅವುಗಳ ದುರ್ಬಳಕೆಯನ್ನು ತಪ್ಪಿಸುವುದು ಸಹ ನಮ್ಮ ಕರ್ತವ್ಯ ಎಂಬುದನ್ನು ಮರೆಯಬಾರದು.

By thebigbulletin.com - 22-06-2026


Ads in Post